More

    ಮುಸ್ಲಿಮರಿಗೆ ಅಧಿಕ ಪೌರತ್ವ ನೀಡಿದ್ದು ಬಿಜೆಪಿ

    ಚೆನ್ನೈ: ಕಳೆದ ಆರು ವರ್ಷಗಳಲ್ಲಿ ಪಾಕಿಸ್ತಾನದ 2838 ವಲಸಿಗರು, ಅಫ್ಘಾನಿಸ್ತಾನದ 914 ಹಾಗೂ ಬಾಂಗ್ಲಾದೇಶದ 172 ವಲಸಿಗರಿಗೆ ಭಾರತದ ಪೌರತ್ವ ನೀಡಲಾಗಿದೆ. ಈ ಪೈಕಿ ಅನೇಕರು ಮುಸ್ಲಿಮರಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಚೆನ್ನೈನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ, 1964ರಿಂದ 2008ರವರೆಗೆ ಸುಮಾರು ಶ್ರೀಲಂಕಾದ 4 ಲಕ್ಷ ತಮಿಳರಿಗೆ ಪೌರತ್ವ ನೀಡಲಾಗಿದೆ ಎಂದಿದ್ದಾರೆ. ಈ ಹಿಂದೆ 2014ರವರೆಗೆ ಕೇವಲ 566 ಪಾಕಿಸ್ತಾನಿ, ಅಫ್ಘಾನಿಸ್ತಾನಿ ಹಾಗೂ ಬಾಂಗ್ಲಾದೇಶದ ಮುಸ್ಲಿಂರಿಗೆ ಪೌರತ್ವ ನೀಡಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 2016ರಿಂದ 2018ರ ಅವಧಿಯಲ್ಲಿ ಪಾಕಿಸ್ತಾನದ 1595 ಹಾಗೂ ಅಫ್ಘಾನಿಸ್ತಾನದ 391 ಮುಸ್ಲಿಂರಿಗೆ ಪೌರತ್ವ ನೀಡಿದೆ ಎಂದು ನಿರ್ಮಲಾ ಹೇಳಿದ್ದಾರೆ.

    ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್) ಪ್ರತಿ 10 ವರ್ಷಕ್ಕೊಮ್ಮೆ ನಡೆಯುತ್ತದೆ. ಇದಕ್ಕೂ ರಾಷ್ಟ್ರೀಯ ಪೌರತ್ವ ನೋಂದಣಿಗೂ (ಎನ್​ಆರ್​ಸಿ) ಯಾವುದೇ ಸಂಬಂಧವಿಲ್ಲ. ಆದರೆ ಕೆಲವರು ವದಂತಿ ಹರಡಿ ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಲಾಗುತ್ತಿದೆ ಎಂದು ಸಚಿವೆ ನಿರ್ಮಲಾ ಕಿಡಿಕಾರಿದ್ದಾರೆ.

    ಆಹಾರ ಹೊತ್ತೊಯ್ದ ಪೊಲೀಸರು: ಉತ್ತರಪ್ರದೇಶದ ಲಖನೌನಲ್ಲಿ ಪ್ರತಿಭಟನಾ ಕಾರರಿಂದ ಹೊದಿಕೆ, ಪಾತ್ರೆ, ಆಹಾರ ಸಾಮಾಗ್ರಿಗಳನ್ನು ಪೊಲೀಸರು ಕಸಿದುಕೊಂಡಿದ್ದಾರೆ. ಪೊಲೀಸರ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂದೊಂದು ದಿನ ಪ್ರತಿಭಟಿಸುವ ಹಕ್ಕನ್ನೂ ಕಿತ್ತಿಕೊಳ್ಳುವ ಕಾನೂನು ತನ್ನಿ ಎಂದು ಕಿಡಿಕಾರಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಆಹಾರ ಕಿತ್ತುಕೊಳ್ಳುವುದನ್ನು ಎಲ್ಲಿಯಾದರೂ ನೋಡಿದ್ದೀರಾ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

    ಸಿಎಎ ಭಾರತದ ಆಂತರಿಕ ವಿಷಯ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ, ಸಿಎಎ ಹಾಗೂ ಎನ್​ಆರ್​ಸಿ ಎರಡೂ ಭಾರತದ ಆಂತರಿಕ ವಿಷಯ ಎಂದಿದ್ದಾರೆ. ಆದರೆ ಭಾರತ ಸರ್ಕಾರ ಸಿಎಎ ಏಕೆ ತಂದಿದೆ ಎಂದು ಅರ್ಥವಾಗುತ್ತಿಲ್ಲ, ಈ ಕಾಯ್ದೆ ಅಗತ್ಯವಿರಲಿಲ್ಲ ಎಂದೂ ಹಸೀನಾ ಅಭಿಪ್ರಾಯಪಟ್ಟಿದ್ದಾರೆ. ಭಾರತದಿಂದ ಯಾವುದೇ ಹಿಮ್ಮುಖ ವಲಸೆ ನಡೆಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ನನಗೆ ಈ ವಿಷಯಗಳ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹಸೀನಾ ತಿಳಿಸಿದ್ದಾರೆ.

    ವರದಿಗೆ ಸೂಚನೆ

    ಸಿಎಎ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಕೇರಳ ಸರ್ಕಾರದ ವಿರುದ್ಧ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ನಿರ್ಧಾರದ ಬಗ್ಗೆ ಮಾಹಿತಿ ನೀಡದಿರುವುದು ಅನುಚಿತ ಎಂದಿದ್ದಾರೆ. ಜತೆಗೆ ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅರ್ಜಿ ಬಗ್ಗೆ ವರದಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts