ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋಧಿಸಿ ಹಾಗೂ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಬೆಂಗಳೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಚೇರಿ ಎದುರು ಜ.29ರಂದು ಬೆಳಗ್ಗೆ 11 ಗಂಟೆಗೆ ರೈತರಿಂದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳದಿಂದ ನಮ್ಮ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಇತರ ದುಡಿಯುವ ಜನ ಸಂಕಷ್ಟಕ್ಕೀಡಾಗಿದ್ದಾರೆ. ಮೈಕ್ರೋ ಫೈನಾನ್ಸ್ ಮೇಲೆ ಯಾರಿಗೂ ಹಿಡಿತ ಇಲ್ಲದಂತಾಗಿ ಕೆಲ ಮಹಿಳೆಯರು ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಒಳಗಾಗಿದ್ದಾರೆ. ಇನ್ನೂ ಹಲವರು ಕಿರುಕುಳ ತಾಳಲಾರದೆ ಊರನ್ನೇ ತೊರೆಯುತ್ತಿದ್ದಾರೆ. ಈ ಮೈಕ್ರೋ ಫೈನಾಸ್‌ಗಳ ಕಿರುಕುಳಗಳನ್ನು ತಡೆಗಟ್ಟಲೇ ಬೇಕಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ದೃಷ್ಟಿಯಿಂದ ಆರ್ಥಿಕ ನೆರವು ನೀಡಲು ಸ್ಥಾಪನೆಯಾಗಿರುವ ನಬಾರ್ಡ್ ಮೂಲಕ ಕೃಷಿಗೆ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದೆ. ಇದರಿಂದ ರೈತರ ಮೇಲೆ ಹೊಡೆತ ಬೀಳಲಿದೆ. ಕೃಷಿ ವಲಯಕ್ಕೂ ಕಷ್ಟವಾಗಲಿದೆ. ರೈತರು ಹೆಚ್ಚು ಬಡ್ಡಿ ತೆತ್ತು, ವಾಣಿಜ್ಯ ಬ್ಯಾಂಕುಗಳ ಮೊರೆ ಹೋಗಬೇಕು, ಇಲ್ಲವೇ ಖಾಸಗಿ ಸಾಲದ ಸುಳಿಗೆ ಸಿಕ್ಕಿ ಹಾಕಿಕೊಳ್ಳಬೇಕು. ಈ ಸುಳಿಗೆ ರೈತ ಸಮುದಾಯ ಬಲಿಯಾದಲ್ಲಿ ಸ್ಥಿರಾಸ್ತಿಗಳು ಹರಾಜಾಗುತ್ತವೆ. ಈಗಾಗಲೇ ಪ್ರತಿ 36 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆಗೆ ಒಳಗಾಗುತ್ತಿದ್ದು, ಸರಣಿ ಆತ್ಮಹತ್ಯೆ ಹಾದಿ ತುಳಿಯಬೇಕಾಗುತ್ತದೆ ಎಂದು ಕಿಡಿಕಾರಿದರು.
ನಬಾರ್ಡ್ ಹಣ ಕಡಿತಗೊಳಿಸಿರುವುದರಿಂದ, ರಾಜ್ಯದಲ್ಲಿರುವ ಹಲವಾರು ಡಿಸಿಸಿ ಬ್ಯಾಂಕ್‌ಗಳು, ಭೂ ಅಭಿವೃದ್ಧಿ ಬ್ಯಾಂಕ್‌ಗಳು, ಕೃಷಿ ಪತ್ತಿನ ಸಹಕಾರ ಸಂಘಗಳು, ಭವಿಷ್ಯದಲ್ಲಿ ಸಂಪೂರ್ಣವಾಗಿ ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರ ಕಳೆದ 3 ವರ್ಷದಿಂದಲೂ ಪ್ರತಿವರ್ಷ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತಲೇ ಬರುತ್ತಿದೆ. ಕೇಂದ್ರದ ಈ ನೀತಿಯಿಂದಾಗಿ ನಬಾರ್ಡ್ ರೈತರಿಗೆ ನೀಡುತ್ತಿದ್ದ, ಸಾಲದ ಮೊತ್ತವನ್ನು ಕಡಿಮೆ ಮಾಡಿ ಈ ಸಾಲಿನಲ್ಲಿ ನಮ್ಮ ರಾಜ್ಯಕ್ಕೆ ನೀಡುತ್ತಿದ್ದ ಸಾಲವನ್ನು ಶೇ.58 ತಗ್ಗಿಸಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಇಡೀ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಿ ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ವಹಿಸಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್ ನಾಗನಹಳ್ಳಿ ವಿಜಯೇಂದ್ರ ಇದ್ದರು.
29 ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ

You Might Also Like
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips
ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…
ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ?; ಈ ತರಕಾರಿಗಳಿಂದ ತೊಂದರೆ ನಿವಾರಣೆ ಗ್ಯಾರಂಟಿ | Health Tips
ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕರುಳುಗಳು ಸರಿಯಾಗಿ…
ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಉತ್ತಮ ಮದ್ದು ತೆಂಗಿನ ಎಣ್ಣೆ; ಈ ಬಗ್ಗೆ ತಜ್ಞರು ಹೇಳೋದೇನು | Health Tips
ಗರ್ಭಾವಸ್ಥೆಯಲ್ಲಿ ಹಿಗ್ಗಿಸಲಾದ ಗುರುತುಗಳು ಇರುವುದು ಸಹಜ. ಕೆಲವೊಮ್ಮೆ ಈ ಗುರುತುಗಳು ತಾವಾಗಿಯೇ ಮಾಯವಾಗುತ್ತವೆ ಮತ್ತು ಕೆಲವೊಮ್ಮೆ…