ಮೈಸೂರು: ಇದೇ ಮೊದಲ ಬಾರಿಗೆ ಆಷಾಢ ಶುಕ್ರವಾರದ ವಿಶೇಷ ದರ್ಶನಕ್ಕಾಗಿ ಚಾಮುಂಡಿ ಬೆಟ್ಟಕ್ಕೆ 2,000 ರೂ. ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಎಸಿ ಬಸ್ನಲ್ಲಿ ಬೆಟ್ಟಕ್ಕೆ ತೆರಳಬಹುದು. ಜತೆಗೆ ವಿಶೇಷ ದರ್ಶನ ವ್ಯವಸ್ಥೆಯೂ ಇರಲಿದೆ. ಆದರೆ, ಈ ಬಾರಿಯೂ ವಿಶೇಷ ಪಾಸ್ ಹಾಗೂ ಖಾಸಗಿ ವಾಹನ ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
27ರಂದು ಈ ಬಾರಿಯ ಆಷಾಢ ಮಾಸಾಚರಣೆ ಆರಂಭವಾಗಲಿದೆ. ಭಕ್ತರ ಧಾರ್ವಿುಕ ಶ್ರದ್ಧೆ, ನಂಬಿಕೆಗೆ ಭಂಗವಾಗದಂತೆ, ಶಾಂತಿ ಪಾಲನೆಯಾಗುವಂತೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ. ಚಾಮುಂಡೇಶ್ವರಿ ದೇಗುಲದಲ್ಲಿ ಜೂ.27, ಜು.4, ಜು.11, ಜು.18ರಂದು ಆಷಾಢ ಶುಕ್ರವಾರ, ಜು.17ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಉತ್ಸವ ನಡೆಯಲಿದೆ. ಈ ವೇಳೆ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ.
ಈ ದಿನದಂದು ದರ್ಶನ ಪಡೆಯಲಾಗದವರು, ಶನಿವಾರ, ಭಾನುವಾರದಂದು ಹೆಚ್ಚಿನ ಪ್ರಮಾಣದಲ್ಲಿ ಬೆಟ್ಟಕ್ಕೆ ಆಗಮಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಭಕ್ತಾದಿಗಳ ಅನುಕೂಲಕ್ಕಾಗಿ ಶುಕ್ರವಾರದೊಂದಿಗೆ ಶನಿವಾರ, ಭಾನುವಾರವೂ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶೇಷ ದರ್ಶನ: ಇದೇ ಮೊದಲ ಬಾರಿಗೆ ವಿಶೇಷ ದರ್ಶನಕ್ಕಾಗಿ 2,000 ರೂ.ಗಳ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಎಸಿ ಬಸ್ನಲ್ಲಿ ಬೆಟ್ಟಕ್ಕೆ ತೆರಳಬಹುದು. ಜತೆಗೆ ವಿಶೇಷ ದರ್ಶನದ ವ್ಯವಸ್ಥೆ ಇರಲಿದೆ. ಲಾಡು ಪ್ರಸಾದ, ಮರುಬಳಕೆ ಮಾಡಬಹುದಾದ ವಾಟರ್ ಬಾಟಲ್ ನೀಡಲಾಗುವುದು. ಸಾಮಾನ್ಯ (ಉಚಿತ) ಸರತಿ ಸಾಲು, 300 ರೂ. ಟಿಕೆಟ್ ಸಾಲು ಸಹ ಇರಲಿದೆ. ಯಾವುದೇ ತೊಂದರೆಯಾಗದಂತೆ ಹೊಸ ಕ್ಯೂ ವ್ಯವಸ್ಥೆ ಮಾಡಲಾಗಿದೆ ಎಂದರು.