ಈ ಬಾರಿ ಪೊಳಲಿ ಜಾತ್ರೆ 29 ದಿನ

<  ಏ.10ರಂದು ಚೆಂಡು, 11ರಂದು ರಥೋತ್ಸವ, 12ರಂದು ಅವಭೃತ ಸ್ನಾನ>

ಗುರುಪುರ: ಅದ್ದೂರಿ ಬ್ರಹ್ಮಕಲಶೋತ್ಸವ ಮುಗಿಯುತ್ತಲೇ ಗುರುವಾರ ರಾತ್ರಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ನಿಮಿತ್ತ ಧ್ವಜಾರೋಹಣಗೊಂಡಿದ್ದು, ಶುಕ್ರವಾರ ಬೆಳಗ್ಗೆ ಸಾಂಪ್ರದಾಯಿಕ ದೈವಿಕ ಕಾರ್ಯಕ್ರಮಗಳ ಬಳಿಕ ಈ ಬಾರಿ ಒಟ್ಟು 29 ದಿನಗಳ ಜಾತ್ರೆ ನಡೆಯಲಿದೆ ಎಂಬುದು ನಿಗದಿಯಾಯಿತು.

ಇಲ್ಲಿ ಜಾತ್ರೆ ದಿನ ನಿಗದಿಪಡಿಸುವ ವಿಶಿಷ್ಟ ಸಾಂಪ್ರದಾಯಕ್ಕೆ ‘ಕುದಿ’ ಎಂದು ಕರೆಯಲಾಗುತ್ತಿದ್ದು, ‘29 ಪೋಪಿನಾನಿ ಶುಕ್ರವಾರ ದಿನತ್ತಾನಿ ಆರಡ’ (29ನೇ ದಿನದಂದು ಆರಾಟ) ಎಂದಾಗ, ‘ಬೆಸ’ ಸಂಖ್ಯೆಯಲ್ಲಿ ಜಾತ್ರೆ ಬಂದಿರುವುದು ಊರಿಗೆ ಸುಭೀಕ್ಷೆ ಎಂದು ನೆರದ ಭಕ್ತರೆಲ್ಲ ಖುಷಿಪಟ್ಟರು.

ವಿಶಿಷ್ಟ ಸಂಪ್ರದಾಯ: ನಂದ್ಯ ಶ್ರೀ ಭಗವತಿ ಕ್ಷೇತ್ರ ಹಾಗೂ ಮಳಲಿ ಉಳಿಪಾಡಿಗುತ್ತಿನಿಂದ ಭಂಡಾರ ಆಗಮಿಸಿ ಗುರುವಾರ ರಾತ್ರಿ ಧ್ವಜಾರೋಹಣಗೊಂಡು ಕೊಡಿಬಲಿ ಉತ್ಸವ ಬಳಿಕ, ಶುಕ್ರವಾರ ಬೆಳಗ್ಗೆ ಕಂಚು ಬೆಳಕು(ಕಂಚಿಲ್) ಬಲಿ ಉತ್ಸವ ನಡೆಯಿತು. ನೂರಾರು ಮಂದಿ ಕಂಚಿಲ್ ಸೇವೆ ನಡೆಸಿ ಹರಕೆ ಪೂರೈಸಿಕೊಂಡರು. ಇದಾದ ಬಳಿಕ ಸಣ್ಣ ರಥೋತ್ಸವ ಜರುಗಿತು.

ಬುಧವಾರ ರಾತ್ರಿ ಪೊಳಲಿಯ ನಟ್ಟೋಜರು ಪುತ್ತಿಗೆ ಸೋಮನಾಥ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಜೋಯಿಷರು ನಿಗದಿಪಡಿಸಿದ ಜಾತ್ರೆ ದಿನವನ್ನು ಹಿಂಗಾರದಲ್ಲಿ ರಹಸ್ಯವಾಗಿಟ್ಟು ಪೊಳಲಿ ದೇವಸ್ಥಾನಕ್ಕೆ ಬಂದು ಗುರುವಾರ ರಾತ್ರಿ ಅದನ್ನು ಅರ್ಚಕರಿಗೆ ಕೊಟ್ಟು ನಟ್ಟೋಜರು ಪ್ರಸಾದ ಸ್ವೀಕರಿಸುತ್ತಾರೆ. ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ಗುಡಿಯ ಹಿಂಭಾಗದಲ್ಲಿ ನಿಂತಿದ್ದ ಸೇರಿಗಾರನ ಕೈಯಲ್ಲಿ ಹಿಂಗಾರದ ಹಾಳೆ ನೀಡಿದ ನಟ್ಟೋಜರು ಸೇರಿಗಾರನ ಕಿವಿಯಲ್ಲಿ ಜಾತ್ರಾ ದಿನಗಳ ಅವಧಿ ಬಗ್ಗೆ ಗುಟ್ಟಾಗಿ ಹೇಳಿದರು. ಇದಾದ ಬಳಿಕ ಸೋಮಕಾಸುರ ಮತ್ತು ರೆಂಜಕಾಸುರ(ದೈವಗಳು) ವೇಷಧಾರಿ ದೈವದ ಪಾತ್ರಿಯು ಗೋಪುರದ ಬಳಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ವಿಧಿವಿಧಾನ ಪೂರೈಸುತ್ತಿದ್ದಾಗ, ಸೇರಿಗಾರನು ಗುಟ್ಟಾಗಿ ದೈವ ಪಾತ್ರಿಯ ಕಿವಿಯಲ್ಲಿ ನಿಗದಿಯಾದ ಜಾತ್ರೆಯ ಒಟ್ಟು ದಿನ ತಿಳಿಸಿದರು.

11ರಂದು ರಥೋತ್ಸವ: ಮಾ.15ರಿಂದ ಏಪ್ರಿಲ್ 12ರವರೆಗೆ 29 ದಿನ ಜಾತ್ರೆ. ಏ.6ರಂದು ಮೊದಲ ಚೆಂಡು, 7ರಂದು ಎರಡನೇ ಚೆಂಡು, 8ರಂದು ಮೂರನೇ ಚೆಂಡು, 9ರಂದು ನಾಲ್ಕನೇ ಚೆಂಡು ಮತ್ತು 10ರಂದು ಕೊನೆಯ ಚೆಂಡು ನಡೆಯಲಿದೆ. 11ರಂದು ರಥೋತ್ಸವ, 12ರಂದು ಆರಡ(ಅವಭೃತ ಸ್ನಾನ), ಜಾತ್ರೆ ನಡೆಯುತ್ತಿರುವಂತೆ ಐದು ದಿನಕ್ಕೊಂದು ದಂಡಮಾಲೆ (ಶ್ರೀ ದೇವಿಗೆ ಹೂವಿನ ಹಾಕುವುದು), 5 ದಿನಕ್ಕೊಮ್ಮೆ ದಂಡಮಾಲೆ ಹಾಗೂ ಜಾತ್ರೆಯ ಬಳಿಕ ಕೊಡಮಣಿತ್ತಾಯಿ- ಉಳ್ಳಾಕ್ಲು- ಮಗೃಂತಾಯಿ- ಬಂಟ ಪರಿವಾರ ದೈವಗಳ ನೇಮೋತ್ಸವ ಜರುಗಲಿದೆ.