ದ.ಕ ಹಾಗೂ ಉಡುಪಿ ಜಿಲ್ಲೆಯ 27,774 ಮತದಾರರು ಹೊರಕ್ಕೆ!

| ಪಿ.ಬಿ.ಹರೀಶ್ ರೈ ಮಂಗಳೂರು

ರಾಜ್ಯ ವಿಧಾನಸಭೆಗೆ ಮೇ ತಿಂಗಳಲ್ಲಿ ನಡೆದ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ 17.11 ಲಕ್ಷ, ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 9.93 ಲಕ್ಷ ಅರ್ಹ ಮತದಾರರಿದ್ದರು. ಈಗ ದ.ಕ. ಜಿಲ್ಲೆಯಲ್ಲಿ 16,968, ಉಡುಪಿ ಜಿಲ್ಲೆಯಲ್ಲಿ 10,806 ಜನರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಿರುವ ಮಾಹಿತಿ ‘ವಿಜಯವಾಣಿ’ಗೆ ಲಭಿಸಿದೆ.

ಕೇಂದ್ರ ಚುನಾವಣಾ ಆಯೋಗ 2019ರ ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿದ್ದು, ಮತದಾರರ ಕರಡು ಪಟ್ಟಿ ಪ್ರಕಟಿಸಿದೆ. ನಕಲಿ ಹೆಸರು, ವಿಳಾಸ ಬದಲಾವಣೆ, ನಿಧನ ಇತ್ಯಾದಿ ಕಾರಣಗಳಿಗಾಗಿ ಸ್ಥಳೀಯ ಚುನಾವಣಾಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಸುಮಾರು ನಾಲ್ಕು ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಿದ್ದು, ನ.20ರಂದು ಆಕ್ಷೇಪಣೆ ಸಲ್ಲಿಸುವುದಕ್ಕೆ ಕೊನೆಯ ದಿನವಾಗಿದೆ.

ಹೆಸರು ಸೇರ್ಪಡೆ: ದ.ಕ. ಜಿಲ್ಲೆಯಲ್ಲಿ ಒಟ್ಟು 3,986 ಮಂದಿಯ ಹೆಸರು ಹೊಸದಾಗಿ ಸೇರ್ಪಡೆಯಾಗಿದ್ದು, ಈಗ ಒಟ್ಟು ಮತದಾರರ ಸಂಖ್ಯೆ 16,98,868 ಆಗಿದೆ. 2019ರ ಜನವರಿ 1ಕ್ಕೆ 18 ವರ್ಷ ತುಂಬುವವರ ಹೆಸರು ಸೇರ್ಪಡೆಗೆ ಅವಕಾಶವಿದೆ. ಜ.3 ದತ್ತಾಂಶ ಅಪ್‌ಡೇಟ್ ಮಾಡಲು ಕೊನೆಯ ದಿನವಾಗಿದೆ. ಮತದಾರರ ಕರಡು ಪಟ್ಟಿ ಪ್ರಕಾರ ದ.ಕ. ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ 29 ಸಾವಿರ ಅಧಿಕವಿದೆ. 98 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ.

