3 ದಿನದೊಳಗೇ ಇ-ಖಾತೆ ಅರ್ಜಿ ವಿಲೇವಾರಿಯಾಗಲಿ

ರಾಮನಗರ: ಇ-ಖಾತೆ ನೀಡಲು ರೈತರನ್ನು ಸುಮ್ಮನೆ ಕಚೇರಿಗೆ ಅಲೆಸಿ ಕಿರಿಕಿರಿ ಉಂಟುಮಾಡುವ ಪ್ರವೃತ್ತಿಯನ್ನು ಅಧಿಕಾರಿಗಳು ಬಿಡಬೇಕು ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೂಟಗಲ್ ಮತ್ತು ಬಿಡದಿ ಹೋಬಳಿ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಇ- ಖಾತೆಗಾಗಿ ಪ್ರತಿದಿನ 2 ಅಥವಾ 3 ಅರ್ಜಿ ಬರಬಹುದು. ದಾಖಲೆಗಳನ್ನು ಪರಿಶೀಲಿಸಿ ಅಂದೇ ವಿಲೇವಾರಿ ಮಾಡುವ ಪ್ರಯತ್ನ ಮಾಡಿ. ಮೂರು ದಿನದ ಮೇಲೆ ಯಾವುದೇ ಅರ್ಜಿಯನ್ನು ಕಚೇರಿಯಲ್ಲಿ ಉಳಿಸಿಕೊಳ್ಳಬಾರದು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬರದಂತೆ ಕೆಲಸ ಮಾಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬುಗೆ ಸೂಚಿಸಿದರು.

ಇದೇ ವೇಳೆ ಭೂ ದಾಖಲೆಗಳ ಸಂಬಂಧ ರೈತರು ಹಾಗೂ ಸಾಮಾನ್ಯ ನಾಗರಿಕರಿಂದ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಂಜುನಾಥ್, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಸೇರಿ ಬಹುತೇಕ ಕಂದಾಯ ಅಧಿಕಾರಿಗಳು ಲ್ಯಾಂಡ್ ಡೆವಲಪರ್ ಕೆಲಸಗಳನ್ನು ಮಾತ್ರ ತುರ್ತಾಗಿ ಮಾಡಿಕೊಟ್ಟು, ರೈತರು ಮತ್ತು ಜನಸಾಮಾನ್ಯರ ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಿದ್ದೀರಿ, ಇದು ಹೀಗೆ ಮುಂದುವರಿದರೆ ಲೋಕಾಯುಕ್ತಕ್ಕೆ ದೂರು ಬರೆದು, ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಎ.ಮಂಜು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ವರದಿ ಸಲ್ಲಿಸಿ, ಇಲ್ಲ ಶಿಸ್ತುಕ್ರಮ ಎದುರಿಸಿ: ಸಾಗುವಳಿ ಜಮೀನು ಸಂಬಂಧ ನಮೂನೆ 50, 53 ಪ್ರಕಾರ ಬಂದಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ. ಉಳಿಕೆ ಅರ್ಜಿಗಳ ಬಗ್ಗೆ ವರದಿ ನೀಡಿ ಎಂದು ತಹಸೀಲ್ದಾರ್ ರಾಜು ಅವರಿಗೆ ಶಾಸಕರು ಸೂಚನೆ ನೀಡಿದರು.

ಅಭಿವೃದ್ಧಿ ದೃಷ್ಟಿಯಿಂದ ಯಾವುದಾದರೂ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹೋದರೆ ಜಮೀನು ಇಲ್ಲ ಎನ್ನುವ ಮಾತು ಕೇಳಿ ಬರುತ್ತವೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಸರ್ಕಾರಿ ಜಮೀನು, ಗೋಮಾಳ ಲಭ್ಯವಿದೆಯೋ ಅವುಗಳ ಪೂರ್ಣ ಮಾಹಿತಿ ನೀಡಿ. ಮುಂದಿನ 15 ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸಲೇಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಮಂಜುನಾಥ್ ಎಚ್ಚರಿಸಿದರು.

ಬೈರಮಂಗಲ, ಶ್ಯಾನುಭೋಗನಹಳ್ಳಿ, ಮಂಚನಾಯಕನಹಳ್ಳಿ ಸೇರಿ ಒಟ್ಟು 4 ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕ ಮಾಡಲು ತಲಾ 15 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ತುರ್ತಾಗಿ ಸ್ಥಳ ಗುರುತಿಸಿ. ಅನುದಾನ ಸದ್ಬಳಕೆ ಮಾಡಿ ಎಂದು ತಿಳಿಸಿದರು.

ಹೋಬಳಿಯಲ್ಲಿ ಜನ ಸಂಪರ್ಕಸಭೆ: ಇನ್ನು ಮುಂದೆ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಮಂಗಳವಾರ ತಾಲೂಕು ಕಚೇರಿಯಲ್ಲಿ ನಡೆಯುತ್ತಿದ್ದ ಜನ ಸಂಪರ್ಕ ಸಭೆಯನ್ನು ತಿಂಗಳ ಮೂರನೇ ಮಂಗಳವಾರ ಕೂಟಗಲ್ ಹಾಗೂ ಜುಲೈ ಮೊದಲ ಮಂಗಳವಾರ ಬೈರಮಂಗಲದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಅಧಿಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಕ್ಯಾಸಾಪುರ ಶಾಲೆಗೆ ರಸ್ತೆ: ಕ್ಯಾಸಾಪುರ ಸರ್ಕಾರಿ ಪ್ರೌಢಶಾಲೆಗೆ ರಸ್ತೆ ಸಂಪರ್ಕ ಇಲ್ಲ. ಊರಿನ ಮುಖಂಡರು ರಸ್ತೆಗೆ ಜಾಗ ಬಿಟ್ಟುಕೊಡಲು ಮಾತುಕತೆ ನಡೆಸಿದ್ದಾರೆ. ಅವರೊಂದಿಗೆ ಮಾತನಾಡಿ, ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಿ. ನಂತರ ಶಾಸಕರ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡಿಸಿಕೊಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು, ಸದಸ್ಯ ಪ್ರಕಾಶ್, ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್ ರಾಜು, ಇಓ ಬಾಬು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಓ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *