More

    ಶ್ರೀ ಚನ್ನವೀರಶರಣರ 25ನೇ ಸ್ಮರಣೋತ್ಸವ; ರಥಸಪ್ತಮಿಯಂದು ರಥೋತ್ಸವ

    ಗದುಗಿನ ಸುಕ್ಷೇತ್ರ ಬಳಗಾನೂರಿನಲ್ಲಿ ಶ್ರೀ ಶಿವಶಾಂತವೀರ ಶರಣರು ಪ್ರತಿ ವರ್ಷ ತಮ್ಮ ಗುರುಗಳಾದ ಚಿಕೇನಕೊಪ್ಪ ಶ್ರೀ ಚನ್ನವೀರಶರಣರ ಸ್ಮರಣಾರ್ಥ ಅನೇಕ ಜನಪರ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇದೇ ಫೆ. 1ರಂದು ಚನ್ನವೀರಶರಣರ 25ನೇ ಸ್ಮರಣೋತ್ಸವ ಜರುಗಲಿದ್ದು, ನಾಡಿನ ಹರ-ಗುರು ಚರಮೂರ್ತಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

    ಭವದ ಬಂಧನಕ್ಕೊಳಗಾಗದೆ ಆಸೆ ಆಕಾಂಕ್ಷೆಗಳನ್ನೆಲ್ಲ ಮೆಟ್ಟಿ ನಿಂತು ಅಧ್ಯಾತ್ಮದ ಆಳ ಅರಿಯುವ ಹಾಗೂ ತಿಳಿಸುವ ಮಹಾತ್ಮರ ಪಂಕ್ತಿಗಳಲ್ಲಿ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರು ಅಗ್ರಗಣ್ಯರು. ಯುಗಪುರುಷರಾಗಿ ಲೋಕಕಲ್ಯಾಣ ಚಿಂತನೆಯ ಹರಿಕಾರರಾಗಿ ಬದುಕನ್ನು ಗಂಧದ ಕೊರಡಿನಂತೆ ತೇಯ್ದ ಹಠಯೋಗಿ. ಭೂತ, ವರ್ತಮಾನ ಮತ್ತು ಭವಿಷ್ಯತ್ತನ್ನು ದಿವ್ಯದೃಷ್ಟಿಯಿಂದ ತೋರ್ಪಡಿಸಿದ ತ್ರಿಕಾಲಜ್ಞಾನಿಗಳು. ಜನಕಲ್ಯಾಣಕ್ಕಾಗಿ ಭೂಲೋಕದಲ್ಲಿ ಅವತರಿಸಿದ, ಕಂಡದ್ದನ್ನು ಕೆಂಡದಂತೆ ನಿರೂಪಿಸುವ ದಿಟ್ಟ ಅವತಾರಿ ಪುರುಷರು.

    ಬಡತನದ ಬೇಗೆಯಲ್ಲಿ ಬೆಂದು ಬಟ್ಟೆ ಇಲ್ಲದೆ ಬದುಕು ಸಾಗಿಸುವ ಬಡವರ ನೋವು, ವೇದನೆ ಅರಿತು ತೊಟ್ಟ ಬಟ್ಟೆ ತ್ಯಜಿಸಿ ಬರೀ ಒಂದು ಪಂಚೆಯಲ್ಲಿಯೇ ಬದುಕು ಮುಗಿಸಿದ ಈ ಬರಿಮೈ ಸಂತ ಚನ್ನವೀರಶರಣರು ನಡೆದದ್ದೇ ದಾರಿ, ಆಡಿದ್ದೇ ವೇದವಾಕ್ಯ. ಖಾನಯ್ಯ ಮತ್ತು ಶಿವಮ್ಮನವರ ಪುಣ್ಯಗರ್ಭದಲ್ಲಿ 1923ರ ಜೂನ್ 15ರಂದು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಚಿಕೇನಕೊಪ್ಪದಲ್ಲಿ ಜನಿಸಿದರು. ಈ ಕೂಸು ಮುಂದೊಂದು ದಿನ ಜಗವನ್ನು ಬೆಳಗುವ ಪರಂಜ್ಯೋತಿ ಆಗುತ್ತದೆ ಎಂದು ಯಾರು ತಾನೇ ಬಲ್ಲರು? ಖಾನಯ್ಯನವರ ಪೂರ್ವಜರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪೂರದ ಹಿರೇಮಠ ಅವರ ಮನೆತನದವರು. ಬೆಳಗಾವಿ ಜಿಲ್ಲೆ ಬರಗಾಲಕ್ಕೆ ತುತ್ತಾದಾಗ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರಿವಾರ ಸಮೇತ ಖಾನಯ್ಯನವರು ರಾಯಚೂರು ಜಿಲ್ಲೆಯ ಲಿಂಗಸೂರ ತಾಲೂಕಿನ ಗುಡಗುಂಟಿ ಗ್ರಾಮಕ್ಕೆ ವಲಸೆ ಬಂದರು. ಈ ಗ್ರಾಮದ ಅಮರೇಶ್ವರ ದೇವಸ್ಥಾನವೇ ಅವರ ವಾಸಸ್ಥಳವಾಯಿತು. ನಂತರ ಗದಗ ಜಿಲ್ಲೆಯ ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಮಠಕ್ಕೆ ಬಂದರು. ಅಲ್ಲಿಂದ ಕೊಪ್ಪಳ ಜಿಲ್ಲೆ ಬಿನ್ನಾಳ ಗ್ರಾಮಕ್ಕೆ ಬಂದರು. ಹೀಗೆ ಆಹಾರದನ್ವೇಷಣೆಗಾಗಿ ಗ್ರಾಮದಿಂದ ಗ್ರಾಮಕ್ಕೆ ಇವರ ಅಲೆದಾಟ. ಬಿನ್ನಾಳ ಮತ್ತು ಸಮೀಪದ ಚಿಕೇನಕೊಪ್ಪ ಗ್ರಾಮದಲ್ಲಿ ನೆಲೆ ನಿಂತರು. ಪೂರ್ವಜರು ಚಿಕೇನಕೊಪ್ಪದಲ್ಲಿ ನೆಲೆನಿಂತ ಕಾರಣ ಈ ಗ್ರಾಮ ಶ್ರೀ ಚನ್ನವೀರಶರಣರ ಜನ್ಮಸ್ಥಳವಾಯಿತು. ಆ ಸಂದರ್ಭದಲ್ಲಿ ಚಿಕೇನಕೊಪ್ಪ ಗ್ರಾಮ ಹೈದರಾಬಾದ್ ಪ್ರಾಂತಕ್ಕೊಳಪಟ್ಟಿತ್ತು. ಎಲ್ಲೆಡೆ ಉರ್ದು ಶಾಲೆಗಳು ತಲೆ ಎತ್ತಿದ್ದವು. ಶರಣರು ಮೂರನೇ ತರಗತಿಯವರೆಗೆ ಚಿಕೇನಕೊಪ್ಪದಲ್ಲಿ ಉರ್ದು ಅಭ್ಯಾಸ ಮಾಡಿದರು.

