ಬಾಳೆಹೊನ್ನೂರು: ಮಲಯಾಚಲ ತಪೋಭೂಮಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಜು.29ರಿಂದ ಆ.27ರವರೆಗೆ ಡಾ. ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ 31ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆ ತಪೋನುಷ್ಠಾನ ಪ್ರತಿದಿನ ಬೆಳಗ್ಗೆ 8.30 ಗಂಟೆಗೆ ನೆರವೇರಲಿದೆ
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕುಲಾಧಿಪತಿಗಳಾದ ಗಂವ್ಹಾರ ಹಿರೇಮಠದ ಶ್ರೀ ವಿರೂಪಾಕ್ಷ ದೇವರು ಮತ್ತು ಸಾಧಕರಾದ ದಾನಯ್ಯ ದೇವರು ಅವರಿಂದ ಪ್ರತಿದಿನ ಸಂಜೆ 7ಕ್ಕೆ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ನಡೆಯಲಿದೆ. ಈ ವೇಳೆ ಆಗಮಿಸುವ ಪಟ್ಟಾಧ್ಯಕ್ಷರಿಂದ ಹಾಗೂ ವಾಗ್ಮಿಗಳಿಂದ ನುಡಿಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ಸೋಮವಾರ ಮತ್ತು ಗುರುವಾರ ಶ್ರೀ ರಂಭಾಪುರಿ ಜಗದ್ಗುರುಗಳು ಸಭೆಗೆ ಆಗಮಿಸಿ ಶುಭ ಸಂದೇಶ ನೀಡುವರು.
ಆ.1ರಂದು ಲಿಂ. ಶ್ರೀ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ 75ನೇ ಪುಣ್ಯ ಸ್ಮರಣೋತ್ಸವ ನೆರವೇರಲಿದೆ. ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯ ಸಮುದಾಯದಿಂದ ದಾಸೋಹ ಸೇವೆ, ಆ.5ರಂದು ಲಿಂ. ಶ್ರೀ ಜಗದ್ಗುರು ವೀರ ರುದ್ರಮುನಿ ದೇವ ಶಿವಾಚಾರ್ಯ ಭಗವತ್ಪಾದರ 30ನೇ ಪುಣ್ಯಸ್ಮರಣೆ ನಡೆಯಲಿದ್ದು, ಆಲ್ದೂರು ಹೋಬಳಿ ವೀರಶೈವ ಸಮಾಜದಿಂದ ಪೂಜೆ ಹಾಗೂ ದಾಸೋಹ ಸೇವೆ ಇರುತ್ತದೆ. ಭದ್ರಾವತಿಯ ಲಿಂ. ಎಸ್.ಜಿ.ಶಿವಶಂಕರಯ್ಯ ಅವರ ಮಕ್ಕಳು ವರ್ಷದ 365ದಿನ ರುದ್ರಾಭಿಷೇಕ ಹಾಗೂ ಶ್ರಾವಣ ಮಾಸ ಪರ್ಯಂತರ ಮಹಾರುದ್ರಾಭಿಷೇಕ ಹಾಗೂ ಸಿಹಿ ಪ್ರಸಾದ ವಿತರಣೆ ಸೇವೆ ನೆರವೇರಿಸುವರು.