29ಕ್ಕೆ ಶಾಲೆ ಪ್ರಾರಂಭೋತ್ಸವ

ಕೋಲಾರ: ಬೇಸಿಗೆ ರಜೆಯ ಮಜಾ ಮುಗಿಸಿ ಮೇ 29ರಂದು ಮರಳಿ ಶಾಲೆಗೆ ಮುಖ ಮಾಡುವ ಚಿಣ್ಣರನ್ನು ಸ್ವಾಗತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಪ್ರಾರಂಭೋತ್ಸವವನ್ನು ಹಬ್ಬದಂತೆ ಆಚರಿಸಲು ಸೂಚನೆ ನೀಡಿದೆ.

ಕಲಿಕೆ, ಪರೀಕ್ಷೆ, ಫಲಿತಾಂಶದ ನಂತರ ಸಿಕ್ಕ ವಾರ್ಷಿಕ ಬೇಸಿಗೆ ರಜೆ ಮುಗಿಸಿ ಇದೀಗ ಶಾಲೆಗಳತ್ತ ಮುಖ ಮಾಡಿರುವ ಚಿಣ್ಣರು, ಹೊಸ ಪಠ್ಯಪುಸ್ತಕಗಳನ್ನು ಪಡೆದು ಮತ್ತೆ ಕಲಿಯಲ್ಲಿ ಮಗ್ನರಾಗಲು ಸಿದ್ಧರಾಗಿದ್ದಾರೆ.

ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ನಿರ್ವಿುಸಿ ಶೈಕ್ಷಣಿಕ ಕಾರ್ಯಗಳಿಗೆ ಚ್ಯುತಿ ಬಾರದಂತೆ ಮೇ 28ರಂದು ಶಾಲೆಗಳಲ್ಲಿ ಶಿಕ್ಷಕರು ಸಿದ್ಧತಾ ಕಾರ್ಯ ನಡೆಸಬೇಕಿದ್ದು, ಮೇ 29ರಂದು ಶಾಲೆಗೆ ಬರುವ ಮಕ್ಕಳನ್ನು ಆಹ್ವಾನಿಸಲು ಸಜ್ಜುಗೊಳ್ಳುವಂತೆ ಡಿಡಿಪಿಐ ಕೆ.ರತ್ನಯ್ಯ ಸೂಚಿಸಿದ್ದಾರೆ.

ಪ್ರಾರಂಭೋತ್ಸವಕ್ಕೆ ಸಜ್ಜು: ಜಿಲ್ಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 1856 ಸರ್ಕಾರಿ ಪ್ರಾಥಮಿಕ ಶಾಲೆ,126 ಸರ್ಕಾರಿ ಪ್ರೌಢಶಾಲೆಗಳು, 45 ಅನುದಾನಿತ ಪ್ರಾಥಮಿಕ ಶಾಲೆ, 60 ಪ್ರೌಢಶಾಲೆ, 297 ಅನುದಾನರಹಿತ ಪ್ರಾಥಮಿಕ ಹಾಗೂ 143 ಪ್ರೌಢಶಾಲೆಗಳಿದೆ. ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯ ಸೂಚನೆಗೆ ಕಾಯದೇ ವಾರಕ್ಕೂ ಮುನ್ನವೇ ಶಾಲೆಗಳನ್ನು ಆರಂಭಿಸಿವೆ.

ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 16ಮುರಾರ್ಜಿದೇಸಾಯಿ, 4 ಕಿತ್ತೂರು ರಾಣಿ ಚೆನ್ನಮ್ಮ, 3 ಅಂಬೇಡ್ಕರ್ ಹಾಗೂ 1 ಏಕಲವ್ಯ ವಸತಿ ಶಾಲೆಗಳಿದೆ. ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು ತಾಲೂಕುಗಳಲ್ಲಿ ತಲಾ ಒಂದೊಂದು ಕಸ್ತೂರಿ ಬಾ ಶಾಲೆ ಹಾಗೂ ಆದರ್ಶ ಶಾಲೆಗಳಿದ್ದು, ಇಲ್ಲೂ ಸಹಾ ಮೇ.28 ರಂದೇ ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ದತೆ ನಡೆಸಲು ಸೂಚಿಸಲಾಗಿದೆ.

ಹಬ್ಬದಂತೆ ಸಿಹಿಊಟ

ಮೇ 28 ರಂದು ಶಿಕ್ಷಕರು ಪ್ರಾರಂಭೋತ್ಸವಕ್ಕೆಂದು ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸುವುದು, ಕುಡಿಯಲು ನೀರು ಒದಗಿಸುವುದು, ಶೌಚಗೃಹಗಳನ್ನು ಸುಸ್ಥಿತಿಯಲ್ಲಿಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸುವಂತೆ ಸೂಚಿಸಲಾಗಿದೆ.

1, 6ನೇ ಹಾಗೂ 8ನೇ ತರಗತಿಗೆ ಸೇರುವ ವಿದ್ಯಾರ್ಥಿಗಳಿಗೆ ಶಾಲಾ ಪ್ರಾರಂಭದ ದಿನ ಆಹ್ಲಾದಕರ ಸಂದರ್ಭವಾಗಿರುವಂತೆ ಅಧ್ಯಾಪಕರು ನಡೆಸಿಕೊಳ್ಳಬೇಕು. ಇದು ಮಕ್ಕಳ ವ್ಯಾಸಂಗದ ಅವಧಿಯಲ್ಲಿ ಲವಲವಿಕೆಯಿಂದ ಕಳೆಯಲು ಪ್ರೇರಣೆ ನೀಡುತ್ತದೆ ಎಂದು ಇಲಾಖೆ ಸೂಚಿಸಿದೆ.

ಎಸ್​ಡಿಎಂಸಿ ಸದಸ್ಯರು, ಪಾಲಕರು, ಗ್ರಾಮದ ಗಣ್ಯರನ್ನು ಕರೆಸಿ ಶಾಲಾ ಹಬ್ಬವನ್ನು ಸಡಗರದಿಂದ ಆಚರಿಸಿ ಅಂದು ಮಕ್ಕಳಿಗೆ ಸಿಹಿ ಹಂಚುವುದು ಜತೆಗೆ ಇಲಾಖೆ ನೀಡಿರುವ ಪಠ್ಯಪುಸ್ತಕ ವಿತರಿಸಲು ಸೂಚಿಸಲಾಗಿದೆ. ಈ ನಡುವೆ ಇಲಾಖೆ ಮಿಂಚಿನ ಸಂಚಾರಕ್ಕಾಗಿ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಶಾಲೆಗಳಲ್ಲಿ ಶಾಲಾ ಆರಂಭೋತ್ಸವ ಮಾಡಿರುವ ಕುರಿತು, ಪಠ್ಯಪುಸ್ತಕ, ಬಟ್ಟೆ ವಿತರಣೆ ಕುರಿತು ಪರಿಶೀಲನೆ ನಡೆಸಲಿದೆ.

ಶಾಲೆ ಆರಂಭದೊಂದಿಗೆ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯ, ಸಮವಸ್ತ್ರ, ಶೂ, ಸಾಕ್ಸ್ ಇನ್ನಿತರೆ ಸೌಲಭ್ಯಗಳನ್ನು ವಿತರಿಸಲಾಗುವುದು. ಈ ಬಗ್ಗೆ ಶಿಕ್ಷಕರು ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು, ದಾಖಲಾತಿ ಆಂದೋಲನದ ನಂತರವೂ ಅಂತಹ ಮಗು ಕಂಡು ಬಂದರೆ ಸಾರ್ವಜನಿಕರು, ಸಂಘ ಸಂಸ್ಥೆಗಳು 1098ಗೆ ಉಚಿತ ಸಹಾಯವಾಣಿಗೆ ಮಾಹಿತಿ ನೀಡಬೇಕೆಂದು ಮನವಿ

| ಕೆ.ರತ್ನಯ್ಯ, ಕೋಲಾರ ಡಿಡಿಪಿಐ

Leave a Reply

Your email address will not be published. Required fields are marked *