27ಕ್ಕೆ ದಶಾನನ ಸೇರಿ 3 ನಾಟಕ

ಬೆಂಗಳೂರು: ವಿಶ್ವ ರಂಗಭೂಮಿ ದಿನದ ಪ್ರಯುಕ್ತ ರಾಕೇಶ್ ರಾಜ್ ಕಲಾಟ್ರಸ್ಟ್ ಹಾಗೂ ರಂಗಬದುಕು ಟ್ರಸ್ಟ್ ಜಂಟಿಯಾಗಿ ಬುಧವಾರ (ಮಾ.27) ರವೀಂದ್ರ ಕಲಾಕ್ಷೇತ್ರದಲ್ಲಿ ದಶಾನನ, ನವರಂಗ ಮತ್ತು ದಮನ ನಾಟಕ ಪ್ರದರ್ಶನ ಏರ್ಪಡಿಸಿದ್ದು, ಮೂರು ವಿಶ್ವ ದಾಖಲೆ ನಿರ್ವಿುಸಲು ಮುಂದಾಗಿದೆ.

ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ನಡೆಯಲಿರುವ ಈ ನಾಟಕಗಳ ಪ್ರದರ್ಶನ ಮಧ್ಯಾಹ್ನ 3ಗಂಟೆಯಿಂದ ಆರಂಭವಾಗಲಿದೆ. ಡಾ.ಎಸ್.ಎಲ್.ಎನ್. ಸ್ವಾಮಿ ನಿರ್ದೇಶನದಲ್ಲಿ ಈ ನಾಟಕಗಳು ಪ್ರದರ್ಶನ ಕಾಣಲಿದ್ದು, ಏಕಕಾಲಕ್ಕೆ 3 ವಿಶ್ವ ದಾಖಲೆ ನಿರ್ವಣವಾಗಲಿದೆ. ‘ದಶಾನನ’ ಏಕವ್ಯಕ್ತಿ ನಾಟಕವಾಗಿದ್ದು, ರಾವಣನ ಪಾತ್ರವನ್ನು ಎನ್. ಚಂದನ್ ಕುಮಾರ್ ನಿರ್ವಹಿಸಲಿದ್ದಾರೆ. ಇದು ಕನ್ನಡ ರಂಗಭೂಮಿಯ ಸುದೀರ್ಘ ಏಕವ್ಯಕ್ತಿ ನಾಟಕ ಎಂದು ದಾಖಲೆ ಸೃಷ್ಟಿಸಲಿದೆ. ಅದೇ ರೀತಿ, ‘ನವರಂಗ’ ನಾಟಕ ಬಣ್ಣ- ಭಾವನೆ ಗಳೊಂದಿಗೆ ನವರಸಗಳ ಅಭಿವ್ಯಕ್ತಿ ಎನ್ನುವ ದಾಖಲೆ ನಿರ್ವಿುಸಲಿದೆ.

ಬಹು ಮಾಧ್ಯಮ ನಟಿಯ ರಾದವೀಣಾ ವೆಂಕಟೇಶ್, ಆಶಾರಾಣಿ ಹಾಗೂ ಹೆಲನ್ ಮೈಸೂರು ಪ್ರಸ್ತುತ ಪಡಿಸಲಿದ್ದಾರೆ. ಇದು 9 ಕಿರು ನಾಟಕಗಳ ಗುಚ್ಛಲಾಗಿದೆ. ಇನ್ನು 23 ಸೆಕೆಂಡುಗಳಲ್ಲಿ ಯಲಹಂಕದ ಎಸ್.ಬಿ. ಪ್ರದರ್ಶನ ಕಲಾವಿಭಾಗ ರಂಗಸ್ಥಳದ ವಿದ್ಯಾರ್ಥಿ ಗಳಿಂದ ‘ದಮನ’ ನಾಟಕ ಪ್ರದರ್ಶನ ಕಾಣಲಿದೆ. ಇದು ಪ್ರಪಂಚದ ಅತೀ ಚಿಕ್ಕ ನಾಟಕ ಎಂಬ ದಾಖಲೆ ಬರೆಯಲಿದೆ. 1999ರಲ್ಲಿ ಡಾ.ಎಸ್.ಎಲ್.ಎನ್. ಸ್ವಾಮಿ ಅವರೇ ರಚಿಸಿ, ನಿರ್ದೇಶಿಸಿದ್ದ ‘ಅಣು’ ನಾಟಕ 23 ಕ್ಷಣ (ಸೆಕೆಂಡ್ಸ್)ಗಳಲ್ಲಿ ಪ್ರದರ್ಶನ ಕಂಡು ಲಿಮ್ಕಾ ದಾಖಲೆ ಸೃಷ್ಟಿಸಿತ್ತು.

ವಿಶ್ವದಾಖಲೆಗೆ ಸಾಕ್ಷಿಯಾಗಲಿರುವ ಗಣ್ಯರು

ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​ನ ಅನುಮೋದನೆಯ 3 ವಿಶ್ವ ದಾಖಲೆಗೆ ನಾಡಿನ ಗಣ್ಯರು ಸಾಕ್ಷಿಯಾಗಲಿದ್ದಾರೆ. ಓಂಕಾರಾಶ್ರಮದ ಶ್ರೀ ಮಧುಸೂದನಾನಂದಪುರಿ ಸ್ವಾಮೀಜಿ, ಅದ್ವೈತ ವಾಚಸ್ಪತಿ ಡಾ. ಭಾನುಪ್ರಕಾಶ ಶರ್ವ, ವಿದ್ಯಾವಾಚಸ್ಪತಿ ಡಾ. ಅರಳು ಮಲ್ಲಿಗೆ ಪಾರ್ಥಸಾರಥಿ, ಖ್ಯಾತ ವಾಗ್ಮಿ ಪ್ರೊ.ಕೆ.ಪಿ. ಪುತ್ತೂರಾಯ, ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ, ನಟ ಯೋಗೀಶ್, ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿರಲಿದ್ದಾರೆ.