ಬೆಳಗಾವಿ ಮುಂಬರುವ ಅಧಿವೇಶನದಲ್ಲಿಯೇ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಸಮುದಾಯದ ಎಲ್ಲ ಸಚಿವರು, ಶಾಸಕರೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.
ಇಲ್ಲಿನ ಕುವೆಂಪು ನಗರದ ತಮ್ಮ ನಿವಾಸದಲ್ಲಿ ಗುರುವಾರ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಅಂತಿಮಘಟ್ಟ ತಲುಪಿದ್ದು, ನ್ಯಾಯ ಕಲ್ಪಿಸಲು ಇಡೀ ಕುಟುಂಬ ಪಂಚಮಸಾಲಿ ಸಮುದಾಯ ಮೀಸಲಾತಿ ಹೋರಾಟದಲ್ಲಿ ಇರುತ್ತದೆ. ನಮ್ಮ ಬದ್ಧತೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಬೇರೆ ಸಮುದಾಯಕ್ಕೆ ಅನ್ಯಾಯ ಮಾಡಿ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ನಾವು ಬಸವ ತತ್ವದ ಮೇಲೆ ನಡೆಯುವವರು. ಸಮಯಪ್ರಜ್ಞೆ ನಮಗಿದ್ದು, ತಾಳ್ಮೆಯಿಂದ ಹೋರಾಡುತ್ತೇವೆ. ಆದರೆ, ನಮ್ಮ ತಾಳ್ಮೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈಗ ಮೀಸಲಾತಿ ತೆಗೆದುಕೊಂಡಿಲ್ಲ ಎಂದರೆ ಮುಂದೆ ಸಿಗಲು ಸಾಧ್ಯವಿಲ್ಲ. ಈಗ ನಿರ್ಣಾಯಕ ಘಟಕ್ಕೆ ಬಂದು ನಿಂತಿದೆ ಎಂದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ನಿಟ್ಟಿನಲ್ಲಿ ಮೊದಲಿನಿಂದಲೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದರು. ಕಳೆದ ಬಿಜೆಪಿ ಸರ್ಕಾರದಲ್ಲಿ 2ಡಿ ಮೀಸಲಾತಿ ಕೊಟ್ಟಿತ್ತು. ಅದು ಬೇಡ. 2ಎ ಮೀಸಲಾತಿ ನೀಡಬೇಕೆಂದು ಹೋರಾಟ ಮತ್ತೆ ಮುಂದುವರಿಸಿದ್ದೇವೆ ಎಂದರು.
ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಈಶ್ವರ ಖಂಡ್ರೆ ಅವರು ಮೀಸಲಾತಿ ಪರವಾಗಿ ನೇರವಾಗಿ ಮಾತನಾಡಿದ್ದಾರೆ. ಈ ಅಧಿವೇಶನದಲ್ಲೂ ಮಾತನಾಡುವ ವಿಶ್ವಾಸವಿದೆ. ಎಲ್ಲರೂ ಧ್ವನಿ ಎತ್ತಿದರೆ ಮುಖ್ಯಮಂತ್ರಿ ಕ್ರಮಕೈಗೊಳ್ಳುತ್ತಾರೆ. ಇಡೀ ಸಮುದಾಯವೇ ಅವರ ಜತೆಯಲ್ಲಿರುತ್ತದೆ. ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ ಎದೆಗುಂದುವುದು ಬೇಡ. ಇಡೀ ಸಮುದಾಯ ನಿಮ್ಮ ಜತೆಗಿರುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್, ಆರ್.ಕೆ.ಪಾಟೀಲ್, ಗುಂಡು ಪಾಟೀಲ, ಶಿವಾನಂದ ತುಬಾಕಿ, ನಂದು ಕಾರಜೋಳ, ಬಸವರಾಜ ಪಾಟೀಲ, ಸಿದ್ದನಗೌಡ ಪಾಟೀಲ, ಆನಂದ ಗುಡಸ, ರಾವಸಾಬ್ ಪಾಟೀಲ, ರಾಜು ಮಗದುಮ್ಮ, ಬಸವರಾಜ ಕೊಟ್ಟೂರಶೆಟ್ಟಿ, ಸುರೇಶ ಹೊಸಪೇಟ, ಶಿವಪ್ಪ ಸವದಿ ಇತರರಿದ್ದರು.