ಪ್ರಾರ್ಥನಾ ಮಂದಿರದ ಮೇಲೆ ಗ್ರೆನೇಡ್​ ದಾಳಿ; ಮೂವರು ಸಾವು, ಹತ್ತಕ್ಕೂ ಹೆಚ್ಚು ಜನರಿಗೆ ಗಾಯ

ಅಮೃತಸರ: ಪ್ರಾರ್ಥನಾ ಮಂದಿರದ ಮೇಲೆ ನಡೆದ ಗ್ರೆನೇಡ್​ ದಾಳಿಯಲ್ಲಿ ಮೂವರು ಮೃತಪಟ್ಟು, ಗಾಯಗೊಂಡ ಹತ್ತಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಸಾನ್ಸಿ ಗ್ರಾಮದಲ್ಲಿ ಭಾನುವಾರ ಈ ದುರ್ಘಟನೆ ನಡೆದಿದ್ದು, ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬೈಕ್​ನಲ್ಲಿ ಬಂದು ನಿರಾಂಕರಿ ಭವನಕ್ಕೆ ಗ್ರೆನೇಡ್​ಗಳನ್ನು ಎಸೆದು ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಮೃತಸರ ವಿಮಾನನಿಲ್ದಾಣದಿಂದ ಕೇವಲ 8 ಕಿ.ಮೀ ದೂರದಲ್ಲಿದ್ದ ಪ್ರಾರ್ಥನಾ ಮಂದಿರದಲ್ಲಿ ಈ ದುರ್ಘಟನೆ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಸುರಿಂದರ್​ ಪಾಲ್​ ಸಿಂಗ್​ ಪಾರ್ಮರ್​ ತಿಳಿಸಿದ್ದಾರೆ.
ಘಟನೆ ನಡೆದಾಗ ಸುಮಾರು 250 ಭಕ್ತರು ಪ್ರಾರ್ಥನಾ ಮಂದಿರದೊಳಗಿದ್ದರು. ಭಾನುವಾರವಾದ್ದರಿಂದ ಹೆಚ್ಚು ಜನ ಪ್ರಾರ್ಥನೆಗೆ ಬರುತ್ತಾರೆ ಎಂದರು.

ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಪ್ರತಿ ಮೃತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಧನ ಒದಗಿಸಿದ್ದು, ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವ ನೆರವು ನೀಡಿದ್ದಾರೆ. (ಏಜೆನ್ಸೀಸ್)