ದುಬೈ: ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತದ 25 ವರ್ಷದ ಯುವಕ ದುಬೈನ ಬಿಲ್ಡಿಂಗ್ ಒಂದರಿಂದ ಬಿದ್ದು ಸತ್ತಿರುವ ಘಟನೆ ನಡೆದಿದೆ.
ಕೇರಳ ಮೂಲದ ಸಬೀಲ್ ರೆಹಮಾನ್ ಹೆಸರಿನ ಯುವಕ 2018ರಿಂದ ದುಬೈನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಸೋಮವಾರದಂದು ಆತ ತಾನು ಕೆಲಸ ಮಾಡುತ್ತಿದ್ದ ಜಾಗದ ಬಳಿ ಇದ್ದ ಬಿಲ್ಡಿಂಗ್ ಒಂದರಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ನಸೀರ್ ವಟನಪಲ್ಲಿ ಎಂಬ ಸಾಮಾಜಿಕ ಕಾರ್ಯಕರ್ತ ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾಲ್ಕು ಜನ ಮಕ್ಕಳಿದ್ದ ಕುಟುಂಬದಲ್ಲಿ ಸಬೀಲ್ ಕೊನೆಯ ಮಗನಾಗಿದ್ದು ದುಬೈನಲ್ಲಿ ತನ್ನ ಅಣ್ಣನ ಕುಟುಂಬದೊಂದಿಗೆ ಆತನ ಮನೆಯಲ್ಲೇ ವಾಸಿಸುತ್ತಿದ್ದ. ಸೋಮವಾರ ಮುಂಜಾನೆ ಎಂದಿನಂತೆ ಕೆಲಸಕ್ಕೆ ಹೊರಡುವಾಗ ತಿಂಡಿಯನ್ನು ಕಟ್ಟಿಕೊಂಡು ಹೊರಟಿದ್ದ. ತಾನು ಆನ್ಲೈನ್ನಲ್ಲಿ ಫೋನ್ ಒಂದನ್ನು ಬುಕ್ ಮಾಡಿರುವುದಾಗಿ ತಿಳಿಸಿದ್ದ ಆತ ಅದನ್ನು ತೆಗೆದುಕೊಳ್ಳುವಂತೆ ಮನೆಯವರಲ್ಲಿ ಹೇಳಿ ಹೋಗಿದ್ದ.
ಮಾಮೂಲಿಯಂತೆ ಹೊರಟ ಸಬೀಲ್ ಆ ಬಿಲ್ಡಿಂಗ್ಗೆ ಏಕೆ ಹೋದ ಅಲ್ಲಿಂದ ಏತಕ್ಕಾಗಿ ಬಿದ್ದ ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕಿದೆ. ನಸೀರ್ ವಟನಪಲ್ಲಿ ಮೃತ ವ್ಯಕ್ತಿಯ ಅವಶೇಷವನ್ನು ಆತನ ಹುಟ್ಟೂರಾದ ಮಲಪ್ಪುರಂ ಜಿಲ್ಲೆಯ ತಿರೂರಿಗೆ ಕಳುಹಿಸಲು ಆತನ ಕುಟುಂಬಕ್ಕೆ ನೆರವು ಮಾಡುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)