ಮಾನವ ಗಗನಯಾನಕ್ಕೆ ಅಸ್ತು

ನವದೆಹಲಿ: ದೇಶದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯಾದ ಮಾನವಸಹಿತ ಗಗನಯಾನಕ್ಕೆ ಶುಕ್ರವಾರ ಕೇಂದ್ರ ಸಚಿವ ಸಂಪುಟ 10 ಸಾವಿರ ಕೋಟಿ ರೂ. ಅನುದಾನ ನೀಡಲು ಸಮ್ಮತಿಸಿದೆ. ಸಂಪೂರ್ಣ ದೇಶೀಯವಾಗಿ ನಿರ್ವಿುತ ನೌಕೆಯಲ್ಲಿ ಭಾರತದ ಮೂವರು ಗಗನಯಾತ್ರಿಕರು ಏಳು ದಿನಗಳವರೆಗೆ ಅಂತರಿಕ್ಷದಲ್ಲಿ ಪ್ರಯಾಣ ಮಾಡಲಿದ್ದಾರೆ. ಗಗನಯಾನ್ ಪ್ರಾಜೆಕ್ಟ್ ಎಂದು ಕರೆಯಲಾಗಿರುವ ಈ ಯೋಜನೆಗೆ 2022ರ ಗಡುವು ನಿಗದಿಪಡಿಸಲಾಗಿದೆ.

ಯೋಜನೆ ಯಶಸ್ವಿಯಾದಲ್ಲಿ ರಷ್ಯಾ, ಅಮೆರಿಕ, ಚೀನಾ ಬಳಿಕ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಇಸ್ರೋ ಮೂರು ಯಾತ್ರಿಕರನ್ನು ಏಳು ದಿನಗಳವರೆಗೆ ಅಂತರಿಕ್ಷಕ್ಕೆ ಕಳುಹಿಸಲಿದೆ. ಗಗನಯಾತ್ರಿಕರಿಗೆ 2-3 ವರ್ಷಗಳವರೆಗೆ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ವಿವಿಧ ರೀತಿಯ ತರಬೇತಿ ನೀಡಲಾಗುವುದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.

ಉಡಾವಣೆ ಹೀಗೆ

# ಗಗನಯಾತ್ರಿಕರನ್ನು ಹೊತ್ತ ಆರ್ಬಿಟಲ್ ಮಾಡ್ಯೂಲ್ (7 ಟನ್ ತೂಕ, 3.4 ಮೀ. ಸುತ್ತಳತೆ) ಇರುವ ಜಿಎಸ್​ಎಲ್​ವಿ ಎಂಕೆ-3 ರಾಕೆಟ್ ಶ್ರೀಹರಿಕೋಟಾದಿಂದ ಉಡಾವಣೆ.
# 16 ನಿಮಿಷದಲ್ಲಿ ಭೂಮಿಯ ಕೆಳ ಕಕ್ಷೆಯನ್ನು (300-400 ಕಿ.ಮೀ. ಎತ್ತರ) ಮಾಡ್ಯೂಲ್ ಸೇರಲಿದೆ.
# 5-7 ದಿನಗಳು ಬಾಹ್ಯಾಕಾಶದಲ್ಲಿ ಮಾಡ್ಯೂಲ್​ನಲ್ಲಿ ಕುಳಿತು ಗಗನಯಾತ್ರಿಕರಿಂದ ಅಧ್ಯಯನ.
# ಚಲನೆ ಪಥ ಬದಲಿಸಿ ಭೂಮಿ ಕಡೆಗೆ ಧಾವಿಸಲಿದೆ ಮಾಡ್ಯೂಲ್.
# ಭೂಮಿಯಿಂದ 120 ಕಿ.ಮೀ. ಎತ್ತರವಿದ್ದಾಗ ಮಾಡ್ಯೂಲ್​ನಿಂದ ಗಗನಯಾತ್ರಿಕರು ಪ್ಯಾರಾಚೂಟ್ ಮೂಲಕ ಜಿಗಿಯಲಿದ್ದಾರೆ.
# ಗುಜರಾತ್​ನ ಅರಬ್ಬಿ ಸಮುದ್ರದಲ್ಲಿ ಇಳಿಯಲಿರುವ ಯಾತ್ರಿಕರು. ಅವರನ್ನು ರಕ್ಷಿಸಲಿದೆ ಭದ್ರತಾ ಪಡೆ.

ಘೋಷಣೆ ಮಾಡಿದ್ದ ಪ್ರಧಾನಿ ಮೋದಿ

ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಭಾಷಣ ವೇಳೆ ಪ್ರಧಾನಿ ನರೇಂದ್ರ ಮೋದಿ ಯೋಜನೆ ಕುರಿತು ಘೋಷಣೆ ಮಾಡಿದ್ದರು. ‘ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ನಮ್ಮ ಕನಸು ನನಸಾಗಲಿದೆ. ಒಬ್ಬ ಮಹಿಳೆಯನ್ನು ಕೂಡ ಗಗನಯಾತ್ರಿಕರ ತಂಡದಲ್ಲಿ ಕಳುಹಿಸುವ ಉದ್ದೇಶವಿದೆ ’ಎಂದಿದ್ದರು.

ಬಾಹ್ಯಾಕಾಶಕ್ಕೆ ತೆರಳಲು ಹಾಕಿ ಕೊಳ್ಳುವ ಕವಚ ಸಿದ್ಧವಿದೆ. ಭಾರತೀಯ ವಾಯುಪಡೆ, ಇಸ್ರೋ ಜಂಟಿಯಾಗಿ ಗಗನಯಾತ್ರಿಕರನ್ನು ಆಯ್ಕೆ ಮಾಡಲಿವೆ. 2-3 ವರ್ಷ ಅವರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುವುದು. 1984ರಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಮೊದಲ ಭಾರತೀಯ ಯಾತ್ರಿ ರಾಕೇಶ್ ಶರ್ವರನ್ನು ಸಂರ್ಪಸಿದ್ದೇವೆ.

| ಹಿರಿಯ ಅಧಿಕಾರಿ ಬಾಹ್ಯಾಕಾಶ ಇಲಾಖೆ

ಗಗನಯಾನ ಯೋಜನೆಗೆ ಸಂಪುಟದಲ್ಲಿ ಅನುದಾನ ನೀಡಲು ಒಪ್ಪಿರುವುದು ಸಂತೋಷದ ವಿಚಾರ. ಇದೊಂದು ಮಹತ್ವಾಕಾಂಕ್ಷಿ ಮತ್ತು ಬೃಹತ್ ಪ್ರಯೋಗ. ಇದನ್ನು ಇಸ್ರೋ ಸವಾಲಾಗಿ ಸ್ವೀಕರಿಸಿದೆ. ಪ್ರಧಾನಿ ನೀಡಿರುವ 2022ರ ಡೆಡ್​ಲೈನ್ ಪಾಲಿಸುತ್ತೇವೆ. ಕಳೆದ 4 ತಿಂಗಳಿಂದ ಯೋಜನೆಗಾಗಿ ಶ್ರಮಿಸುತ್ತಿದ್ದೇವೆ. ಜನವರಿಗೆ ವಿನ್ಯಾಸ ಕಾರ್ಯ ಪೂರ್ಣಗೊಳ್ಳಲಿದೆ.

| ಕೆ.ಶಿವನ್ ಮುಖ್ಯಸ್ಥ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