26ರಿಂದ ಫಲಪುಷ್ಪ ಪ್ರದರ್ಶನ

ರಾಮನಗರ: ಫಲಪುಷ್ಪ ಪ್ರದರ್ಶನದೊಂದಿಗೆ ಕೃಷಿ ಚಟುವಟಿಕೆಗಳ ವ್ಯಾಪ್ತಿಗೆ ಒಳಪಡುವ ಇಲಾಖೆಗಳ ಸಹಯೋಗದೊಂದಿಗೆ ಜ. 26ರಿಂದ 28ರವರೆಗೆ ಸುಗ್ಗಿ ಹಬ್ಬದ ರೀತಿಯ ಉತ್ಸವ ಏರ್ಪಡಿಸಲು ಚಿಂತಿಸಲಾಗಿದ್ದು, ಸಂಬಂಧಿಸಿದ ಇಲಾಖೆಗಳು ಕಾರ್ಯೋನ್ಮುಖವಾಗಬೇಕು ಎಂದು ಜಿಪಂ ಉಪಕಾರ್ಯದರ್ಶಿ ಉಮೇಶ್ ಸೂಚಿಸಿದರು.

ಜಿಪಂ ಸಭಾಗಂಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನ ಹಾಗೂ ಸುಗ್ಗಿ ಉತ್ಸವ ಆಚರಣೆ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಅರಣ್ಯ, ಮೀನುಗಾರಿಕೆ, ಕೃಷಿ ವಿಜ್ಞಾನ ಕೇಂದ್ರಗಳು ಸೇರಿ ಕೃಷಿ ಚಟುವಟಿಕೆಗಳನ್ನು ಬಿಂಬಿಸುವ ಎಲ್ಲ ಇಲಾಖೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿ ಸಂಬಂಧಿಸಿದ ಎಲ್ಲ ಇಲಾಖೆಗಳು ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾಹಿತಿ ನೀಡುವುದರೊಂದಿಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಗುಣವಂತ್ ಮಾತನಾಡಿ, ಎಲ್ಲ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಈ ಬಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುವುದು. 30ರಿಂದ 35 ಮಳಿಗೆ ತೆರೆದು ಸರ್ಕಾರದಿಂದ ನೀಡುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಲಾಗುವುದು. ಸೇವಂತಿಗೆ ಮತ್ತು ಗುಲಾಬಿ ಹೂಗಳಿಂದ ಅಲಂಕೃತಗೊಳ್ಳುವ ಕೆಂಗಲ್ ಆಂಜನೇಯ ದೇವಸ್ಥಾನ ಗೋಪುರ ಮಾದರಿ, ಆಂಜನೇಯ ಸ್ವಾಮಿಯ ಮರಳಿನ ಕಲಾಕೃತಿ, ವಿವಿಧ ವಿನ್ಯಾಸಗಳಿಗೆ ತರಕಾರಿ ಮತ್ತು ಹೂ ಜೋಡಣೆ, ಕಲಾಕೃತಿಗಳ ಪ್ರದರ್ಶನ, ರಂಗೋಲಿಯಲ್ಲಿ ಬಿಡಿಸಿದ ಗಣ್ಯ ವ್ಯಕ್ತಿಗಳ ಭಾವಚಿತ್ರಗಳು ಹಾಗೂ ಪುಷ್ಪ ರಂಗೋಲಿ, ವಿವಿಧ ತರಕಾರಿಗಳ ಕೆತ್ತನೆ ಕಲಾಕೃತಿಗಳು, ತೆಂಗಿನ ಕಾಯಿಗಳಿಂದ ಮಾಡಿದ ಕಲಾಕೃತಿ, ವರ್ಟಿಕಲ್ ಗಾರ್ಡನ್ ಮತ್ತು ಊಟಿ ಫ್ಲವರ್ ಅರೇಂಜ್​ವೆುಂಟ್ ಈ ಬಾರಿಯ ಆಕರ್ಷಣೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಡಾ. ಮಲ್ಲಿಕಾರ್ಜುನ, ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಶಿವಲಿಂಗಯ್ಯ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಯರಾಮಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ರೈತರಿಗೆ ತಾಂತ್ರಿಕೆ ಮಾಹಿತಿ: ವಿವಿಧ ರೈತ ಸಂಬಂಧಿ ಇಲಾಖೆಗಳ ಪ್ರಾತ್ಯಕ್ಷಿಕೆ ಮೂಲಕ ಯೋಜನೆಗಳ ತಾಂತ್ರಿಕ ಮಾಹಿತಿ ಒದಗಿಸಲಾಗುವುದು. ಹೈಡ್ರೋಫೋನಿಕ್ಸ್ ಮಾದರಿ, ಅಣಬೆ ಕೃಷಿ ಹಾಗೂ ಜೇನು ಸಾಕಾಣಿಕೆ ಪ್ರಾತ್ಯಕ್ಷಿಕೆ ನೀಡಲಾಗುವುದು. ಕೈತೋಟ ಹಾಗೂ ತಾರಸಿ ತೋಟದ ಪ್ರಾತ್ಯಕ್ಷಿಕೆ, ತೋಟಗಾರಿಕೆ ಕಸಿಗಿಡಗಳ ಮಾರಾಟಕ್ಕೆ ಸಸ್ಯ ಸಂತೆ ನಿರ್ವಿುಸಲಾಗುವುದು, ಕೃಷಿ ವಸ್ತು ಪ್ರದರ್ಶನ, ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಗಳ ಪ್ರದರ್ಶನ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ಕೃಷಿ ವಿವಿ ಮಳಿಗೆ ಸ್ಥಾಪಿಸಿ ರೈತರಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಾಂತ್ರಿಕೆ ಮಾಹಿತಿ ಒದಗಿಸಲಾಗುವುದು ಎಂದು ಗುಣವಂತ್ ಮಾಹಿತಿ ನೀಡಿದರು.