ಪ್ರಜಾಪ್ರಭುತ್ವದ ಕರಾಳ ದಿನಕ್ಕೆ ಎರಡನೇ ವರ್ಷ: ಕಾಂಗ್ರೆಸ್‌ ಕಿಡಿ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿ ಇಂದಿಗೆ ಎರಡು ವರ್ಷ ತುಂಬಿರುವ ಬೆನ್ನಲ್ಲೇ ಈ ದಿನವನ್ನು ಭಾರತೀಯ ಪ್ರಜಾಪ್ರಭುತ್ವದಲ್ಲಿಯೇ ‘ಕರಾಳ ದಿನ’ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

ಪ್ರಧಾನಿ ಮೋದಿಯವರ ಉದ್ಯಮಿ ಸ್ನೇಹಿತರನ್ನು ಹೊರತುಪಡಿಸಿ ಅಧಿಕ ಮೌಲ್ಯದ ನೋಟುಗಳ ಅಮಾನ್ಯೀಕರಣದಿಂದಾದ ವೆಚ್ಚ ಮತ್ತು ನಷ್ಟವನ್ನು ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಭರಿಸಿದ್ದಾರೆ. ಹಾಗಾಗಿ ನೋಟು ಅಮಾನ್ಯೀಕರಣ ಎನ್ನುವುದು ದೇಶದ ಪ್ರಜಾಪ್ರಭುತ್ವ ಮತ್ತು ಆರ್ಥಿಕತೆಗೆ ಕಪ್ಪು ದಿನವಾಗಿದೆ ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಟ್ವೀಟ್ ಮಾಡಿದ್ದು, ನೋಟು ಅಮಾನ್ಯೀಕರಣದ ವಿಪತ್ತಿನ ಎರಡನೇ ಕರಾಳ ದಿನವಿಂದು. ಅದು ಘೋಷಣೆಯಾದಾಗಲೇ ನಾನು ಹೇಳಿದ್ದೆ. ಖ್ಯಾತ ಆರ್ಥಿಕ ತಜ್ಞರು, ಸಾಮಾನ್ಯ ಜನರು ಮತ್ತು ಎಲ್ಲ ತಜ್ಞರು ಅದನ್ನು ಒಪ್ಪಿದ್ದಾರೆ ಎಂದು ಕಿಡಿಕಾರಿದ್ದಾರೆ.

ನ.8, 2016ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯೀಕರಣದ ನಿರ್ಧಾರ ಘೋಷಿಸಿದರು. ಇದೊಂದು ವೈಫಲ್ಯವಾಗಿತ್ತು. ಈ ವೇಳೆ ನೋಟು ಬದಲಾವಣೆಗೆ ಬ್ಯಾಂಕುಗಳ ಮುಂದೆ ಸಾಲಿನಲ್ಲಿ ನಿಂತು ನೂರಕ್ಕೂ ಹೆಚ್ಚುಜನರು ಪ್ರಾಣ ಕಳೆದುಕೊಂಡಿದ್ದರು. ತುಘಲಕ್‌ ದರ್ಬಾರಿಗೆ ಎರಡನೇ ವರ್ಷದಲ್ಲಿ ಮೂರ್ಖತನದ ನಿರ್ಧಾರದಿಂದಾಗಿ ಹುತಾತ್ಮರಾದವರಿಗೆ ದಯಮಾಡಿ ಎರಡು ನಿಮಿಷ ಮೌನಾಚರಿಸಿ ಎಂದು ಕಾಂಗ್ರೆಸ್‌ ನಾಯಕ ಮನೀಷ್‌ ತಿವಾರಿ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್ ಇಂದು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಕಳೆದ ವರ್ಷ ಕೂಡ ನ. 8ರಂದು ಕಾಂಗ್ರೆಸ್ ಮತ್ತು ವಿವಿಧ ಪ್ರತಿಪಕ್ಷಗಳು ದೇಶದ ಅನೇಕ ಕಡೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು. (ಏಜೆನ್ಸೀಸ್)

ನೋಟು ಅಮಾನ್ಯೀಕರಣಕ್ಕೆ 2 ವರ್ಷ