3 ದಿನದ ನಂತರ ನಾಲ್ವರು ಪವಾಡ ಸದೃಶ ಪಾರು!

ಧಾರವಾಡ: ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ 72 ಗಂಟೆಗಳ ಕಾಲ ನೀರು, ಆಹಾರ, ಬೆಳಕು ಇಲ್ಲದೇ ಕುಟುಕು ಜೀವ ಹಿಡಿದುಕೊಂಡಿದ್ದ ನಾಲ್ವರನ್ನು ರಕ್ಷಣಾ ಪಡೆ ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಕುಮಾರೇಶ್ವರನಗರದ ದುರಂತ ಕಟ್ಟಡದ ಅವಶೇಷಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಶುಕ್ರವಾರವೂ ಕಾರ್ಯಾಚರಣೆ ನಡೆದಿದ್ದು, ಒಂದು ಮೃತದೇಹ ಪತ್ತೆಯಾಗಿದೆ. ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಸುಬ್ಬಪ್ಪ ಪದ್ಮಪ್ಪ ದಿಂಡಲಕೊಪ್ಪ (63) ಎಂಬುವರ ಮೃತದೇಹ ಹೊರತೆಗೆಯಲಾಯಿತು. ಮಾಜಿ ಸೈನಿಕ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದ ಇವರು ಬನಶ್ರೀನಗರದ ನಿವಾಸಿಯಾಗಿದ್ದರು. ಕಟ್ಟಡದಲ್ಲಿ ಮಳಿಗೆ ಖರೀದಿಸಿ ವ್ಯಾಪಾರ ಮಾಡುತ್ತಿದ್ದರು. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದಂತಾಗಿದೆ.

ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ 5 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದಿತ್ತು. ಹಲವರು ಕಾಣೆಯಾಗಿರುವ ಪಟ್ಟಿ ಹಿಡಿದು ಕಾರ್ಯಾಚರಣೆ ನಡೆಸುತ್ತಿದ್ದ ರಕ್ಷಣಾ ಪಡೆ, ಶುಕ್ರವಾರ ಬೆಳಗ್ಗೆಯೂ ಮುಂದುವರಿಸಿತು.

ಜೆಡಿಎಸ್​ನ ಮಾಜಿ ಕಾಪೋರೇಟರ್ ಕಚೇರಿಯಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಗನಗೌಡ ಪರಮೇಶ್ವರ ರಾಮನಗೌಡರ (24) ಎಂಬಾತನನ್ನು ಮೊದಲು ರಕ್ಷಿಸಲಾಯಿತು.

ಕಟ್ಟಡ ಕುಸಿದಾಗ ಕಚೇರಿಯಲ್ಲಿದ್ದ ಈತನಿಗೆ ಭೂಕಂಪದ ಅನುಭವವಾಗಿದೆ. ಅವಶೇಷಗಳ ಸಂದಿಯಲ್ಲಿ ಸಿಲುಕಿದ್ದ. 5 ಅಂತಸ್ತಿನ ಅವಶೇಷ ಬಿದ್ದರೂ ಸಣ್ಣ ಕಿಂಡಿಯಲ್ಲಿ ಬರುತ್ತಿದ್ದ ಗಾಳಿ ಸೇವಿಸುತ್ತ 3 ದಿನ ಜೀವ ಹಿಡಿದಿದ್ದ. 2 ದಿನಗಳ ನಂತರ ಜೆಸಿಬಿಗಳ ಸದ್ದು, ಮೇಲೆ ಇದ್ದವರ ಧ್ವನಿ ಕೇಳಿಸಿ, ತನ್ನನ್ನು ರಕ್ಷಿಸಲಿದ್ದಾರೆ ಎಂದು ಭರವಸೆ ತಂದುಕೊಂಡು ಜೀವಂತವಿದ್ದ. ಜೆಸಿಬಿಗಳಿಂದ ಅವಶೇಷ ತೆಗೆದಾಗ ಕಾಪಾಡಿ ಎಂದು ಚೀರಾಡಿದ. ಕೂಡಲೇ ಕಾರ್ಯಾಚರಣೆಗಿಳಿದ ಎಸ್​ಡಿಆರ್​ಎಫ್ ಪಡೆಗೆ ಅಡ್ಡ ಬಂದ ಗೋಡೆ ತೆಗೆಯುವುದು ಅಸಾಧ್ಯವಾಗಿತ್ತು. ಸಂಗನಗೌಡನಿಗೆ ನೀರು, ಆಕ್ಸಿಜನ್ ವ್ಯವಸ್ಥೆ ಮಾಡಿ ಆತನಿಗೇ ಹಾರೆ ಕೊಟ್ಟು ಗೋಡೆ ಒಡೆಸಿ ಹೊರತೆಗೆದಿದ್ದಾರೆ. 3 ದಿನ ನೀರು, ಆಹಾರವಿಲ್ಲದೇ ನಿತ್ರಾಣಗೊಂಡರೂ ನಡೆದುಕೊಂಡೇ ಆಂಬುಲೆನ್ಸ್ ಏರಿದ್ದು ಅಚ್ಚರಿಯ ಸಂಗತಿ.

