ಮಹಾಕುಂಭನಗರ: ಮಕರ ಸಂಕ್ರಾಂತಿ ಪ್ರಯುಕ್ತ ಮಹಾಕುಂಭ ಮೇಳದಲ್ಲಿ ಸಾಧು, ಸಂತರು ಮೊದಲ ಅಮೃತ ಸ್ನಾನದಲ್ಲಿ ಪಾಲ್ಗೊಂಡಿದ್ದರು. ಮೇಳದ ಎರಡನೇ ದಿನ 3.5 ಕೋಟಿ ಭಕ್ತರು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ.
ಮೊದಲ ಅಮೃತ ಸ್ನಾನ (ಶಾಹಿ ಸ್ನಾನ)ದಲ್ಲಿ ಬಹುತೇಕ ಎಲ್ಲಾ ಅಖಾಡಗಳ ಸಾಧುಗಳು ಪಾಲ್ಗೊಂಡಿದ್ದರು. ಪ್ರತಿಯೊಂದು ಅಖಾಡದ ಸಾಧುಗಳು ಅವರ ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಶ್ರೀ ಪಂಚಾಯತಿ ಅಖಾಡ ಎಂ ಮಹಾನಿರ್ವಾಣಿ ಮತ್ತು ಶ್ರೀ ಶಂಭು ಪಂಚಾಯತಿ ಅಟಲ್ ಅಖಾಡದ ಸಾಧುಗಳು ಬೆಳಗಿನ ಜಾವ ಮೂರು ಗಂಟೆಗೆ ಆರಂಭವಾದ ಬ್ರಹ್ಮ ಮುಹೂರ್ತದಲ್ಲಿ ಅಮೃತ ಸ್ನಾನ ಮಾಡಿದರು. ಒಟ್ಟು 13 ಅಖಾಡಗಳು ಅಮೃತ ಸ್ನಾನದಲ್ಲಿ ಪಾಲ್ಗೊಂಡಿದ್ದವು. ಮಹಾಕುಂಭದ ಮೊದಲ ದಿನ 1.75 ಕೋಟಿ ಮತ್ತು ಎರಡನೇ ದಿನ 3.5 ಕೋಟಿ ಸೇರಿ ಒಟ್ಟು 5.25 ಕೋಟಿ ಜನರು ಎರಡು ದಿನದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. 35 ಮಹಾಮಂಡಲೇಶ್ವರರು ಮತ್ತು ನಿರಂಜನಿ ಅಖಾಡದ ಸಾವಿರಾರು ನಾಗಾ ಸಾಧುಗಳು ಅಮೃತ ಸ್ನಾನದಲ್ಲಿ ಪಾಲ್ಗೊಂಡಿದ್ದರು ಎಂದು ನಿರಂಜನಿ ಅಖಾಡದ ಮಹಾಂತ ರವೀಂದ್ರ ಪುರಿ ಮಾಹಿತಿ ನೀಡಿದ್ದಾರೆ.
ಭಕ್ತರ ಮೇಲೆ ಪುಷ್ಪವೃಷ್ಟಿ: ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿರುವ ಭಕ್ತರ ಮೇಲೆ ಉತ್ತರ ಪ್ರದೇಶ ಸರ್ಕಾರ ಹೆಲಿಕಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸೂಚನೆಯಂತೆ ತೋಟಗಾರಿಕೆ ಇಲಾಖೆ ಕಳೆದ ಒಂದು ವಾರದಿಂದ ಹೂವುಗಳನ್ನು ಸಂಗ್ರಹಿಸಿ ಅಮೃತಸ್ನಾನ ಮಾಡುವ ಭಕ್ತರ ಮೇಲೆ ಪ್ರತಿ ದಿನ 20 ಕ್ವಿಂಟಾಲ್ ಗುಲಾಬಿ ಹೂವಿನ ದಳಗಳಿಂದ ಪುಷ್ಪವೃಷ್ಟಿ ಮಾಡಲಾಗಿದೆ. ಸೋಮವಾರ ಮತ್ತು ಮಂಗಳವಾರ 40 ಕ್ವಿಂಟಾಲ್ ಹೂವನ್ನು ಬಳಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ವಾರ್ ರೂಂ ಸ್ಥಾಪನೆ: ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ದೇಶದ ಎಲ್ಲಾ ಭಾಗಗಳಿಂದ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂಭ ಮೇಳದ ವಿಶೇಷ ರೈಲುಗಳ ಸಂಚಾರದ ಮೇಲೆ ನಿಗಾ ಇರಿಸಲು ದೆಹಲಿಯ ರೈಲ್ವೆ ಭವನದಲ್ಲಿ ವಾರ್ ರೂಂ ಸ್ಥಾಪಿಸಲಾಗಿದೆ. ಇಲ್ಲಿ 2 ಡಜನ್ಗೂ ಹೆಚ್ಚಿನ ರೈಲು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ದಿನದ 24 ಗಂಟೆಯೂ ವಿಶೇಷ ರೈಲುಗಳ ಸಂಚಾರದ ಮೇಲ್ವಿಚಾರಣೆ ನಡೆಸಲಿದ್ದಾರೆ.
ಸಾಧುಗಳ ಶ್ಲಾಘನೆ: ಮಹಾಕುಂಭ ಮೇಳ ವನ್ನು ಅಚ್ಚುಕಟ್ಟಾಗಿ ಆಯೋಜಿ ಸಿರುವ ಉತ್ತರ ಪ್ರದೇಶ ಸರ್ಕಾರವನ್ನು ಸಾಧು ಸಂತರು ಶ್ಲಾಘಿಸಿದ್ದಾರೆ. ಸರ್ಕಾರ 144 ವರ್ಷದ ಬಳಿಕ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಸ್ವಚ್ಛವಾಗಿ, ಯೋಜಿತವಾಗಿ ಆಯೋಜಿಸಿದೆ. ಕೋಟ್ಯಂತರ ಭಕ್ತರನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಸಾಧುಗಳು ತಿಳಿಸಿದ್ದಾರೆ.
ಲಾರೆನ್ಗೆ ಅಲರ್ಜಿ: ಆಪಲ್ ಕಂಪನಿಯ ಮಾಜಿ ಸಿಇಒ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ಅವರಿಗೆ ಮಹಾಕುಂಭದ ಅಮೃತ ಸ್ನಾನದ ಸಂದರ್ಭದಲ್ಲಿ ಅಲರ್ಜಿ ಉಂಟಾಗಿದೆ. ಹೀಗಾಗಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಗೌತಮ್ ಗಂಭೀರ್ ಬಳಿಕ ಸಂಕಷ್ಟದಲ್ಲಿ ಸಹಾಯಕ ಸಿಬ್ಬಂದಿ; BCCI ನಿರ್ಧಾರದ ಕುರಿತು ಹಿರಿಯ ಅಧಿಕಾರಿಯ ಹೇಳಿಕೆ ವೈರಲ್