ಕೀರ್ತಿನಾರಾಯಣ ಸಿ. ಬೆಂಗಳೂರು
ನಕಲಿ ಇನ್ವಾಯ್್ಸ ಸೃಷ್ಟಿಸಿ ಕೋಟ್ಯಂತರ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚನೆಗಿಳಿದಿರುವ ಕಂಪನಿಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವ ಹಣಕಾಸು ಇಲಾಖೆ ಕಳೆದ ಮೂರು ವರ್ಷದಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 3.72 ಲಕ್ಷ ಕಂಪನಿಗಳ ನೋಂದಣಿಯನ್ನು ರದ್ದಗೊಳಿಸಿದೆ. ಇದೇ ಅವಧಿಯಲ್ಲಿ ದೇಶಾದ್ಯಂತ 48,58,264 ಸಂಸ್ಥೆಗಳ ಜಿಎಸ್ಟಿ ರದ್ದಾಗಿದೆ.
ರದ್ದಾಗಿರುವ ಬಹುತೇಕ ಕಂಪನಿಗಳು ಜಿಎಸ್ಟಿ ವಂಚಿಸಲೆಂದೇ ನಕಲಿ ದಾಖಲಾತಿ ಸೃಷ್ಟಿಸಿರುವ ವಿಚಾರ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಜಿಎಸ್ಟಿ ನೋಂದಣಿ ರದ್ದಾಗಿರುವ ಸಂಸ್ಥೆಗಳ ಪೈಕಿ ಬಹುತೇಕ ಸಂಸ್ಥೆಗಳು ತೆರಿಗೆ ವಂಚನೆಯಲ್ಲಿ ಭಾಗಿ ಯಾಗಿವೆ. ಯಾವುದೋ ಹೆಸರಲ್ಲಿ ಕಂಪನಿಗಳನ್ನು ನೋಂದಣಿ ಮಾಡಿ ಬಳಿಕ ಯಾವುದೇ ರೀತಿಯ ಸರಕುಗಳನ್ನು ಪೂರೈಸದೆ ನಕಲಿ ಇನ್ವಾಯ್್ಸಳನ್ನು ಸೃಷ್ಟಿಸಿವೆ. ಬಳಿಕ ಅವುಗಳನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆಯಲು ಬಳಸಿ ಸಿಕ್ಕಿಬಿದ್ದಿವೆ. ಅಂತಹ ಎಲ್ಲ ಕಂಪನಿಗಳ ರಿಜಿಸ್ಟ್ರೇಷನ್ ಅನ್ನು ಆರ್ಥಿಕ ಇಲಾಖೆ ರದ್ದು ಮಾಡಿದೆ.
2024ರಲ್ಲಿ ಜೂನ್ವರೆಗೆ ದೇಶಾದ್ಯಂತ 5.71 ಲಕ್ಷ ಜಿಎಸ್ಟಿ ನೋಂದಣಿ ರದ್ದಾಗಿದೆ. ಇದರಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಉತ್ತರಪ್ರದೇಶದಲ್ಲಿ ಅತಿಹೆಚ್ಚು 93,305 ಸಂಸ್ಥೆಗಳ ರಿಜಿಸ್ಟ್ರೇಷನ್ ರದ್ದಾಗಿದ್ದು, ನಂ.1 ಸ್ಥಾನದಲ್ಲಿದೆ. ಉಳಿದಂತೆ 2ನೇ ಸ್ಥಾನದಲ್ಲಿ ಮಹಾರಾಷ್ಟ್ರ (56,919) ಹಾಗೂ 3ನೇ ಸ್ಥಾನದಲ್ಲಿ ಗುಜರಾತ್ (50,298) ಇದೆ. 4ನೇ ಸ್ಥಾನದಲ್ಲಿರುವ ದೆಹಲಿಯಲ್ಲಿ 48,562 ಕಂಪನಿಗಳ ಜಿಎಸ್ಟಿ ಸರ್ಟಿಫಿಕೇಟ್ ರದ್ದಾಗಿದೆ. ಕರ್ನಾಟಕದಲ್ಲಿ 45,499 ನೋಂದಣಿ ಕ್ಯಾನ್ಸಲ್ ಮಾಡಲಾಗಿದೆ.
