25 ಜನರ ವಿರುದ್ಧ ದೂರು ದಾಖಲು

ಹಳಿಯಾಳ: ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯ ವಿರೋಧದ ನಡುವೆಯೂ ಮಂಗಳವಾರ ರಾತ್ರೋರಾತ್ರಿ ಕಿಲ್ಲಾ ಕೋಟೆಯ ಬಳಿಯ ವೃತ್ತದಲ್ಲಿ ಶಿವಾಜಿ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿದ್ದ ಮರಾಠಾ ಸಮುದಾಯದ ಆರು ಮಹಿಳೆಯರು ಸೇರಿ ಒಟ್ಟು 25 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಜೆಪಿ ಘಟಕದ ಅಧ್ಯಕ್ಷ ಶಿವಾಜಿ ನರಸಾನಿ, ಪುರಸಭೆ ನೂತನ ಸದಸ್ಯ ಸಂತೋಷ ಘಟಕಾಂಬ್ಳೆ ಮತ್ತು ಬಿಜೆಪಿ ಮುಖಂಡ ವಿಜಯ ಬೊಬಾಟೆ ಪ್ರಕರಣ ದಾಖಲಾದವರಲ್ಲಿ ಪ್ರಮುಖರಾಗಿದ್ದಾರೆ.

ಪುತ್ಥಳಿ ಪ್ರತಿಷ್ಠಾಪನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳಿಯಾಳ ಸಿಪಿಐ ಹಾಗೂ ಪುರಸಭೆ ಮುಖ್ಯಾಧಿಕಾರಿ ಹಳಿಯಾಳ ಠಾಣೆಯಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದರು.

ಪರವಾನಗಿ ಇಲ್ಲದೆ ಪ್ರತಿಷ್ಠಾಪನೆ: ರಾಜ್ಯ ಸರ್ಕಾರದ ಅಧೀನದಲ್ಲಿರುವ ಜಮೀನಿನಲ್ಲಿ ಯಾವುದೇ ಇಲಾಖೆಯ ಪರವಾನಗಿ ಇಲ್ಲದೇ ಹಾಗೂ ಸುಪ್ರೀಂ ಕೋರ್ಟ್ ಆದೇಶ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನ ಉಲ್ಲಂಘಿಸಿ ಶ್ರೀನಿವಾಸ ಸಾಳುಂಕೆ, ಪವನ ಪಾಟೀಲ, ನಾಗೇಂದ್ರ ಜಾಧವ, ನಾಗು ಕೃಷ್ಣ ಕಮ್ಮಾರ, ನಂದಾ ಗಾಡಿ, ಪ್ರಕಾಶ ರಾಘೊಬನವರ, ಪರಶುರಾಮ ಈಶ್ವರ ನಾಯ್ಕೋಜಿ, ಬಾಳು ಜಾಧವ, ಸುನೀಲ್ ಮಾವಳಂಗಿ, ಕಿರಣ ಪೂಜಾರಿ, ಜ್ಞಾನೇಶ್ವರ ಕದಂ ಇವರ ಜತೆ 700ರಿಂದ 800 ಮಂದಿ ಯುವಕರು ಹಾಗೂ ಮಹಿಳೆಯರು ಸೇರಿ ಮೂರ್ತಿ ಪ್ರತಿಷ್ಠಾಪಿಸಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ-ಹಲ್ಲೆ: ಇನ್ನೂ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳಿಯಾಳ ಸಿಪಿಐ ಸುಂದ್ರೇಶ್ ಕೆ. ಹೊಳೆಣ್ಣನವರ, ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದವರನ್ನು ತಡೆಯಲು ಪೊಲೀಸರು ಹೋದಾಗ ಸಿಬ್ಬಂದಿ ಮೇಲೆ ಯುವಕರು ಹಾಗೂ ಮಹಿಳೆಯರು ನಡೆಸಿದ ನೂಕಾಟ- ತಳ್ಳಾಟದಿಂದ ನನಗೆ ಹಾಗೂ ಪಿಎಸ್​ಐ ಆನಂದಮೂರ್ತಿ, ಸಿಬ್ಬಂದಿಯಾದ ಪರಶುರಾಮ ಎಸ್. ನಾಗರಾಳ, ನಿಂಗಪ್ಪ ಎಸ್. ಬಳ್ಳಾರಿ, ಅರವಿಂದ ಎ. ಭಜಂತ್ರಿ ಅವರಿಗೆ ಗಾಯಗಳಾಗಿದ್ದು, ಇದರಿಂದ ನಮ್ಮ ಕರ್ತವ್ಯಕ್ಕೆ ಅಡ್ಡಿಯಾಗಿದೆ ಎಂದು ಮುಖ್ಯಾಧಿಕಾರಿ ದೂರು ದಾಖಲಿಸಿದವರ ಜತೆಗೆ ಸಂತೋಷ ಘಟಕಾಂಬ್ಳೆ, ಶಿವಾಜಿ ನರಸಾನಿ, ವಿಜಯ ಬೊಬಾಟೆ, ಶಿವಾಜಿ ನಾರಾಯಣ ಜಾಧವ, ಪವನ ಪರಶುರಾಮ ಶೆಟ್ಟಿ, ವಿಶ್ವನಾಥ ಪರಶುರಾಮ ಪೂಜಾರಿ, ಮಹೇಶ ಪರಶುರಾಮ ಪೂಜಾರಿ, ರಾಘೊಬಾ, ಮಹಿಳೆಯರಾದ ಶಕುಂತಲಾ ಮಾರುತಿ ಜಾಧವ, ಮಂಗಲಾ ದತ್ತಾ ಪಾಟೀಲ, ರೇಣುಕಾ ಹಣಗಿ, ಮಂಗಳಾ ಮಿರಾಲಾಲ್ ಚಿಕ್ಕೋಡಿ, ರೇಣುಕಾ ಗುರುನಾಥ ಜಾಧವ, ಸರಸ್ವತಿ ಮಲ್ಲಪ್ಪ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.