3 ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಹಸಿರು ನಿಶಾನೆ

ಶಿವಮೊಗ್ಗ: ಶಿವಮೊಗ್ಗ, ನೆರೆಯ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಪ್ರವಾಸೋದ್ಯಮ ಇಲಾಖೆ ಹಸಿರು ನಿಶಾನೆ ತೋರಿದೆ. ಮೊದಲ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪದ ಲಯನ್ ಸಫಾರಿ, ಚಂದ್ರಗುತ್ತಿ ಹಾಗೂ ಅಕ್ಕಮಹಾದೇವಿಯ ಜನ್ಮಸ್ಥಳ ಶಿಕಾರಿಪುರ ತಾಲೂಕಿನ ಉಡುಗಣಿಗೆ ಕಾಯಕಲ್ಪ ಸಿಗಲಿದೆ. ಇದರೊಂದಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ.

ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಮಾಸ್ಟರ್ ಪ್ಲ್ಯಾನ್​ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ ಜಿಲ್ಲೆಗೆ 20 ಕೋಟಿ ರೂ. ಮಂಜೂರಾಗಿದೆ. ಈ ಅನುದಾನದಲ್ಲಿ ಗುಜರಾತ್​ನ ಅಕ್ಷರಧಾಮ ಮಾದರಿಯಲ್ಲಿ ಉಡುಗಣಿಯನ್ನು ಅಭಿವೃದ್ಧಿಪಡಿಸಲು 13 ಕೋಟಿ ರೂ. ಹಾಗೂ ಚಂದ್ರಗುತ್ತಿಯ ಅಭಿವೃದ್ಧಿಗೆ 3 ಕೋಟಿ ರೂ. ಮೀಸಲಿರಿಸಲಾಗಿದೆ.

ಮೂರು ಜಿಲ್ಲೆಗಳ ವ್ಯಾಪ್ತಿ: ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಗೆ ಸೀಮಿತಗೊಳಿಸಿ ಪ್ರವಾಸೋದ್ಯಮ ಅಭಿವೃದ್ಧಿಯ ಮಾಸ್ಟರ್ ಪ್ಲ್ಯಾನ್ ರಚಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕನಿಷ್ಠ 3 ಜಿಲ್ಲೆಗಳಿಗೆ ಸಂಬಂಧಿಸಿ ಯೋಜನೆ ಸಿದ್ಧಪಡಿಸಲು ತಿಳಿಸಿತ್ತು. ಅದರಂತೆ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗದ ಪ್ರವಾಸಿ ತಾಣ ಗುರುತಿಸಿ ಅವುಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಮೊದಲ ಹಂತದಲ್ಲಿ 60 ಕೋಟಿ ರೂ. ಮಂಜೂರಾಗಲಿದ್ದು, ಪ್ರತಿ ಜಿಲ್ಲೆಗೂ ತಲಾ 20 ಕೋಟಿ ರೂ. ಸಿಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ನಾವು ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಪೋನ್ಸೋ ಅನುಮೋದನೆ ನೀಡಿದ್ದಾರೆ. ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಯಾವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಸಿಗುತ್ತದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಪ್ರತಿ ವರ್ಷ ಈ ಮೂರೂ ಜಿಲ್ಲೆಗಳಿಗೆ ಕೇಂದ್ರದಿಂದ ಹಣ ಸಿಗಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಪ್ರಮುಖರಾದ ಎನ್.ಜೆ.ರಾಜಶೇಖರ್, ರತ್ನಾಕರ ಶೆಣೈ, ಅಣ್ಣಪ್ಪ, ಹಿರಣ್ಣಯ್ಯ, ಭವಾನಿ ರಾವ್ ಮೋರೆ ಸುದ್ದಿಗೋಷ್ಠಿಯಲ್ಲಿದ್ದರು.

