3 ದಿನದಿಂದ ನೀರು ಪೂರೈಕೆ ಸ್ಥಗಿತ!

ಗೋಕರ್ಣ: ಗೋಕರ್ಣ ಸೇರಿ ಏಳು ಪಂಚಾಯಿತಿಗಳಿಗೆ ಅಂಕೋಲಾ ತಾಲೂಕಿನ ಮರಾಕಲ್ ಗ್ರಾಮದಿಂದ ಗೋಕರ್ಣ ಬೃಹತ್ ಕುಡಿಯುವ ನೀರು ಯೋಜನೆಯಡಿ ಪೂರೈಸಲಾಗುತ್ತಿದ್ದ ನೀರನ್ನು ಕಳೆದ ಮೂರು ದಿನದಿಂದ ಸ್ಥಗಿತಗೊಳಿಸಲಾಗಿದೆ. ಗಂಗಾವಳಿ ನದಿ ಬತ್ತಿರುವುದರಿಂದ ನೀರಿನ ಪ್ರಮಾಣ ಕಡಿಮೆ ಆಗಿದೆ. ಇದರಿಂದಾಗಿ ಸಾಕಷ್ಟು ಅಲ್ಲದೆ ಹೋದರೂ ತಕ್ಕಮಟ್ಟಿಗಾದರೂ ನೀರು ಪಡೆಯುತ್ತಿದ್ದ ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಿರಾರು ಜನರು ತೀವ್ರ ನೀರಿನ ಬರ ಎದುರಿಸುವಂತಾಗಿದೆ.

ಅಶ್ರಯದಾತೆ ಗಂಗಾವಳಿ: ಇಲ್ಲಿನ ನಾಡುಮಾಸ್ಕೇರಿ, ಹಿರೇಗುತ್ತಿ, ತೊರ್ಕೆ, ಹನೇಹಳ್ಳಿ, ಗೋಕರ್ಣ ಮುಂತಾದ 17 ಹಳ್ಳಿಗಳ ಜನರಿಗೆ ಗಂಗಾವಳಿ ನದಿಯೇ ಆಶ್ರಯದಾತೆ. ಈ ಭಾಗದಲ್ಲಿ ಹೆಚ್ಚಿನ ಬಾವಿಗಳು ಡಿಸೆಂಬರ್ ಮುಗಿಯುತ್ತಿದ್ದಂತೆ ಬತ್ತುತ್ತವೆ. ಇನ್ನು, ಗಜನಿ ಭೂಮಿಗೆ ಹೊಂದಿಕೊಂಡಿರುವ ಹಿರೇಗುತ್ತಿ, ತೊರ್ಕೆ, ಹೊಸ್ಕಟ್ಟ, ತೊರೆಗಜನಿ ಮುಂತಾದ ಕಡೆಗಳಲ್ಲಿ ಬಾವಿಯ ನೀರು ಉಪ್ಪಾಗಿ ಕುಡಿಯಲು ಬಾರದಾಗುತ್ತವೆ. ಕಳೆದ ಎರಡು ವರ್ಷದಿಂದ ದಿನಕ್ಕೆ ಮುಕ್ಕಾಲು ಗಂಟೆ ಪೂರೈಸುತ್ತಿದ್ದ ಮರಾಕಲ್ ಯೋಜನೆಯ ಗಂಗಾವಳಿ ನದಿ ನೀರು ಬಿಟ್ಟರೆ ಈ ಗ್ರಾಮಗಳಿಗೆ ಬೇರೆ ನೀರಿನ ಮೂಲವಿಲ್ಲ.

ಹನೇಹಳ್ಳಿ ಗ್ರಾಪಂನ ಕಡಮೆ, ತಿಪ್ಪಸಗಿ, ಜನತಾ ಕಾಲನಿಗಳಲ್ಲಿ ಬೇಸಿಗೆಯಲ್ಲಿ ಹುಡುಕಿದರೂ ತೊಟ್ಟು ನೀರಿರುವ ಬಾವಿಯನ್ನು ಕಾಣಲು ಸಾಧ್ಯವಿಲ್ಲ. ಇಲ್ಲಿನ ಮರಾಕಲ್ ಯೋಜನೆಯ ನೀರು ಇನ್ನೂ ತಲುಪಿಲ್ಲ. ಹೀಗಾಗಿ, ಸರ್ಕಾರ ನೀಡುವ ಟ್ಯಾಂಕರ್ ನೀರನ್ನು ನಂಬಿ ಜನ ಬದುಕಿದ್ದಾರೆ. ಈ ವರ್ಷ ತಾಲೂಕು ಆಡಳಿತವು ಪ್ರತಿ ಮನೆಗೆ ಕುಡಿಯಲು ಐದು ಕೊಡ ನೀರು ಒದಗಿಸುತ್ತಿರುವುದು ಗ್ರಾಮಸ್ಥರನ್ನು ಹೆಚ್ಚಿನ ಚಿಂತೆಗೆ ಸಿಲುಕಿಸಿದೆ.

