ವಿಜಯಪುರ: ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವೇ ಭೌತಶಾಸ್ತ್ರ ವಿಷಯದ ಪರೀಕ್ಷೆ ಆರಂಭವಾದ ಒಂದು ಗಂಟೆಯಲ್ಲೇ ಅದರ ಪ್ರಶ್ನೆ ಪತ್ರಿಕೆಯ ಕೆಲವು ಪುಟಗಳ ಫೋಟೋವನ್ನು ವಾಟ್ಸ್ಆ್ಯಪ್ ಮೂಲಕ ಶೇರ್ ಮಾಡಿದ ಪ್ರಕರಣ ವರದಿ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ದೂರು ದಾಖಲಿಸಿದೆ. ಪರಿಣಾಮ, ಈ ಕೃತ್ಯವೆಸಗಿದ ಇಬ್ಬರನ್ನು ಇಂಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುರುಘೇಂದ್ರ ಹಿರೇಮಠ (19) ಮತ್ತು ಬಾಗಪ್ಪ ಸಗರ(22) ಎಂದು ಗುರುತಿಸಲಾಗಿದೆ. ಪ್ರಶ್ನೆಪತ್ರಿಕೆಯನ್ನು ಹಿಡಿದು ಮುರುಘೇಂದ್ರ ಹಿರೇಮಠ ಕ್ಯಾಮೆರಾಗೆ ಫೋಸ್ ಕೊಟ್ಟರೆ, ಬಾಗಪ್ಪ ಸಗರ ಫೋಟೋ ತೆಗೆದು ಶೇರ್ ಮಾಡಿದ್ದ.
ಮುರುಘೇಂದ್ರ ಹಿರೇಮಠ ಪರೀಕ್ಷಾರ್ಥಿಯಾಗಿದ್ದು, ಪರೀಕ್ಷಾ ಕೇಂದ್ರದ ಒಳಗಿದ್ದ. ಕಿಟಕಿ ಮೂಲಕ ಹೊರಗೆ ಕಾಣಿಸುವಂತೆ ಆತ ಪ್ರಶ್ನೆ ಪತ್ರಿಕೆಯನ್ನು ಹಿಡಿದುಕೊಂಡಿದ್ದ. ಬಾಗಪ್ಪ ಸಗರ ಹೊರಗೆ ನಿಂತು ಇದರ ಫೋಟೋ ತೆಗೆದಿದ್ದ. ಇದಕ್ಕೆ ಸಂಬಂಧಿಸಿ, ಪರೀಕ್ಷಾ ಕೇಂದ್ರದ ಸೂಪರ್ ವೈಸರ್ ಎಂ. ಡಿ. ನಾರಾಯಣಕರ ಅಮಾನತು ಮಾಡಿದ್ದಾರೆ.