ಟಿ20 ಸರಣಿಯೂ ಭಾರತದ ಬುಟ್ಟಿಗೆ; ಬ್ಲೂ ಬಾಯ್ಸ್​ ಆರ್ಭಟಕ್ಕೆ ಕೆರೆಬಿಯನ್ ಪಡೆ ಕಂಗಾಲು​​!

ಲಖನೌ: ನಾಯಕ ರೋಹಿತ್​ ಶರ್ಮಾರ ಅಬ್ಬರದ ಶತಕ ಹಾಗೂ ಟೀಂ ಇಂಡಿಯಾ ಬೌಲರ್​ಗಳ ಮೊನೆಚಾದ ದಾಳಿಗೆ ತುತ್ತಾದ ಪ್ರವಾಸಿ ವೆಸ್ಟ್​ ಇಂಡೀಸ್​ ತಂಡ ಟಿ20 ಸರಣಿಯ ಎರಡನೇ ಪಂದ್ಯದಲ್ಲೂ ಸೋಲಿಗೆ ಶರಣಾಯಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದು, ಸರಣಿಯನ್ನು ತನ್ನದಾಗಿಸಿಕೊಂಡಿತು.

ಟೀಂ ಇಂಡಿಯಾ ನೀಡಿದ್ದ 196 ರನ್​ ಗಳ ಬೃಹತ್​ ಗುರಿ ಬೆನ್ನತ್ತಿದ ವೆಸ್ಟ್​ ಇಂಡೀಸ್​ ನಿಗದಿತ 20 ಓವರ್​​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 124 ರನ್​ ಕಲೆ ಹಾಕುವ ಮೂಲಕ ಭಾರತದ ವಿರುದ್ಧ ಮಂಡಿಯೂರಿತು.

ವಿಂಡೀಸ್​ ವಿರುದ್ಧ ಆರಂಭಿಕರಾಗಿ ಕಣ್ಣಕ್ಕಿಳಿದ ಶಾಯ್​ ಹೋಪ್​ ಹಾಗೂ ಶಿಮ್ರಾನ್​ ಹೆಟ್​ಮೈರ್​ ಉತ್ತಮ ಅಡಿಪಾಯ ಹಾಕುವಲ್ಲಿ ಎಡವಿದರು. ಶಾಯ್​ ಹೋಪ್​ ಕೇವಲ 6 ರನ್​ ಗಳಿಸಿ ಔಟಾದರೆ, ಹೆಟ್​ಮೈರ್​ 15 ರನ್​ಗೆ ವಿಕೆಟ್​ ಒಪ್ಪಿಸಿದರು. ಡರೆನ್​ ಬ್ರಾವೋ 23 ರನ್​ ಗಳಿಸಿ ಕೊಂಚ ಭರವಸೆ ಉಂಟು ಮಾಡಿದರೂ ವಿಕೆಟ್​ ನೀಡುವ ಮೂಲಕ ವಿಂಡೀಸ್​ಗೆ ಆಘಾತವಾಯಿತು.

ಉಳಿದಂತೆ ನಿಕೋಲಸ್​ ಪೂರನ್​(4), ಕೀರನ್​ ಪೋಲಾರ್ಡ್​(6), ದಿನೇಶ್​ ರಾಮ್ದಿನ್​(10), ಫಾಬಿಯನ್​ ಅಲೆನ್​(0), ಕೀಮೋ ಪೌಲ್​(20) ಹಾಗೂ ಖ್ಯಾರೆ ಪಿಯರೆ(1) ರನ್​ ಗಳಿಸಿ ನಿರಾಸೆ ಮೂಡಿಸಿದರು. ನಾಯಕ ಕಾರ್ಲೋಸ್ ಬ್ರಾಥ್ವೈಟ್(15) ಹಾಗೂ ಓಸಾನೆ ಥಾಮಸ್​ (8) ರನ್​ ಗಳಿಸಿ ಅಜೇಯರಾಗಿ ಉಳಿದರು.

ಟೀಂ ಇಂಡಿಯಾ ಪರ ಮಾರಕ ಬೌಲಿಂಗ್​ ದಾಳಿ ನಡೆಸಿದ ಕೆ. ಕಲೀಲ್​ ಅಹಮದ್​, ಕುಲದೀಪ್​ ಯಾದವ್​, ಭುವನೇಶ್ವರ್​​ ಕುಮಾರ್​ ಹಾಗೂ ಜಸ್ಪ್ರಿತ್​ ಬೂಮ್ರಾ ತಲಾ ಎರಡು ವಿಕೆಟ್​ ಪಡೆದು ಮಿಂಚಿದರು. ಫಾಬಿಯನ್​ ಅಲೆನ್ ಅವರನ್ನು ಕೃನಾಲ್​​ ಪಾಂಡ್ಯ ರನೌಟ್​ ಮಾಡಿದರು.

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಭಾರತ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 195 ಗಳಿಸಿತ್ತು. ತಂಡದ ಪರ ನಾಯಕತ್ವದ ಜವಾಬ್ದಾರಿಯುತ ಆಟವಾಡಿದ ರೋಹಿತ್​ (111*) ಶತಕ ಸಿಡಿಸಿ ತಂಡಕ್ಕೆ ನೆರವಾದರೂ. ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿ20 ಮಾದರಿ ಪಂದ್ಯದಲ್ಲಿ 4 ಶತಕ ಸಿಡಿಸಿದ ಏಕೈಕ ಆಟಗಾರನೆಂಬ ಕೀರ್ತಿಗೆ ಭಾಜನರಾದರು. ಉಳಿದಂತೆ ಶಿಖರ್​ ಧವನ್​(43), ರಿಷಬ್​ ಪಂತ್​(5) ಹಾಗೂ ಕೆ.ಎಲ್​.ರಾಹುಲ್​(26*) ರನ್​ಗಳ ಕಾಣಿಕೆ ನೀಡಿದರು.

ವಿಂಡೀಸ್​ ಪರ ಖೇರಿ ಪಿಯರೆ ಹಾಗೂ ಫ್ಯಾಬಿಯನ್ ಅಲೆನ್ ತಲಾ ಒಂದೊಂದು ವಿಕೆಟ್​ ಕಬಳಿಸಿದರು. (ಏಜೆನ್ಸೀಸ್​)

ಟಿ20 ಸರಣಿಯಲ್ಲೂ ರೋ’ಹಿಟ್​’ ಶತಕದಬ್ಬರ: ವಿಂಡೀಸ್​​ ಗೆಲುವಿಗೆ ಬೃಹತ್​ ಗುರಿ ನೀಡಿದ ಭಾರತ