ಬೆಂಗಳೂರು: ಕ್ಯಾಸಿನೋ, ಅತಿಥಿ ಸತ್ಕಾರ ಮತ್ತು ಬಿಟ್‌ಕಾಯಿನ್ ಹೆಸರಿನಲ್ಲಿ ಉದ್ಯಮಿಗೆ 25.50 ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ರಾಮಕೃಷ್ಣ ರಾವ್‌ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶಿಸಿದೆ. ಇದೇ ವೇಳೆ ಫೆ.15ರಂದು ಮಧ್ಯಸ್ಥಿಕೆ ಕೇಂದ್ರದಲ್ಲಿ ಎರಡು ಪಕ್ಷಗಾರರು ಕುಳಿತು ರಾಜೀ ಮಾಡಿಕೊಳ್ಳಬೇಕೆಂದು ಸೂಚನೆ ಸಹ ನೀಡಿದೆ.
ಶ್ರೀಲಂಕಾ ಮತ್ತು ದುಬೈನಲ್ಲಿ ಕ್ಯಾಸಿನೋ, ಅತಿಥಿ ಸತ್ಕಾರ ಉದ್ಯಮ ಶುರು ಮಾಡುವ ನೆಪದಲ್ಲಿ ಬಸವೇಶ್ವರನಗರದ ಉದ್ಯಮಿ ವಿವೇಕ್ ಪಿ. ಹೆಗಡೆ ಅವರಿಂದ ಆರೋಪಿಗಳಾದ ರಾಮಕೃಷ್ಣ ರಾವ್, ಪತ್ನಿ ರಾಜೇಶ್ವರಿ ರಾವ್, ಮಕ್ಕಳಾದ ರಾಹುಲ್ ತೋನ್ಸೆ, ರಕ್ಷಾ ತೋನ್ಸೆ ಮತ್ತು ಅಳಿಯ ಚೇತನ್ ನಾರಾಯಣ್- 25.50 ಕೋಟಿ ರೂ. ಪಡೆದು ವಂಚಿಸಿದ್ದರು. ಈ ಬಗ್ಗೆ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ರಾಮಕೃಷ್ಣ ರಾವ್ ಬಂಧಿಸಿ ಫೆ.14ರವರೆಗೆ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಿ ರಾಮಕೃಷ್ಣ ರಾವ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿಗಳಾದ ಎಸ್.ಆರ್. ಕೃಷ್ಣಕುಮಾರ್ ಒಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿತು. ಎರಡು ಕಡೆ ವಾದ ಆಲಿಸಿದರು. ಎ್ಐಆರ್ ರದ್ಧುಪಡಿಸಲು ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಬಂಧಿತ ಆರೋಪಿ ರಾಮಕೃಷ್ಣ ರಾವ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪೊಲೀಸ್ ತನಿಖೆಗೆ ಸಹಕಾರ ನೀಡಬೇಕು. ಪ್ರಕರಣದ ಸಾಕ್ಷಾೃಧಾರಗಳನ್ನು ನಾಶಪಡಿಸಬಾರದು ಮತ್ತು ಇಂತಹ ಕೃತ್ಯಗಳನ್ನು ಮತ್ತೆ ಎಸಗದಂತೆ ಷರತ್ತು ವಿಧಿಸಿತು.
ಅಲ್ಲದೆ, ಫೆ.15ರ ಬೆಳಗ್ಗೆ 11 ಗಂಟೆಗೆ ರಾಜ್ಯ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಬೇಕು.ಉದ್ಯಮಿ ವಿವೇಕ್ ಹೆಗಡೆ ಅವರ ಗೌರವಕ್ಕೂ ಧಕ್ಕೆ ಆಗದಂತೆ ಇಬ್ಬರ ನಡುವೆ ಮಧ್ಯಸ್ಥಿಕೆ ನಡೆಸಿಕೊಳ್ಳುವಂತೆ ಸೂಚನೆ ನೀಡಿ ಅರ್ಜಿಯ ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿದೆ.
ಪೊಲೀಸ್ ತನಿಖೆಗಿಲ್ಲ ಅಡ್ಡಿ
ದುಬೈನಲ್ಲಿ ಅಡಗಿರುವ ರಾಹುಲ್ ತೋನ್ಸೆ, ರಕ್ಷಾ ತೋನ್ಸೆ ಮತ್ತು ಚೇತನ್ ನಾರಾಯಣ್ ಸೇರಿ ರಾಮಕೃಷ್ಣ ರಾವ್ ಕುಟುಂಬ ವಿರುದ್ಧದ ಪ್ರಕರಣದಲ್ಲಿ ಪೊಲೀಸ್ ತನಿಖೆಗೆ ಅಡ್ಡಿ ಇಲ್ಲ. ತನಿಖಾಧಿಕಾರಿಗಳು ತಮ್ಮ ತನಿಖೆ ಮುಂದುವರಿಸಬಹುದು. ಆರೋಪಿ ರಾಮಕೃಷ್ಣ ರಾವ್ ಸಹಕರಿಸಬೇಕು. ಪೊಲೀಸರು ಕರೆದಾಗ ಹಾಜರಾಗಬೇಕೆಂದು ಹೈಕೋರ್ಟ್ ಷರತ್ತುವಿಧಿಸಿದೆ.