ಮತಗಟ್ಟೆ ಸಂಖ್ಯೆ ಹೆಚ್ಚಳ: ದ.ಕ. ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ 1790 ಮತಗಟ್ಟೆ ಹಾಗೂ 68 ಹೆಚ್ಚುವರಿ ಮತಗಟ್ಟೆಗಳಿದ್ದವು. ಈಗ ಹೆಚ್ಚುವರಿ ಮತಗಟ್ಟೆಗಳ ಪೈಕಿ 58 ಮತಗಟ್ಟೆಗಳನ್ನು ಪೂರ್ಣ ಪ್ರಮಾಣದ ಮತಗಟ್ಟೆಗಳಾಗಿ ಪರಿವರ್ತಿಸಲಾಗಿದೆ. ಮತದಾರರ ಸಂಖ್ಯೆಗೆ ಅನುಗುಣವಾಗಿ 13 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಲೋಕಸಭೆ ಚುನಾವಣೆಯಲ್ಲಿ 1,861 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಮಂಗಳೂರು ದಕ್ಷಿಣ ಹೆಚ್ಚು: ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕೇರಳದ ವಿದ್ಯಾರ್ಥಿಗಳ ಹೆಸರು ಅಕ್ರಮವಾಗಿ ಸೇರ್ಪಡೆ ಮಾಡಲಾಗಿದೆ ಎಂಬ ಆರೋಪ ವಿಧಾನಸಭೆ ಚುನಾವಣೆ ಸಂದರ್ಭ ಕೇಳಿ ಬಂದಿತ್ತು. ಕೇರಳದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಕೆಲವು ವಿದ್ಯಾರ್ಥಿಗಳ ಹೆಸರು ಇಲ್ಲೂ ಸೇರ್ಪಡೆಯಾಗಿರುವುದು ಪತ್ತೆಯಾಗಿತ್ತು. ಈಗ ಮಂಗಳೂರು ದಕ್ಷಿಣ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ದ.ಕ. ಜಿಲ್ಲೆಯಲ್ಲೇ ಅತಿ ಹೆಚ್ಚು 3,503 ಮಂದಿಯ ಹೆಸರು ಡಿಲೀಟ್ ಆಗಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ 2,924 ಮಂದಿಯ ಹೆಸರು ಪಟ್ಟಿಯಿಂದ ಕೈ ಬಿಡಲಾಗಿದೆ.

ದ.ಕ. ಕ್ಷೇತ್ರವಾರು ಡಿಲೀಟ್ ವಿವರ:
ಬೆಳ್ತಂಗಡಿ – 2924
ಮೂಡುಬಿದಿರೆ- 2075
ಮಂಗಳೂರು ಉತ್ತರ – 1833
ಮಂಗಳೂರು ದಕ್ಷಿಣ – 3503
ಮಂಗಳೂರು – 2501
ಬಂಟ್ವಾಳ – 1325
ಪುತ್ತೂರು – 1225
ಸುಳ್ಯ – 1582
ಒಟ್ಟು- 16,968

ಉಡುಪಿ, ಕಾಪು ಕ್ಷೇತ್ರದಲ್ಲಿ ಅತಿ ಹೆಚ್ಚು ಹೆಸರು ಡಿಲೀಟ್:  ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಈಗ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ 10,806 ಮಂದಿಯನ್ನು ಕೈಬಿಡಲಾಗಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭ 2,22,427 ಮತದಾರರಿದ್ದು, ಈಗ 481 ಮಂದಿ ಸೇರ್ಪಡೆ, 937 ಮಂದಿ ಡಿಲೀಟ್ ನಂತರ 2,21,971ಕ್ಕೆ ಬಂದಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 1,99,575 ಇದ್ದ ಮತದಾರರ ಸಂಖ್ಯೆ 863 ಸೇರ್ಪಡೆ, 944 ಡಿಲೀಟ್ ಬಳಿಕ 1,99,494ಕ್ಕೆ ತಲುಪಿದೆ. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 2,07,431 ಇದ್ದ ಮತದಾರರು 1954 ಸೇರ್ಪಡೆ, 4598 ಡಿಲೀಟ್ ಬಳಿಕ 2,04,787ಕ್ಕೆ ತಲುಪಿದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ 1,82,972 ಇದ್ದ ಮತದಾರರ ಸಂಖ್ಯೆ 1207 ಸೇರ್ಪಡೆ, 3759 ಡಿಲೀಟ್ ಬಳಿಕ 1,80,420 ಮುಟ್ಟಿದೆ. ಕಾರ್ಕಳ ಕ್ಷೇತ್ರದಲ್ಲಿದ್ದ 1,81,010 ಮತದಾರರ ಸಂಖ್ಯೆ 504 ಸೇರ್ಪಡೆ, 568 ಡಿಲೀಟ್ ಬಳಿಕ 1,80,946 ತಲುಪಿದೆ.

ಒಟ್ಟಾರೆ ಜಿಲ್ಲೆಯಲ್ಲಿ 9,93,415 ಇದ್ದ ಮತದಾರರ ಸಂಖ್ಯೆ 5009 ಸೇರ್ಪಡೆ, 10,806 ಡಿಲೀಟ್ ಬಳಿಕ 9,87,618ಕ್ಕೆ ಕುಸಿತ ಕಂಡಿದೆ.