    ಸಂಗನಾಳ ಸಿದ್ರಾಮಯ್ಯನವರು ಇವರ ಬಾಲ್ಯದ ಗುರುಗಳು. ಕನ್ನಡ ಕಲಿಸಬೇಕೆಂಬ ತಂದೆ ಖಾನಯ್ಯನವರ ಹಂಬಲ ಒಳಗೊಳಗೆ ಕುದಿಯುತ್ತಿತ್ತು. ಹೀಗಾಗಿ ಅವರನ್ನು ಗದಗ ತಾಲೂಕಿನ ಬಳಗಾನೂರಕ್ಕೆ ಕಳುಹಿಸಲಾಯಿತು. ಬಾಲ್ಯದಲ್ಲಿ ಇವರಿಗೆ ಪ್ರೀತಿಯಿಂದ ಚಂಡ್ರಯ್ಯ ಎಂದೇ ಕರೆಯುತ್ತಿದ್ದರು. ಚಂಡ್ರಯ್ಯ ಯಾವಾಗಲೂ ಏಕಾಂತದಲ್ಲಿರುವ ಸ್ವಭಾವದವರು. ಧ್ಯಾನದಲ್ಲಿ ಕುಳಿತುಕೊಳ್ಳುವುದು ಅಭ್ಯಾಸವಾಯಿತು. ತನಗೆ ಅನಿಸಿದ ವಿಚಾರ ಪೂರ್ಣಗೊಳ್ಳುವವರೆಗೂ ಮತ್ತೇನನ್ನೂ ವಿಚಾರಿಸುತ್ತಿರಲಿಲ್ಲ. ಬಳಗಾನೂರದಲ್ಲಿ ಗೂಳರಡ್ಡಿಯವರು ಚಂಡ್ರಯ್ಯನಿಗೆ ಆಶ್ರಯ ನೀಡಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದರು. ಅವರಿಗೆ ಶಾಲೆಯ ಅಭ್ಯಾಸಕ್ಕಿಂತ ಪಾರಮಾರ್ಥಿಕ ವಿಚಾರದ ಬಗೆಗೆ ಆಸಕ್ತಿ ಶುರುವಾಯಿತು. ಏಳನೇ ತರಗತಿ ಪೂರ್ಣಗೊಳಿಸಿದ ಚಂಡ್ರಯ್ಯ ಕನ್ನಡ ಕಲಿಸುವ ಶಿಕ್ಷಕರಾಗಿ ಜನ್ಮಸ್ಥಳ ಚಿಕೇನಕೊಪ್ಪದಲ್ಲಿ ಕೆಲಕಾಲ ನಿಂತರು. ಬೆಳೆದು ದೊಡ್ಡವರಾದಂತೆ ಖಾನಯ್ಯನವರಿಗೆ ಮಗನ ಮದುವೆ ಚಿಂತೆಯಾಯಿತು. ಹೇಗಾದರೂ ಮಾಡಿ ಮದುವೆ ಮಾಡಿದರಾಯಿತು ಎಂಬ ವಿಚಾರವನ್ನು ಮಗನಿಗೆ ತಿಳಿಸಿದರು. ಮದುವೆ ವಿಚಾರ ಕಿವಿಗೆ ಬಿದ್ದಾಕ್ಷಣ ಉಗ್ರಗೊಂಡ ಚಂಡ್ರಯ್ಯ ಸಂಸಾರದ ಜಂಜಾಟದಿಂದ ದೂರ ಉಳಿಯಬೇಕೆಂದು ದೃಢ ನಿರ್ಧಾರ ಮಾಡಿ ಹನ್ನೆರಡು ವರ್ಷಗಳ ಕಾಲ ಲೋಕಕಲ್ಯಾಣಕ್ಕಾಗಿ ಸಂಚಾರಗೈದರು. ಕಾಡಿನಲ್ಲಿ ಕಠೋರ ಅನುಷ್ಠಾನ ಮಾಡಿದರು. ಜನಕಲ್ಯಾಣ ಇವರ ಗುರಿಯಾಯಿತು. ಸಂಸಾರ, ಕುಟುಂಬ, ಬಂಧು-ಬಳಗ ಇವರಿಗೆ ಬೇಡವಾಯ್ತು. ಕೈಯಲ್ಲಿ ಜಪಮಣಿ, ಬೆತ್ತ, ಬಗಲಲ್ಲಿ ಜೋಳಿಗೆ, ಕಾಲಲ್ಲಿ ಆವುಗೆ, ತಲೆಯಮೇಲೆ ಬಿಳಿಯ ಗೋಲ್ ಟೋಪಿ, ಕಣ್ಣಿಗೆ ಕಪ್ಪನೆಯ ಕನ್ನಡಕ, ನೀರಪಂಜೆ ಧರಿಸಿ ಸಂಚಾರ ಮಾಡುವ ಈ ಯೋಗಿಯ ವರ್ತನೆ ಸಂಪೂರ್ಣ ಭಿನ್ನವಾಗಿ ಕಂಡವು. ಇದನ್ನರಿತ ತಾಯಿ-ತಂದೆಗಳಿಗೆ ಏನನ್ನೂ ತಿಳಿಯದೆ ಅವನಿಚ್ಛೆಯಂತೆ ನಡೆದುಕೊಳ್ಳುವುದು ಅನಿವಾರ್ಯವಾಯಿತು. ಹನ್ನೆರಡು ವರ್ಷ ಕಠೋರ ವ್ರತ ಮುಗಿಸಿ ತಾಯಿಯನ್ನೊಮ್ಮೆ ನೋಡಲು ಮನೆಗೆ ಬಂದ ಈ ಮಹಾತ್ಮನನ್ನು ಕಂಡು ಜನ ನಿಬ್ಬೆರಗಾದರು. ಎಲ್ಲವನ್ನೂ ಮೌನದಲ್ಲಿ ಉತ್ತರಿಸುವ ಮಹಾಶರಣರಾಗಿ ಕಂಡರು. ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಗುರುವಾಗಿ ಅನುಗ್ರಹಿಸಿದರು.

