ಸಿನಿಮಾ

26ರಂದು ಶ್ರೀ ದೊಡ್ಡಮ್ಮತಾಯಿ ರಥೋತ್ಸವ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಗೊರಹಳ್ಳಿ ಗ್ರಾಮದಲ್ಲಿ ಮೇ 26ರಂದು ರಾತ್ರಿ ಶ್ರೀ ದೊಡ್ಡಮ್ಮ ತಾಯಿ ರಥೋತ್ಸವ ನಡೆಯಲಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.

ಸುಮಾರು ಐದು ವರ್ಷಗಳ ಬಳಿಕ ಗ್ರಾಮದಲ್ಲಿ ಎಲ್ಲ ಕೋಮಿನ ಜನರು ಒಟ್ಟಾಗಿ ಸೇರಿ ಶ್ರೀ ದೊಡ್ಡಮ್ಮ ತಾಯಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. 26ರಂದು ಬೆಳಗ್ಗೆ ರಥದ ಮೇಲೆ ಕಳಸ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ಶ್ರೀ ದೊಡ್ಡಮ್ಮ ತಾಯಿ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಿದ ಪಲ್ಲಕ್ಕಿ ಮೇಲೆ ಇರಿಸಿ ತೇರಿನ ಸುತ್ತ ಮೂರು ಪ್ರದಕ್ಷಿಣೆ ಹಾಕಿದ ಬಳಿಕ ಶುಭಲಗ್ನದಲ್ಲಿ ರಥದ ಮೇಲೆ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಬಳಿಯಿಂದ ಹೊರವಲಯದಲ್ಲಿರುವ ಶ್ರೀ ದೊಡ್ಡಮ್ಮ- ಶ್ರೀ ಚಿಕ್ಕಮ್ಮ ತಾಯಿ ದೇವಸ್ಥಾನದವರೆಗೆ ಒಂದು ಕಿ.ಮೀ. ದೂರದವರೆಗೆ ನೂರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಲಿದೆ.

ಈ ಸಂದರ್ಭದಲ್ಲಿ ಪಟಾಕಿ ಸಿಡಿಸುವುದು, ಡೊಳ್ಳು ಕುಣಿತದ ಮೂಲಕ ದೇವಿಯನ್ನು ಭಕ್ತಾದಿಗಳು ಆರಾಧಿಸಲಿದ್ದಾರೆ. ಬಳಿಕ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನದ ಸಮೀಪಕ್ಕೆ ರಥವು ಆಗಮಿಸಿದ ನಂತರ ವಿಶೇಷ ಪೂಜೆಗಳು ನಡೆಯುತ್ತವೆ. ಇದೇ ವೇಳೆ ಭಕ್ತಾದಿಗಳು ಕೊಂಡಹಾಯುವ ಮತ್ತು ದೇವಿಗೆ ಎಡೆಇಡುತ್ತಾರೆ. ಮದುವೆ, ಸಂತಾನ ಭಾಗ್ಯ ಪ್ರಾಪ್ತಿಗೆ ಹಾಗೂ ಕೌಟುಂಬಿಕ ಸಮಸ್ಯೆ, ಆರೋಗ್ಯ ಸೇರಿದಂತೆ ಇತರ ಸಮಸ್ಯೆಗಳು ನಿವಾರಣೆ ಆಗಲೆಂದು ತಾಯಿಗೆ ಹರಕೆ ಮಾಡಿಕೊಂಡವರು ಹರಕೆ ತೀರಿಸಿ ಆರಾಧಿಸುತ್ತಾರೆ. ದೊಡ್ಡಮ್ಮತಾಯಿ ಹಬ್ಬದ ಹಿನ್ನೆಲೆಯಲ್ಲಿ ಮೇ 30ರಂದು ಶ್ರೀ ಚಿಕ್ಕಮ್ಮತಾಯಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.

ಗ್ರಾಮದಲ್ಲಿ ಈಗಾಗಲೇ ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಐದು ವರ್ಷಗಳ ಬಳಿಕ ಗ್ರಾಮದಲ್ಲಿ ಹಬ್ಬ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೂರದ ಊರಿಂದ ಕುಟುಂಬಸ್ಥರು ಮತ್ತು ಸ್ನೇಹಿತರು ಆಗಮಿಸುತ್ತಿದ್ದಾರೆ.

Latest Posts

ಲೈಫ್‌ಸ್ಟೈಲ್