ಹಗರಿಬೊಮ್ಮನಹಳ್ಳಿ: ಪಂಚಮಸಾಲಿ ಸಮುದಾಯವನ್ನು ಬಳಸಿಕೊಂಡ ರಾಜಕೀಯ ನಾಯಕರು 2ಎ ಮೀಸಲಾತಿ ನೀಡುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ ಎಂದು ಕೂಡಲಸಂಗಮದ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರಿದರು.
ಬೆಳಗಾವಿಯಲ್ಲಿ ಸೆ.22ರಂದು ನಡೆಯಲಿರುವ ಪಂಚಮಸಾಲಿ ವಕೀಲರ ರಾಜ್ಯಮಟ್ಟದ ಸಮಾವೇಶ ನಿಮಿತ್ತ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ವಿಜಯನಗರ ವಕೀಲರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ರಾಜಕಾರಣಿಗಳ ಮೇಲೆ ನಂಬಿಕೆಯನ್ನಿಟ್ಟು ಬೆಂಬಲಿಸುತ್ತಿದ್ದೇವೆ. ನಮ್ಮನ್ನು ಬಳಸಿಕೊಂಡು ಅಧಿಕಾರ ಹಿಡಿದವರು ಅವರ ಸಮುದಾಯಗಳಿಗೆ ಪ್ರಾಮುಖ್ಯತೆ ನೀಡಿ ಸೌಲಭ್ಯ ಕಲ್ಪಿಸಿದ್ದಾರೆ. ಆದರೆ, ನಮ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಅವರಿಗೆ ಎಚ್ಚರಿಸಲು ವಕೀಲರಿಂದಲೇ (ಕಾನೂನು ಹೋರಾಟ) ನಮ್ಮ ಹಕ್ಕನ್ನು ಕೇಳುತ್ತೇವೆ. ಇದಕ್ಕೂ ಮಣಿಯದಿದ್ದರೆ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದ ಎಲ್ಲ ಜಲಾಶಯಗಳ ನಿರ್ಮಾಣದ ವೇಳೆ ಸಮಾಜದ ಒಳಿತಿಗಾಗಿ ಬಹುತೇಕರು ನಮ್ಮ ಸಮುದಾಯದವರೇ ಕೃಷಿ ಭೂಮಿ ಕಳೆದುಕೊಂಡಿದ್ದಾರೆ. 2ಎ ಮೀಸಲಾತಿ ಮಾತ್ರ ಕೇಳುತ್ತಿದ್ದೇವೆ. ಇದು ಕೊನೆಯ ಎಚ್ಚರಿಕೆಯಾಗಿದ್ದು, ಎಚ್ಚೆತ್ತುಕೊಳ್ಳದ ಸರ್ಕಾರದ ವಿರುದ್ಧ ಹೋರಾಟ ನಿರಂತರವಾಗಿರುತ್ತದೆ ಎಂದರು.
19ಎಚ್.ಬಿ.ಎಚ್.7ಎ
ಹಗರಿಬೊಮ್ಮನಹಳ್ಳಿ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ವಿಜಯನಗರ ಜಿಲ್ಲಾ ವಕೀಲರ ಸಂಘದ ಸಭೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ವಕೀಲರಾದ ಅಜ್ಜಣ್ಣ, ಕೊಟ್ರೇಶ್ ಶೆಟ್ಟರ್, ಬಾವಿ ಪ್ರಕಾಶ್, ಕೊಟ್ರೇಶ್ ಮತ್ತಿಹಳ್ಳಿ, ಬಿ.ಜಿ.ಪ್ರಕಾಶ್, ಸಿದ್ದನಗೌಡ, ಮಹೇಶ್ವರಗೌಡ, ಮಲ್ಲಪ್ಪ ಇತರರಿದ್ದರು.