    ಅಂದಿನಿಂದ ಇವರು ಬರೀ ಚನ್ನವೀರಶರಣ ಅಲ್ಲ, ಲೋಕಕಲ್ಯಾಣ ಮಾಡುವ ಚಿಕೇನಕೊಪ್ಪದ ಶ್ರೀ ಚನ್ನವೀರಶರಣರು ಎಂದು ಆಶೀರ್ವದಿಸಿದರು. ಇಂತಹ ಮಹಾತ್ಮ ಮುಂದೊಂದು ದಿನ ಬಳಗಾನೂರಿನಲ್ಲಿ ನೆಲೆನಿಂತು ಸುತ್ತಲಿನ ಅಸಂಖ್ಯಾತ ಭಕ್ತರ ಪಾಲಿನ ದೇವರಾದರು. ಇವರ ಲೀಲೆ-ಪವಾಡಗಳನ್ನರಿತ ಭಕ್ತಜನರು ಸಾಗರೋಪಾದಿಯಲ್ಲಿ ಶ್ರೀಮಠಕ್ಕೆ ಬರತೊಡಗಿದರು. ಅನೇಕ ವರ್ಷಗಳ ಕಾಲ ಭಕ್ತರನ್ನು ಉದ್ಧರಿಸಿದ ಈ ಜ್ಯೋತಿ 1995ರ ಮಾಘ ಶುದ್ಧ ರಥಸಪ್ತಮಿಯಂದು (ಫೆಬ್ರವರಿ ಆರು) ಪ್ರಕಾಶದಲ್ಲಿ ಲೀನವಾಯಿತು.

    ರಜತಮೂರ್ತಿಯ ಮೆರವಣಿಗೆ

    ಶ್ರೀ ಶಿವಶಾಂತವೀರ ಶರಣರು ಪ್ರತಿ ವರ್ಷ ತಮ್ಮ ಗುರುಗಳ ಸ್ಮರಣಾರ್ಥ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಬಾರಿ ಜ. 31ರಂದು ನೂತನ ಶ್ರೀ ಚನ್ನವೀರ ಶರಣರ ಸಮುದಾಯ ಭವನ ಉದ್ಘಾಟನೆ ಆಗಲಿದೆ. ಫೆ. 1ರಂದು ಚನ್ನವೀರ ಶರಣರ 25ನೇ ಪುಣ್ಯಸ್ಮರಣೋತ್ಸವ ಹಾಗೂ 101 ಜೋಡಿಗಳ ಸಾಮೂಹಿಕ ವಿವಾಹ ನೆರವೇರಲಿದೆ. ಸಂಜೆ ಮಹಾ ರಥೋತ್ಸವ, ಧಾರ್ವಿುಕ ಚಿಂತನಾಗೋಷ್ಠಿ ನಡೆಯಲಿದೆ. 2ರಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ರಜತ ಮೂರ್ತಿಯ ಉತ್ಸವ ನಡೆಯಲಿದ್ದು, ಸಂಜೆ ವಿಶೇಷ ಕಡುಬಿನ ಕಾಳಗ ನಡೆಯಲಿದೆ. ಈ ಮಹೋತ್ಸವದಲ್ಲಿ ಮುಂಡರಗಿ ಜಗದ್ಗುರು ನಾಡೋಜ ಅನ್ನದಾನೀಶ್ವರ ಮಹಾಸ್ವಾಮಿಗಳು, ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಸೇರಿದಂತೆ ನಾಡಿನ ಹರ-ಗುರು ಚರಮೂರ್ತಿಗಳು ಸಾನ್ನಿಧ್ಯ ವಹಿಸಲಿದ್ದಾರೆ.

    | ಮೃತ್ಯುಂಜಯ ಕಲ್ಮಠ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts