ಭೋಪಾಲ್: ಒಂದು ಸರ್ಕಾರಿ ಶಾಲೆಯ 10 ಕಿಟಕಿ ಮತ್ತು ನಾಲ್ಕು ಬಾಗಿಲುಗಳಿಗೆ ಪೇಂಟ್ ಮಾಡಲು 275 ಕಾರ್ವಿುಕರು ಮತ್ತು 150 ಮೇಸ್ತ್ರಿಗಳು, ಸರ್ಕಾರಿ ಶಾಲೆಯೊಂದರ ಗೋಡೆಗೆ ನಾಲ್ಕು ಲೀಟರ್ ಪೇಂಟ್ ಬಳಿಯಲು 168 ಕಾರ್ವಿುಕರು ಮತ್ತು 65 ಮೇಸ್ತ್ರಿಗಳು!! ಇವೆಲ್ಲವೂ ವಿಚಿತ್ರವೆಂದು ಕಂಡರೂ ನಿಜಕ್ಕೂ ನಡೆದಿರುವ ವಿದ್ಯಮಾನ. ಭ್ರಷ್ಟಾಚಾರಕ್ಕೆ ಈ ರೀತಿಯ ವರ್ಣಮಯ ಮುಖವೂ ಇರುತ್ತದೆ ಎಂಬುದು ಮಧ್ಯಪ್ರದೇಶದ ಈ ಪ್ರಕರಣಗಳಿಂದ ಬಯಲಾಗಿದೆ.
ರಾಜ್ಯದ ಸಹ್ದೋಲ್ ಜಿಲ್ಲೆಯ ಸಕಂಡಿ ಮತ್ತು ನಿಪಾನಿಯಾ ಎಂಬ ಗ್ರಾಮಗಳಲ್ಲಿ ಈ ಗಣಿತದ ಪವಾಡಗಳು ನಡೆದಿವೆ. ಸಕಂಡಿಯ ಶಾಲೆಗೆ ನಾಲ್ಕು ಲೀಟರ್ ಬಣ್ಣ ಬಳಿಯಲು 1.07 ಲಕ್ಷ ರೂ. ಹಾಗೂ ನಿಪಾನಿಯಾದಲ್ಲಿ 20 ಲೀಟರ್ ಪೇಂಟ್ ಹಾಕಲು 2.3 ಲಕ್ಷ ರೂ. ಪಾವತಿಸಿರುವ ಬಿಲ್ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಎರಡೂ ಪ್ರಕರಣಗಳಲ್ಲಿ, ಗೋಡೆ, ಕಿಟಕಿ-ಬಾಗಿಲುಗಳ ಮೇಲೆ ಕಲೆಗಾರಿಕೆ ಮೂಡುವ ಬದಲು ಪೇಪರ್ ವರ್ಕ್ನಲ್ಲಿ ಕಂಡು ಬಂದಿದೆ!