ಸಫಾರಿಗೆ ಸಿಗಲಿದೆ ಹೊಸ ಲುಕ್: ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ತ್ಯಾವರೆಕೊಪ್ಪದ ಲಯನ್ ಸಫಾರಿ ಅಭಿವೃದ್ಧಿಗೆ ಬಲ ಬಂದಂತಾಗಿದೆ. ಸಫಾರಿಯ ನಿರ್ವಹಣೆಯನ್ನು ರಾಜ್ಯದ ಮೃಗಾಲಯ ಪ್ರಾಧಿಕಾರ ಮಾಡುತ್ತಿದ್ದರೂ ಇದಕ್ಕೆ ಹೊಸ ರೂಪ ನೀಡಲು, ಮತ್ತಷ್ಟು ವಿಸ್ತರಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಅವಶ್ಯ. ಈಗ ಅದಕ್ಕೂ ಅನುಮೋದನೆ ಸಿಕ್ಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪ್ರಸ್ತುತ ಜಿಂಕೆ, ಹುಲಿ, ಸಿಂಹಕ್ಕೆ ಪ್ರತ್ಯೇಕ ಸಫಾರಿಯಿದೆ. ಈಗ ಕೇಂದ್ರ ಮೃಗಾಲಯ ಪ್ರಾಧಿಕಾರ ಅನುದಾನ ನೀಡುವುದರಿಂದ ಕಾಡುಕೋಣದ ಪ್ರತ್ಯೇಕ ಸಫಾರಿ ನಿರ್ವಿುಸಲಾಗುವುದು. ಈಗಾಗಲೆ ಸಿಂಹಧಾಮದ ಬೌಂಡರಿ ನಿಗದಿ ಮಾಡಿದ್ದು, ಹೆಚ್ಚಿನ ಸ್ಥಳ ಉಪಯೋಗವಾಗುತ್ತಿಲ್ಲ. ಈಗ ಖಾಲಿ ಜಾಗ ಬಳಸಿಕೊಂಡು ಇನ್ನಷ್ಟು ಹೊಸ ಪ್ರಾಣಿ ಪ್ರಬೇಧಗಳನ್ನು ಪರಿಚಯಿಸಲಾಗುವುದು ಎಂದರು.

ಸುಮಾರು 50 ಕೋಟಿ ರೂ.: ತ್ಯಾವರೆಕೊಪ್ಪ ಲಯನ್ ಸಫಾರಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹಂತ ಹಂತವಾಗಿ ಸುಮಾರು 50 ಕೊಟಿ ರೂ. ಅನುದಾನ ಸಿಗುವ ನಿರೀಕ್ಷೆಯಿದೆ. ಸಫಾರಿಯ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಇನ್ನಷ್ಟು ಪ್ರಾಣಿ ವೈವಿಧ್ಯತೆ ಪರಿಚಯಿಸಲು ಈಗಾಗಲೇ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದೆ.

250 ಹೆಕ್ಟೇರ್ ಪ್ರದೇಶದಲ್ಲಿ ಸಫಾರಿ ಬೌಂಡರಿ ಗುರುತಿಸಲಾಗಿದೆ. ಆದರೆ ಪ್ರಸ್ತುತ ಅಷ್ಟೂ ಜಾಗ ಬಳಕೆಯಾಗುತ್ತಿಲ್ಲ. ನೂತನ ಯೋಜನೆಯಿಂದ ಬಳಕೆಯಾಗುವ ಭೂ ಪ್ರದೇಶ 15 ಹೆಕ್ಟೇರ್​ಗೆ ವಿಸ್ತರಣೆಯಾಗಲಿದೆ.

ನವಜೋತ್ ಸಿಂಗ್ ಸಿಧು ಹೇಳಿಕೆಗೆ ಬಿವೈಆರ್ ಆಕ್ಷೇಪ: ಭಾರತದ ಸೈನಿಕರ ಮೇಲೆ ಉಗ್ರ ದಾಳಿ ನಡೆದ ಬೆನ್ನಲ್ಲೇ ಪಾಕ್​ನೊಂದಿಗೆ ನಾವು ಮಾತುಕತೆಗೆ ಮುಂದಾಗಬೇಕೆಂಬ ಪಂಜಾಬ್ ಸರ್ಕಾರದ ಸಚಿವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹೇಳಿಕೆಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.

ಪಾಕ್​ನೊಂದಿಗೆ ಈಗಾಗಲೇ ಹಲವು ಬಾರಿ ಮಾತುಕತೆಗಳು ನಡೆದಿವೆ. ಈಗ ಆ ಸಾಧ್ಯತೆಗಳು ಬಂದ್ ಆಗಿವೆ. ನಮ್ಮ ಸೈನಿಕರ ಮೇಲೆ ಮೋಸದಿಂದ ಆಕ್ರಮಣ ಮಾಡಿದ ಉಗ್ರನ ಹಿಂದೆ ಪ್ರೇರಕ ಶಕ್ತಿಯಾದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಕಾಲ ಬಂದಿದೆ. ಆ ಕೆಲಸವನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ಮಾಡಲಿದೆ ಎಂದು ಹೇಳಿದರು.

ನಮ್ಮ ಸೈನಿಕರ ಮೇಲೆ ಪೈಶಾಚಿಕ ಕೃತ್ಯ ನಡೆದಿರುವ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಆದರೆ ಕೆಲವರು ಈ ವಿಷಯವನ್ನು ರಾಜಕೀಯದೊಂದಿಗೆ ಬೆರೆಸುವುದು, ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಷ್ಟು ಉಗ್ರ ದಾಳಿ ನಡೆದಿದೆ ಎಂದು ಕೆಲವರು ಲೆಕ್ಕಾಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.