27 ಲಕ್ಷ ಮೌಲ್ಯದ ಸಿದ್ಧ ಉಡುಪು ಜಪ್ತಿ

ದೊಡ್ಡಬಳ್ಳಾಪುರ: ಸಿದ್ಧ ಉಡುಪು ಕಾರ್ಖಾನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಉಡುಪು ಕಳವು ಮಾಡಿದ್ದ ಪ್ರಕರಣ ಭೇದಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅದೇ ಕಂಪನಿ ಸುಬ್ಬಂದಿ, ತಮಿಳುನಾಡು ಮೂಲದ ಪ್ರಸ್ತುತ ಬೆಂಗಳೂರಿನ ನಿವಾಸಿ ವಿ.ರವಿಕುಮಾರ್(42) ಬಂಧಿತ.

ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಸಿಪಿ ವೃತ್ತದ ಬಳಿಯ ಸಾನ್ವಿ ಇಂಡಸ್ಟ್ರೀಸ್ ಮಹಿಳೆಯರ ಸಿದ್ಧ ಉಡುಪು ಕಾರ್ಖಾನೆಯಲ್ಲಿ 27 ಲಕ್ಷ ರೂ. ಮೌಲ್ಯದ ಉಡುಪು ಕಳವು ಮಾಡಲಾಗಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯಿಂದ ಕಳವು ಮಾಲು ಜಪ್ತಿ ಮಾಡಿ, ಆತನನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ರಾಮ್ ನಿವಾಸ್ ಸೆಪಟ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾನ್ವಿ ಇಂಡಸ್ಟ್ರೀಸ್​ನಲ್ಲಿ ಫೆ.7ರಂದು ಪಂಜಾಬ್​ನಿಂದ ಕಾರ್ಖಾನೆಗೆ 70 ಕರ್ಟನ್ ಬಾಕ್ಸ್​ಗಳಲ್ಲಿದ್ದ ಸಿದ್ದ ಉಡುಪುಗಳು ಬಂದಿದ್ದವು. ಈ ಬಾಕ್ಸ್​ಗಳನ್ನು 4ನೇ ಮಹಡಿಯಲ್ಲಿ ಇಡಲಾಗಿತ್ತು. ಆದರೆ ಮಾಲು ಕಳವವಾಗಿದೆ ಎಂದು ಕಂಪನಿಯ ಆಡಳಿತ ವಿಭಾಗದ ಕೃಷ್ಣಮೂರ್ತಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಅನುಮಾನದ ಮೇಲೆ 8 ತಿಂಗಳಿನಿಂದ ಕಂಪನಿ ಉಪಾಧ್ಯಕ್ಷನಾಗಿ ನೇಮಕವಾಗಿದ್ದ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕಾರ್ಖಾನೆಯಲ್ಲಿದ್ದ ಉಡುಪುಗಳನ್ನು ದೊಡ್ಡಬಳ್ಳಾಪುರದ ಟಿ.ಬಿ.ವೃತ್ತದ ಬಳಿಯಿರುವ ಮುತ್ತುಕುಮಾರಸ್ವಾಮಿ ಎಂಬುವವರಿಗೆ 6 ಲಕ್ಷ ರೂ.ಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.

ಅಪರ ಪೊಲೀಸ್ ಅಧೀಕ್ಷಕ ವಿ.ಜೆ.ಸಜೀತ್ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸಿರುವ ಡಿವೈಎಸ್​ಪಿ ಮೋಹನ್ ಕುಮಾರ್, ಸರ್ಕಲ್ ಇನ್​ಸ್ಪೆಕ್ಟರ್ ಸಿದ್ದರಾಜು, ನಗರ ಠಾಣೆ ಸಬ್​ಇನ್​ಸ್ಪೆಕ್ಟರ್ ಕೆ.ವೆಂಕಟೇಶ್, ಅಪರಾಧ ವಿಭಾಗದ ಸಬ್ ಇನ್​ಸ್ಪೆಕ್ಟರ್ ಸಿ.ರಂಗನಾಥ್ ಹಾಗೂ ಸಿಬ್ಬಂದಿಯನ್ನು ಎಸ್​ಪಿ ಅಭಿನಂದಿಸಿದರು.