9 ತಿಂಗಳಲ್ಲಿ -ಠಿ;44 ಸಾವಿರ ಕೋಟಿ ವಂಚನೆ: 2023ರ ಮೇ ತಿಂಗಳಿನಿಂದ 2024ರ ಜನವರಿವರೆಗೆ 9 ತಿಂಗಳಲ್ಲೇ ದೇಶದಲ್ಲಿ 44,015 ಕೋಟಿ ರೂ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಂಚನೆಯಾಗಿದೆ. ಇದರಲ್ಲಿ 29,273 ಬೋಗಸ್ ಕಂಪನಿಗಳು ಎಂಬುದು ದೃಢಪಟ್ಟಿದೆ. ವಂಚನೆ, ಸುಳ್ಳು ಮಾಹಿತಿ ಸೇರಿ ಬೇರೆಬೇರೆ ಕಾರಣಗಳಿಗೆ 2021-22ರಿಂದ 2024ರ ಜೂನ್ ಅಂತ್ಯದವರೆಗೆ ಕರ್ನಾಟಕದಲ್ಲಿ 3.72 ಲಕ್ಷ ಸಂಸ್ಥೆಗಳ ಜಿಎಸ್ಟಿ ನೋಂದಣಿ ರದ್ದಾಗಿರುವ ವಿಚಾರ ಆರ್ಥಿಕ ಇಲಾಖೆ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. ಕೆಲ ಸಂಸ್ಥೆಗಳು ನೋಂದಣಿ ರದ್ದಾಗಿದ್ದರು ಕೂಡ ನವೀಕರಣ ಮಾಡಿಕೊಳ್ಳುವ ಬದಲು ಹೊಸದಾಗಿ ನೋಂದಣಿ ಮಾಡಿಸಿಕೊಂಡು ವಹಿವಾಟು ಮುಂದುವರಿಸಿವೆ. ಈ ಬಗ್ಗೆಯೂ ಗಮನಹರಿಸಲಾಗುತ್ತಿದೆ ಎಂದು ಜಿಎಸ್ಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೋಂದಣಿ ರದ್ದತಿ ಕಾರಣ
- ವಾರ್ಷಿಕ ತೆರಿಗೆ ಪಾವತಿಸುವಲ್ಲಿ ವಿಫಲ
- ವಂಚನೆ ಉದ್ದೇಶದಿಂದಲೇ ನೋಂದಣಿ
- ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ
- ಆದಾಯವಿಲ್ಲದೆ ಬೇರೆ ಸಂಸ್ಥೆ ಜತೆ ವಿಲೀನ
- ಕಂಪನಿಯ ಮಾಲೀಕರು ಮೃತಪಟ್ಟಿರುವುದು
- ಕಾನೂನು ನಿಬಂಧನೆಗಳ ಉಲ್ಲಂಘನೆ
- ವ್ಯಾಪಾರ ವಹಿವಾಟಿನಲ್ಲಿ ಬದಲಾವಣೆ
- ಅನಧಿಕೃತ ಬ್ಯಾಂಕ್ ಖಾತೆ ಕೊಟ್ಟಿರುವುದು
ಸಿಕ್ಕಿಬಿದ್ದಿದ್ದು ಹೇಗೆ?
- ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್್ಸ ಮಂಡಳಿ ಪರಿಶೀಲನೆ
- ನಕಲಿ ಇನ್ವಾಯ್್ಸ ಸೃಷ್ಟಿಸಿ, ಇನ್ಪುಟ್ ಕ್ರೆಡಿಟ್ ಟ್ಯಾಕ್ಸ್ ಪಡೆದಿರುವುದರ ಮೇಲೆ ಗಮನ – ಮಾಸಿಕ 3ಬಿ ಫಾಮ್ರ್ ಸಲ್ಲಿಸಬೇಕು, ಸತತ 6 ತಿಂಗಳ ಕಾಲ ಸಲ್ಲಿಸದವರನ್ನು ಪತ್ತೆಹಚ್ಚಿ ಪರಿಶೀಲನೆ
- ಆಧಾರ್ ಹಾಗೂ ಪ್ಯಾನ್ಕಾರ್ಡ್ ಪಡೆದು ಬೋಗಸ್ ಕಂಪನಿಗಳ ಹೆಸರಲ್ಲಿ ಜಿಎಸ್ಟಿ ನೋಂದಣಿ – ರಿಟರ್ನ್ಸ್ ಸಲ್ಲಿಸದಿದ್ದಾಗ ನೋಂದಣಿ ಅಮಾನತುಗೊಳಿಸುವುದು, ನಂತರ ರದ್ದುಪಡಿಸುವುದು
ವಿಜಯವಾಣಿ ಓದಿ ಕಾರು ಗೆಲ್ಲಿ . . . ನ.15ರಿಂದ ನ.30ರವರೆಗೆ ಈ ವಿಳಾಸಕ್ಕೆ ಕೂಪನ್ ತಲುಪಿಸಿ