ಮತಗಟ್ಟೆಯೊಳಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್‌

ಹರಿದ್ವಾರ: ಮತದಾನ ಕೇಂದ್ರದೊಳಗಡೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಬಿಜೆಪಿ ನಾಯಕ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹರಿದ್ವಾರ ಮತ್ತು ನೈತಿನಾಲ್‌ನಲ್ಲಿ ಘಟನೆ ನಡೆದಿದ್ದು, ಹರಿದ್ವಾರದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಕಾಶ್‌ ತಿವಾರಿ ವಿರುದ್ಧ ಸೆಕ್ಷನ್‌ 128ನ ಜನಪ್ರತಿನಿಧಿ ಕಾಯ್ದೆ ಮತ್ತು ಸೆಕ್ಷನ್‌ 171ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜಸ್ಸಾರಾಮ್‌ ರಸ್ತೆಯ ಆನಂದಮಯಿ ಮುನಿಸಿಪಲ್‌ ಸ್ಕೂಲ್‌ನಲ್ಲಿ ತಮ್ಮ ಮತ ಚಲಾಯಿಸಿದ ಬಳಿಕ ತಿವಾರಿ ಮತಗಟ್ಟೆಯೊಳಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದರಿಂದಾಗಿ ಕೊಟ್ವಾಡಿ ಹರಿದ್ವಾರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಇನ್ಸ್‌ಪೆಕ್ಟರ್‌ ಅರವಿಂದ್‌ ಕೋಶಿಯಾರಿ ಮಾತನಾಡಿ, ಎರಡು ಬಾರಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು ಮತ್ತು ತನ್ನ ಫೋಟೊ ತೆಗೆಯುವಂತೆ ಇತರರಿಗೂ ಕೇಳಿದ್ದರು. ಇದು ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾಗಿತ್ತು. ಉನ್ನತ ಅಧಿಕಾರಿಗಳ ಆದೇಶದಂತೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದಲ್ಲದೆ ಮತ್ತೋರ್ವ ಬಿಜೆಪಿ ನಾಯಕ ರವಿ ಜೈಸಲ್‌, ಪಕ್ಷದ ಕಾರ್ಯಕರ್ತರಾದ ಕುಂಜ್‌ ಭಾಸಿನ್‌ ಮತ್ತು ಅಣ್ಣು ಕಕ್ಕಡ್‌ ಅವರು ಈ ಮೊದಲೇ ಎಚ್ಚರಿಕೆ ನೀಡಿದ್ದರೂ ಕೂಡ ಸೆಲ್ಫಿ ತೆಗೆದುಕೊಂಡು ಶೇರ್‌ ಮಾಡಿದ್ದರು. ಇದರಿಂದಾಗಿ ತನಿಖೆ ಕೈಗೊಂಡ ಬಳಿಕ ಅವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ. (ಏಜೆನ್ಸೀಸ್)