ಮೊದಲು ಪತ್ನಿಯನ್ನು ತೆಗೆಯಿರಿ

ಕಾರ್ಯಾಚರಣೆ ಮುಂದುವರಿಸಿದ ಪಡೆಗೆ ದಿಲೀಪ್ (ದಾಕ್ಲು) ಹಾಗೂ ಸಂಗೀತಾ ಕೋಕರೆ ದಂಪತಿಯ ಕೂಗಾಟ ಕೇಳಿತು. ಕಟ್ಟಡ ಕಾರ್ವಿುಕರಾಗಿರುವ ಅವರಿಬ್ಬರನ್ನೂ ಹೊರತೆಗೆಯಲು ಮುಂದಾದಾಗ ದೊಡ್ಡ ಪಿಲ್ಲರ್ ಅಡ್ಡಬಂದಿತ್ತು. ಸಂಗೀತಾಳ ಕಾಲ ಮೇಲೆ ಅವಶೇಷ ಬಿದ್ದು ಗಾಯಗೊಂಡಿದ್ದಳು. ಹೇಗೋ ಜೀವ ಹಿಡಿದಿದ್ದ ಇಬ್ಬರನ್ನೂ ರಕ್ಷಿಸಲು ಮುಂದಾದಾಗ ‘ಮೊದಲು ನನ್ನ ಪತ್ನಿಯನ್ನು ಹೊರತೆಗೆಯುವವರೆಗೆ ನಾನು ಹೊರಬರುವುದಿಲ್ಲ’ ಎಂದು ದಿಲೀಪ್ ಗೋಗರೆದಿದ್ದಾನೆ. ಪಿಲ್ಲರ್ ಕತ್ತರಿಸಲು ಆತನ ಕೈಗೆ ಹಾರೆ, ಇತರ ಸಾಮಗ್ರಿ ಕೊಟ್ಟ ರಕ್ಷಣಾ ಪಡೆ ಕಾರ್ಯಾಚರಣೆ ನಡೆಸಿತು. 3 ದಿನಗಳಿಂದ ನಿತ್ರಾಣಗೊಂಡಿದ್ದರೂ ಪತ್ನಿ ಹಾಗೂ ತನ್ನ ರಕ್ಷಣೆಗೆ ತಾನೇ ಹಾರೆ ಹಿಡಿದು ಪಿಲ್ಲರ್ ಒಡೆದಿದ್ದಾನೆ. ರಕ್ಷಣಾ ಪಡೆಯ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿ ಮೊದಲು ಪತ್ನಿಯನ್ನು ರಕ್ಷಿಸಿ ಹೊರಕಳುಹಿಸಿದ. ಬಳಿಕ ತಾನೂ ಹೊರಬಂದು ಎರಡೂ ಕೈ ಎತ್ತಿ ನಮಸ್ಕರಿಸಿದ.

ಹೊರಬಂದಳು ಹೊನ್ನಮ್ಮ

ದಂಪತಿಯ ರಕ್ಷಣೆ ಬಳಿಕ ಅವರಿಂದ ಮಾಹಿತಿ ಪಡೆದ ರಕ್ಷಣಾ ಪಡೆ ಬಳ್ಳಾರಿ ಮೂಲದ ಕಟ್ಟಡ ಕಾರ್ವಿುಕ ಮಹಿಳೆ ಹೊನ್ನಮ್ಮ ಮಾರುತಿ ಕಮಸೋಳೆ (45) ಎಂಬಾಕೆಯನ್ನು 3 ಗಂಟೆ ಕಾಲ ಸುರಂಗ ಕೊರೆದು, ಹೊರಗೆ ಕರೆದುಕೊಂಡು ಬಂದಿದೆ.

ಚಪ್ಪಾಳೆಯ ಅಭಿನಂದನೆ

3 ದಿನ ಕಳೆದಿದ್ದರಿಂದ ಕಟ್ಟಡದ ಅವಶೇಷಗಳಡಿ ಸಿಲುಕಿದ್ದವರು ಬದುಕಿರುವ ಸಾಧ್ಯತೆ ಕ್ಷೀಣಗೊಂಡಿತ್ತು. ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಸಿದ ಎಸ್​ಡಿಆರ್​ಎಫ್ ಪಡೆ ಸುರಂಗ ಕೊರೆದು ಪ್ರಾಣದ ಹಂಗು ತೊರೆದು ಮನುಷ್ಯರ ಇರುವಿಕೆಯನ್ನು ಪತ್ತೆ ಹಚ್ಚಿದರು. ದುರ್ಗಮ ಸುರಂಗದಲ್ಲಿ ಒಬ್ಬೊಬ್ಬರಾಗಿ 5-6 ಸಿಬ್ಬಂದಿ ಒಳಪ್ರವೇಶಿಸಿ ಜನರನ್ನು ಹೊರತಂದರು. ಕುತೂಹಲದಿಂದ ನೋಡುತ್ತಿದ್ದ ನೂರಾರು ಜನ ಸಿಬ್ಬಂದಿಯ ಕಾರ್ಯ ಮೆಚ್ಚಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.