ಇರುವುದು ಎರಡೇ ಬಾವಿ: ಪ್ರವಾಸೋದ್ಯಮದ ಪ್ರಮುಖ ತಾಣವಾದ ಗೋಕರ್ಣ ಪಂಚಾಯಿತಿಯ ಏಳು ಕಿ.ಮೀ. ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರಾ ಚಿಂತಾಜನಕವಾಗಿದೆ. ಗೋಕರ್ಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ 30 ವರ್ಷಗಳ ಹಿಂದೆ ಹೇಗಿತ್ತೋ ಇವತ್ತಿಗೂ ಹಾಗೇ ಇದೆ. ಗೋಕರ್ಣಕ್ಕಾಗಿಯೇ 20 ವರ್ಷಗಳ ಹಿಂದೆ ಆರಂಭಿಸಲಾದ ಗಂಗಾವಳಿ ನದಿ ನೀರಿನ ಮರಾಕಲ್ ಯೋಜನೆ ನೀರು ಗೋಕರ್ಣದ ಶೇ. 99 ಭಾಗವನ್ನು ಇಂದಿಗೂ ಮುಟ್ಟಿಲ್ಲ.

ಪ್ರವಾಸೋದ್ಯಮ ಉದ್ಧಾರ ಮಾಡುವುದಾಗಿ ಭಾಷಣ ಮಾಡುವ ಜನಪ್ರತಿನಿಧಿಗಳ ನಿರ್ಲಕ್ಷ್ಯ್ಕೆ ಇಲ್ಲಿನ ಜೀವಜಲದ ವ್ಯವಸ್ಥೆ ಸಾಕ್ಷಿಯಾಗಿದೆ. ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಓಂ, ಕುಡ್ಲೆ ಸಮುದ್ರ ತೀರಗಳಲ್ಲಿ ಈತನಕವೂ ಸಾರ್ವಜನಿಕವಾದ ಒಂದೇಒಂದು ನೀರಿನ ವ್ಯವಸ್ಥೆ ಇಲ್ಲ. ಮೂರು ದಶಕಗಳಲ್ಲಿ ಬಂದು ಹೋದ ಶಾಸಕರು 1999ರಲ್ಲಿ ಪ್ರಾರಂಭವಾದ ರಾಜೀವ್ ಗಾಂಧಿ ಬೃಹತ್ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತರಲು ವಿಫಲರಾಗಿದ್ದಾರೆ. ಗೋಕರ್ಣದ ಗುಡ್ಡದ ಮೇಲಿರುವ ನವಗ್ರಾಮವನ್ನು ಬಿಟ್ಟರೆ ಉಳಿದ ಕಡೆಗಳಿಗೆ ಮರಾಕಲ್ ನೀರು ಇನ್ನೂ ತಲುಪುವ ಏರ್ಪಾಟು ಮಾಡಿಲ್ಲ. ಏಳು ಕಿ.ಮೀ. ವ್ಯಾಪ್ತಿಯಲ್ಲಿ ಪಂಚಾಯಿತಿಗೆ ನೀರು ಒದಗಿಸಲು ಇರುವುದು ಎರಡೇ ಬಾವಿ. ಅದರಲ್ಲಿ ಭಂಡಿಕೇರಿಯ ಬಾವಿಯಲ್ಲಿ ನೀರು ತೀರಾ ಕಡಿಮೆಯಾಗಿದ್ದರಿಂದ ಮೇಲಿರುವ ಟ್ಯಾಂಕಿಗೆ ನೀರಿಲ್ಲದಂತಾಗಿದೆ. ಇನ್ನೊಂದು ಬಿಜ್ಜೂರು ಬಾವಿಯಿಂದ 48 ಚಿಕ್ಕ ಟ್ಯಾಂಕರ್​ಗಳಿಗೆ ನೀರು ಕೊಡುತ್ತಿರುವುದನ್ನು ಬಿಟ್ಟರೆ ಸಮಗ್ರ ಗೋಕರ್ಣ ಭಾಗಕ್ಕೆ ಕುಡಿಯುವ ನೀರಿನ ಅನ್ಯ ಸರ್ಕಾರಿ ವ್ಯವಸ್ಥೆ ಇಲ್ಲವಾಗಿದೆ. ಜಲಮೂಲದ ಸಮುದ್ರ, ರಥ ಬೀದಿ ಮತ್ತು ಕೋಟಿತೀರ್ಥ ಪ್ರದೇಶಗಳ ಎಲ್ಲ ಬಾವಿಗಳೂ ಆರಿ ನಿಂತಿವೆ. ಸರ್ಕಾರದಿಂದ ನೀರು ಬಾರದೇ ನಿತ್ಯ ದುಡ್ಡು ಕೊಟ್ಟು ಖರೀದಿಸು ವಂತಾಗಿದೆ.

