ಆಸ್ಟ್ರೇಲಿಯಾ-ಭಾರತ 2ನೇ ಟೆಸ್ಟ್​- ಮೂರು ವಿಕೆಟ್​ ನಷ್ಟಕ್ಕೆ ಭಾರತ 172ರನ್​: ಎರಡನೇ ದಿನದಾಟ ಅಂತ್ಯ

ಪರ್ತ್​: ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಪರ್ತ್​ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಎರಡನೇ ದಿನ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಭಾರತ, ದಿನದ ಅಂತ್ಯದ ಹೊತ್ತಿಗೆ ಮೂರು ವಿಕೆಟ್​ಗಳ ನಷ್ಟದೊಂದಿಗೆ 172 ರನ್​ ಗಳಿಸಿದೆ.

ಮೊದಲ ದಿನದ ಆಟದಲ್ಲಿ ಆಸ್ಟ್ರೇಲಿಯಾ ತಂಡ , 6 ವಿಕೆಟ್​ಗೆ 277 ರನ್ ಪೇರಿಸಿ ಸುಸ್ಥಿತಿಯಲ್ಲಿತ್ತು. ಎರಡನೇ ದಿನದಾಟದಲ್ಲಿ ಒಟ್ಟಾರೆ 326 ರನ್​ಗಳಿಗೆ ಆಲೌಟ್​ ಆಯಿತು. ಎರಡನೇ ದಿನ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಭಾರತ ಮೂರು ವಿಕೆಟ್​ಗಳ ನಷ್ಟಕ್ಕೆ 172ರನ್​ಗಳನ್ನು ಗಳಿಸಿ ಆಡುತ್ತಿದೆ.

ಭಾರತದ ಪರ ನಾಯಕ ವಿರಾಟ್​ ಕೊಹ್ಲಿ ಉತ್ತಮ ಆಟವಾಡುತ್ತಿದ್ದು, ಈಗಾಗಲೇ 82 ರನ್​ ಗಳಿಸಿದ್ದಾರೆ. ಅವರಿಗೆ 51 ರನ್ ಗಳಿಸಿರುವ ರಹಾನೆ ಉತ್ತಮ ನೆರವು ನೀಡುತ್ತಿದ್ದಾರೆ.

ಇನ್ನುಳಿದಂತೆ ಕೆಎಲ್​ ರಾಹುಲ್ 2 ​, ಮುರಳಿ ವಿಜಯ್​ ಶೂನ್ಯಕ್ಕೇ ಔಟಾಗುವ ಮೂಲಕ ತೀವ್ರ ನಿರಾಸೆ ಮೂಡಿಸಿದರು. ಒಂದು ಹಂತದಲ್ಲಿ ಭಾರತವನ್ನು ಆತಂಕಕ್ಕೆ ತಳ್ಳಿದರು. ಆದರೆ, ನಂತರ ಬಂದ ಪೂಜಾರ ಸಮಯೋಚಿತ ಆಟವಾಡಿದರಾದರೂ, 24ರನ್​ ಗಳಿಸಿ ಔಟಾದರು.