ನವದೆಹಲಿ: ಭಾರತದಲ್ಲಿ ಬುಧವಾರ ತನಕದ ಮಾಹಿತಿ ಪ್ರಕಾರ ಕೊರೊನಾ ವೈರಸ್ COVID-19 ಸೋಂಕು ಪೀಡಿತರ ಸಂಖ್ಯೆ 28. ಈ ಪೈಕಿ ಕೇರಳದ ಮೂವರು ಇದ್ದು, ಅವರ ಆರೋಗ್ಯ ಸುಧಾರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಾಣು ಸೋಂಕು 90,000ಕ್ಕೂ ಹೆಚ್ಚು ಜನರನ್ನು ಬಾಧಿಸಿದ್ದು, 3,000ಕ್ಕೂ ಹೆಚ್ಚು ಜನರ ಪ್ರಾಣ ಕಸಿದುಕೊಂಡಿದೆ. ಭಾರತದಲ್ಲಿ ಪತ್ತೆಯಾಗಿರುವ 28 ಸೋಂಕು ಪೀಡಿತರ ಪೈಕಿ ಮೂವರು ಕೇರಳದವರು. ಇನ್ನುಳಿದ 25 ಜನರ ಪೈಕಿ 16 ಮಂದಿ ಇಟಾಲಿಯನ್ ಪ್ರವಾಸಿಗರು ಎಂದು ಡಾ.ಹರ್ಷವರ್ಧನ್ ವಿವರಿಸಿದ್ದಾರೆ.
ಅದೇ ರೀತಿ ಉಳಿದವರ ಪೈಕಿ ಯುರೋಪ್ನಿಂದ ದೆಹಲಿಗೆ ಒಬ್ಬ 45 ವರ್ಷದ ವ್ಯಕ್ತಿ, ದುಬೈನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಹೈದರಾಬಾದ್ಗೆ ತೆರಳಿದ 24 ವರ್ಷದ ಟೆಕ್ಕಿ, ದೆಹಲಿಯ ರೋಗಿ ಜತೆಗೆ ಬಂದು ಆಗ್ರಾ ತಲುಪಿದ್ದ ಆರು ಜನರು, ಇಟಾಲಿಯನ್ ಪ್ರವಾಸಿಗರ ಜತೆಗಿದ್ದ ಒಬ್ಬ ಭಾರತೀಯ ಚಾಲಕ ಕೂಡ ಇದ್ದಾರೆ.
ಸೋಂಕುಪೀಡಿತರೆಲ್ಲರನ್ನೂ ಅವರಿರುವ ಸ್ಥಳದಲ್ಲೇ ವಿಶೇಷ ಸೌಕರ್ಯಗಳಿರುವ ಆಸ್ಪತ್ರೆಗೆ ದಾಖಲಿಸಿದ್ದು, ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ರೀತಿ ಇವರ ಜತೆಗೆ ಒಡನಾಡಿದ ಎಲ್ಲರನ್ನೂ ಗುರುತಿಸಿ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ರೀತಿಯ ಮುಂಜಾಗ್ರತಾ ಕ್ರಮವನ್ನೂ ಸರ್ಕಾರ ತೆಗೆದುಕೊಂಡಿದೆ ಎಂದು ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಇಂಟರ್ನ್ಯಾಷನಲ್ ಏರ್ಪೋರ್ಟ್ಗಳ ಮೂಲಕ ಆಗಮಿಸಿ ಭಾರತವನ್ನು ಪ್ರವೇಶಿಸುವ ಎಲ್ಲ ಪ್ರಯಾಣಿಕರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದುವರೆಗೆ 5,89,000 ಪ್ರಯಾಣಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಇದೇ ರೀತಿ ನೇಪಾಳದ ಗಡಿಭಾಗದಲ್ಲಿ 10 ಲಕ್ಷ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 27,000 ಜನ ನಿಗಾದಲ್ಲಿದ್ದಾರೆ. ಪ್ರಮುಖವಾಗಿ 12 ರಾಷ್ಟ್ರಗಳಿಂದ ಬರುವಂಥವರನ್ನು ಮಾತ್ರವೇ ಇದುವರೆಗೆ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಇನ್ನು ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆಯೂ ನಡೆಯಲಿದೆ. ಆದಾಗ್ಯೂ, ದೇಶದ ಜನ ಗಾಬರಿಯಾಗಬೇಕಾಗಿಲ್ಲ. ಕೆಲವು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡೆ ಸಾಕು ಎಂದು ಡಾ.ಹರ್ಷವರ್ಧನ್ ಹೇಳಿದ್ದಾರೆ. (ಏಜೆನ್ಸೀಸ್)