ಗಲ್ಫ್​ ರಾಷ್ಟ್ರಗಳಲ್ಲಿ ನಾಲ್ಕು ವರ್ಷದಲ್ಲಿ ಮೃತಪಟ್ಟ ಭಾರತೀಯರು 28,523

ನವದೆಹಲಿ: ಯುಎಇ, ಬಹ್ರೇನ್​, ಕುವೈತ್​, ಒಮನ್​, ಖತಾರ್​ ಮತ್ತು ಸೌದಿ ಅರೇಬಿಯಾ ಒಳಗೊಂಡಂತೆ ಕಳೆದ ನಾಲ್ಕು ವರ್ಷಗಳಲ್ಲಿ ಗಲ್ಫ್​ ರಾಷ್ಟ್ರಗಳಲ್ಲಿ 28,523 ಭಾರತೀಯರು ಮೃತಪಟ್ಟಿದ್ದಾರೆ ಎಂದು ಲೋಕಸಭೆ ತಿಳಿಸಿದೆ.

ಪ್ರಶ್ನೋತ್ತರ ಕಲಾಪದ ವೇಳೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ವಿ. ಕೆ. ಸಿಂಗ್, 2014ರಿಂದ 2018ರ ವರೆಗೆ ಕೇವಲ ಸೌದಿ ಅರೇಬಿಯಾದಲ್ಲಿಯೇ ಅತಿ ಹೆಚ್ಚು ಅಂದರೆ 12,828, ಯುಎಇಯಲ್ಲಿ 7877 ಭಾರತೀಯ ಮೂಲದವರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಬಹ್ರೇನ್​ನಲ್ಲಿ 1,021, ಕುವೈತ್​ನಲ್ಲಿ 2,932, ಒಮನ್​ನಲ್ಲಿ 2,564 ಮತ್ತು ಕತಾರ್​ನಲ್ಲಿ 1,301 ಸಾವಿನ ಸಂಖ್ಯೆ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಕೆಲಸಕ್ಕೆಂದು ಗಲ್ಫ್​ ರಾಷ್ಟ್ರಗಳಿಗೆ ತೆರಳುವ ಭಾರತೀಯರು ಅಲ್ಲಿ ಆತ್ಮಹತ್ಯೆ ಮತ್ತು ರಸ್ತೆ ಅಪಘಾತದಿಂದ ಮೃತಪಡುತ್ತಿದ್ದಾರೆ. ಅಲ್ಲಿನ ಭಾರತೀಯರಲ್ಲಿ ಜಾಗೃತಿ ಮೂಡಿಸಲು ಪ್ರವಾಸಿ ಭಾರತೀಯ ಕೇಂದ್ರ ಭಾರತೀಯ ಮಿಷನ್​ ಸಹಯೋಗದೊಂದಿಗೆ ಜಾಗೃತಿ ಅಭಿಯಾನವನ್ನೂ ಕೈಗೊಂಡಿದೆ ಎಂದರು.

2016ರಲ್ಲಿ ಅತಿ ಹೆಚ್ಚು ಭಾರತೀಯರು ಅಂದರೆ 6,013 ಜನರು ಮೃತಪಟ್ಟಿರುವುದು ದಾಖಲಾಗಿದ್ದರೆ, 2017ರಲ್ಲಿ 5906 ಭಾರತೀಯರು ಮೃತಪಟ್ಟಿರುವುದು ವರದಿಯಾಗಿದೆ. (ಏಜೆನ್ಸೀಸ್)