81 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಶುಕ್ರವಾರ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 54 ಕೇಂದ್ರಗಳಲ್ಲಿ ಶಾಂತಿಯುತವಾಗಿ ನಡೆದಿದೆ.

ಭೌತಶಾಸ್ತ್ರ ಹಾಗೂ ಅರ್ಥಶಾಸ್ತ್ರ ಪರೀಕ್ಷೆ ನಡೆದಿದ್ದು, ನೋಂದಣಿ ಮಾಡಿದ್ದ ಅಭ್ಯರ್ಥಿಗಳಲ್ಲಿ ಒಟ್ಟು 391 ಮಂದಿ ಗೈರು ಹಾಜರಾಗಿದ್ದಾರೆ. ಭೌತಶಾಸ್ತ್ರ ಪರೀಕ್ಷೆಗೆ 16,479 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. 16404 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 75 ಮಂದಿ ಗೈರು ಹಾಜರಾಗಿದ್ದಾರೆ. ಅರ್ಥಶಾಸ್ತ್ರ ಪರೀಕ್ಷೆಗೆ 19521 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 19205 ಮಂದಿ ಪರೀಕ್ಷೆ ಬರೆದಿದ್ದು, 316 ಮಂದಿ ಗೈರುಹಾಜರಾಗಿದ್ದಾರೆ. ಭೌತಶಾಸ್ತ್ರ ಪರೀಕ್ಷೆಗೆ ಕಣಚೂರು ಪರೀಕ್ಷಾ ಕೇಂದ್ರದಲ್ಲಿ ಅತ್ಯಧಿಕ 11 ಮಂದಿ ಹಾಗೂ ಅರ್ಥಶಾಸ್ತ್ರ ಪರೀಕ್ಷೆಗೆ ಸೇಂಟ್ ಅಲೋಶಿಯಸ್ ಪರೀಕ್ಷಾ ಕೇಂದ್ರದಲ್ಲಿ 29 ಮಂದಿ ಗೈರು ಹಾಜರಾಗಿದ್ದಾರೆ. ಇದರಲ್ಲಿ ರೆಗ್ಯುಲರ್, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರುಕತಾ ಕ್ರಮವಾಗಿ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಹೊರತುಪಡಿಸಿ ಇತರ ಕಡೆ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಮುತ್ತ ಮಾ.18ರ ತನಕ ನಿಷೇಧಾಜ್ಞೆ ಹೊರಡಿಸಲಾಗಿದೆ.

ಉಡುಪಿಯಲ್ಲಿ 151 ಗೈರು : ಶುಕ್ರವಾರ ಜಿಲ್ಲೆಯ 27 ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ಮತ್ತು ಭೌತಶಾಸ್ತ್ರ ಪರೀಕ್ಷೆಯಲ್ಲಿ 151 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಅರ್ಥಶಾಸ್ತ್ರದಲ್ಲಿ ಪರೀಕ್ಷೆ ಬರೆಯಬೇಕಿದ್ದ 9534 ವಿದ್ಯಾರ್ಥಿಗಳಲ್ಲಿ 9409 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಉಡುಪಿ 64, ಕಾರ್ಕಳ 15, ಕುಂದಾಪುರದಲ್ಲಿ 125 ಮಂದಿ ಗೈರಾಗಿದ್ದಾರೆ. ಭೌತಶಾಸ್ತ್ರದಲ್ಲಿ ಪರೀಕ್ಷೆ ಬರೆಯಬೇಕಿದ್ದ 5124 ವಿದ್ಯಾರ್ಥಿಗಳಲ್ಲಿ 5098 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಉಡುಪಿ 13, ಕಾರ್ಕಳ 5, ಕುಂದಾಪುರದಲ್ಲಿ 8 ಮಂದಿ ಗೈರಾಗಿದ್ದಾರೆ ಎಂದು ಪದವಿಪೂರ್ಣ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.