ದಿನಕ್ಕೆ 30 ಸಾವಿರ ಲೀ.: ಸದ್ಯ ತಾಲೂಕು ಆಡಳಿತವು ಗೋಕರ್ಣಕ್ಕೆ 24 ಸಾವಿರ ಲೀಟರ್ ಸಾಮರ್ಥ್ಯದ ಒಂದು ಮತ್ತು ಎರಡು ಸಾವಿರ ಲೀ. ಸಾಮಥ್ಯದ ಮೂರು ಟ್ಯಾಂಕರ್ ನೀರನ್ನು ನೀಡುತ್ತಿದೆ. ಇದರ ಹೊರತಾಗಿ ಉಳಿದ 6 ಪಂಚಾಯಿತಿಗಳಿಗೆ ನಿತ್ಯ ಒಂದೊಂದು ಟ್ಯಾಂಕರ್ ನೀರು ಬರುತ್ತಿದೆ. ಗಂಗಾವಳಿ ನೀರು ಸಿಗದ ಕಾರಣ ಟ್ಯಾಂಕರ್ ಸಂಖ್ಯೆಯನ್ನು ಹೆಚ್ಚಿಸಲು ಜನರಿಂದ ಆಗ್ರಹ ಕೇಳಿಬರುತ್ತಿದೆ.

ಈ ಭಾಗದ ಎಲ್ಲ ಗ್ರಾಪಂ ಮತ್ತು ಗೋಕರ್ಣ ಪಟ್ಟಣದಲ್ಲಿನ ಕುಡಿಯುವ ನೀರಿನ ತುಟಾಗ್ರತೆ ಬಗ್ಗೆ ತಹಸೀಲ್ದಾರರು ಸೇರಿ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಶನಿವಾರ ಸಮೀಕ್ಷೆ ಮಾಡಿದ್ದಾರೆ. ಈ ಭಾಗದ ನೀರಿನ ಸಮಸ್ಯೆ ಮತ್ತು ಗಂಗಾವಳಿ ಯೋಜನೆಯಡಿ ನೀರು ಪೂರೈಕೆ ನಿಂತಿರುವುದರಿಂದ ಉಂಟಾದ ಹೆಚ್ಚಿನ ತೊಂದರೆ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಆದಷ್ಟು ಬೇಗ ಕುಡಿಯುವ ನೀರಿನ ಅಭಾವ ನೀಗಿಸಲು ಪ್ರಯತ್ನಿಸಲಾಗುವುದು.| ರಾಘವೇಂದ್ರ ನಾಯ್ಕ ಜಿಪಂ ನೀರು ಮತ್ತು ನೈರ್ಮಲ್ಯ ಅಧಿಕಾರಿ

ಗಂಗಾವಳಿ ನದಿಯಿಂದ ಮರಾಕಲ್ ಯೋಜನೆ ಮೂಲಕ ಬರುತ್ತಿದ್ದ ನೀರು ಸಂಪೂರ್ಣ ನಿಂತಿದೆ. ಇದರಿಂದ ಈ ಬೇಸಿಗೆಯಲ್ಲಿ ಈ ಭಾಗದ ಎಲ್ಲ ಗ್ರಾಪಂ ಜನರು ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಣ ತಾಲೂಕು ಆಡಳಿತ ವಿಳಂಬ ಮಾಡದೆ ಈಗಿರುವ ಟ್ಯಾಂಕರ್ ಪೂರೈಕೆಯನ್ನು ಇನ್ನೂ ಹೆಚ್ಚಿಸುವ ಅಗತ್ಯವಿದೆ.
| ಪ್ರದೀಪ ನಾಯಕ ಜಿಲ್ಲಾ ಪಂಚಾಯಿತಿ ಸದಸ್ಯರು