ತಾಜ್‌ ಮಹಲ್‌ ಪ್ರವೇಶ ಇನ್ಮುಂದೆ ದುಬಾರಿ, ಪ್ರವಾಸಿಗರಿಗೆ ಸಮಯ ನಿಗದಿ ಕೇವಲ 3 ಗಂಟೆ ಮಾತ್ರ!

ಆಗ್ರಾ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಇನ್ಮುಂದೆ ಕೊಂಚ ದುಬಾರಿಯಾಗಲಿದೆ. ತಾಜ್‌ಮಹಲ್‌ ನೋಡಲು ಬರುವ ಪ್ರವಾಸಿಗರು ಕೇವಲ ಮೂರು ಗಂಟೆಗಳ ಕಾಲ ಮಾತ್ರ ತಾಜ್‌ಮಹಲ್‌ನಲ್ಲಿರಲು ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚುವರಿ ಸಮಯ ಕಳೆದರೆ ಹೆಚ್ಚುವರಿ ದರ ನೀಡಬೇಕಾಗುತ್ತದೆ ಎಂದು ಸುತ್ತೋಲೆ ಹೊರಡಿಸಲಾಗಿದೆ.

ಪುರಾತತ್ತ್ವ ಶಾಸ್ತ್ರ ಇಲಾಖೆಯು ತಾಜ್ ಮಹಲ್ ಪ್ರವೇಶದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ತಾಜ್ ಮಹಲ್ ಪ್ರವೇಶಕ್ಕೆ ಸಮಯವನ್ನು ನಿಗದಿ ಮತ್ತು ಅನಧಿಕೃತ ಪ್ರವೇಶವನ್ನು ತಡೆಯಲು ಟರ್ನ್ ಸ್ಟೈಲ್ ಗೇಟ್‌ಗಳನ್ನು ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.

ಏಳು ಟರ್ನಸ್ಟೈಲ್‌ ಗೇಟ್‌ಗಳನ್ನು ಪೂರ್ವ ಮತ್ತು ಪಶ್ಚಿಮ ಪ್ರವೇಶ ದ್ವಾರಗಳಲ್ಲಿ ಅಳವಡಿಸಲಾಗುತ್ತದೆ. ಐದು ಗೇಟುಗಳು ನಿರ್ಗಮನ ದ್ವಾರದಲ್ಲಿವೆ. ವಿದೇಶಿ ಪ್ರವಾಸಿಗರಿಗೆಂದೇ ಪ್ರತ್ಯೇಕ ಗೇಟ್‌ ವ್ಯವಸ್ಥೆ ಮಾಡಲಾಗಿದೆ. ಮೂರು ಗಂಟೆಗಳ ಅವಧಿಯಿರುವ ಟೋಕನ್‌ಗಳನ್ನು ಹೊಂದಿದ್ದರೆ ಮಾತ್ರ ಒಳಗೆ ಪ್ರವೇಶವಿದೆ ಎಂದು ಪುರಾತತ್ತ್ವ ಇಲಾಖೆಯ ಸೂಪರಿಂಟೆಂಡೆಂಟ್‌ ಬಸಂತ್‌ ಕುಮಾರ್‌ ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯ ಪ್ರಕಾರ, ತಾಜ್ ಮಹಲ್ ಪ್ರವೇಶಿಸುವ ಪ್ರವಾಸಿಗಳು ಕೇವಲ ಮೂರು ಗಂಟೆಗಳು ಮಾತ್ರ ತಾಜ್ ಮಹಲ್ ಒಳಗೆ ಇರಲು ಅವಕಾಶವಿದೆ. ಒಂದುವೇಳೆ ಪ್ರವಾಸಿಗರು 3 ಗಂಟೆಗಿಂತ ಅಧಿಕ ಸಮಯವನ್ನು ತಾಜ್ ಮಹಲ್ ನಲ್ಲಿ ಕಳೆಯಬೇಕೆಂದಿದ್ದರೆ ಅದಕ್ಕಾಗಿ ಅವರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.

ಇದಕ್ಕೂ ಮುನ್ನ ಪ್ರವಾಸಿಗರು ಮುಂಜಾನೆಯಿಂದ ರಾತ್ರಿವರೆಗೂ ಅಂದರೆ ಸೂರ್ಯ ಹುಟ್ಟುವ ಅರ್ಧಗಂಟೆಗೂ ಮೊದಲು ಮತ್ತು ಸೂರ್ಯ ಮುಳುಗುವ ಅರ್ಧಗಂಟೆಗೂ ಮುನ್ನ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈ ಹೊಸ ನಿಯಮದಿಂದಾಗಿ ಪ್ರವಾಸಿಗರಿಗೆ ಭಾರಿ ಹೊಡೆತ ಬೀಳುತ್ತದೆ ಎಂದು ಹೇಳಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *