25ರಿಂದ ಬೆಂಗಳೂರು ಗಣೇಶ ಉತ್ಸವ

ಬೆಂಗಳೂರು: ದಕ್ಷಿಣ ಭಾರತದ ಅತಿದೊಡ್ಡ ಸಾಂಸ್ಕೃತಿಕ ಹಬ್ಬ ಎನಿಸಿರುವ ‘ಬೆಂಗಳೂರು ಗಣೇಶ ಉತ್ಸವ’ದ 55ನೇ ಆವೃತ್ತಿ ಆ.25ರಿಂದ ಸೆ.4ರವರೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಈ ವರ್ಷವೂ ವಿಶ್ವವಿಖ್ಯಾತ ಕಲಾವಿದರು ಪಾಲ್ಗೊಳ್ಳುವ ಮೂಲಕ ಸಂಭ್ರಮ ಹೆಚ್ಚಿಸಲಿದ್ದಾರೆ.

ಸಂಗೀತ ಭಾಷೆ ಜಾಗತಿಕವಾಗಿದೆ. ಈ ಬಾರಿಯ ಬೆಂಗಳೂರು ಗಣೇಶ ಉತ್ಸವದಲ್ಲಿ ಎಲ್ಲ ಗಡಿಗಳನ್ನು ಮೀರಿ ಹಾಡುಗಳನ್ನು ಹಾಡಲಾಗುತ್ತದೆ ಮತ್ತು ವಿಶ್ವವನ್ನು ಸಂರ್ಪಸಲಾಗತ್ತದೆ. ಅತ್ಯುತ್ತಮ ಗಾಯಕರಿಗೆ ಅತ್ಯದ್ಭುತ ವೇದಿಕೆ ಕಲ್ಪಿಸಲಾಗಿದ್ದು, ಅವರ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಬಹುದು. ಉತ್ಸವಕ್ಕೆ ಉಚಿತ ಪ್ರವೇಶ ಇರಲಿದೆ ಎಂದು ಬೆಂಗಳೂರು ಗಣೇಶ ಉತ್ಸವದ ವ್ಯವಸ್ಥಾಪಕ ಟ್ರಸ್ಟಿ ಎಸ್.ಎಂ. ನಂದೀಶ್ ತಿಳಿಸಿದ್ದಾರೆ.

11 ದಿನ ನಡೆಯುವ ಉತ್ಸವದಲ್ಲಿ ಸಂಗೀತ, ಆಹಾರ, ಕಲೆ ಮತ್ತು ಸಂಸ್ಕೃತಿಯೊಂದಿಗೆ ವಿಶೇಷ ಕಲಾವಿದರ ಪ್ರದರ್ಶನದ ಕಾರ್ಯಕ್ರಮಗಳಿವೆ.

ಇದುವರೆಗೆ ಈ ಉತ್ಸವದಲ್ಲಿ ಕರ್ನಾಟಕದ ಪ್ರಖ್ಯಾತ ವಾಸ್ತುಶಿಲ್ಪಗಳಾದ ಮೇಲುಕೋಟೆ ದೇವಸ್ಥಾನದ ಕಲ್ಯಾಣಿ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಮತ್ತು ಧರ್ಮಸ್ಥಳ ಮಂಜುನಾಥ ದೇವಸ್ಥಾನ ಮತ್ತಿತರ ಶೈಲಿಯಲ್ಲಿ ಮಂಟಪ ನಿರ್ವಿುಸಲಾಗಿತ್ತು. ಈ ವರ್ಷ ಮೈಸೂರು ಅರಮನೆಯ ದರ್ಬಾರ್ ಹಾಲ್ ಮಾದರಿ ಮಂಟಪ ನಿರ್ವಿುಸಲಾಗಿದೆ. ಅಲಂಕೃತ ಕಾಲಮ್ ಸ್ಟೈನ್ಡ್ ಗ್ಲಾಸ್ ಸೀಲಿಂಗ್, ಡೆಕೊರೇಟಿವ್ ಸ್ಟೀಲ್ ಗ್ರಿಲ್ಸ್ ಜತೆ ಮಂಟಪ ನಿರ್ವಿುಸಿ ಗಣೇಶನನ್ನು ಕೂರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸಂಗೀತ ದಿಗ್ಗಜರ ಮೋಡಿ

ವಾದ್ಯಗಳ ಪ್ರಿಯರಿಗಾಗಿ ಸೆ.1ರಂದು ಅಮ್ಜದ್ ಅಲಿಖಾನ್ ತಂಡದಿಂದ ಶಾಸ್ತ್ರೀಯ ಸರೋದ್ ವಾದನ ಇರಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಿಯರಿಗಾಗಿ ಬೆಂಗಳೂರು ಗಣೇಶ ಉತ್ಸವ ತಂಡ ನೂರಾರು ಸಂಗೀತಗಾರರು ಮತ್ತು ಕರ್ನಾಟಕದ ಹಲವು ಸಂಗೀತ ಶಾಲೆಗಳ ವಿದ್ಯಾರ್ಥಿಗಳಿಂದ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ಪ್ರದರ್ಶನ ಏರ್ಪಡಿಸಿದೆ. ಮನರಂಜನೆ ಭಾಗವಾಗಿ ಸೆ. 3ರಂದು ಇಂಡಿಯನ್ ಫೋಲ್-ರಾಕ್ ಮ್ಯೂಸಿಕ್ ಅನ್ನು ರಘು ದೀಕ್ಷಿತ್ ತಂಡ ನಡೆಸಿಕೊಡಲಿದೆ. ಈ ಉತ್ಸವ ಅದ್ದೂರಿ ಮೆರವಣಿಗೆಯೊಂದಿಗೆ ಮುಕ್ತಾಯವಾಗಲಿದ್ದು, ಸೆ.4ರಂದು ಗಣೇಶ ವಿಸರ್ಜನೆ ನಡೆಯಲಿದೆ.

ಈ ವರ್ಷ ಏನೇನು?

ಬೆಂಗಳೂರು ಗಣೇಶ ಉತ್ಸವದಲ್ಲಿ ಈ ವರ್ಷ 300ಕ್ಕೂ ಹೆಚ್ಚು ನೃತ್ಯಪಟುಗಳು ಕೃಷ್ಣನ ಜನ್ಮಕಥನದಿಂದ ಭಗವದ್ಗೀತೆ ಬೋಧನೆವರೆಗೆ ತಿಳಿಸುವ ‘ಮ್ಯಾಗ್ನಮ್ ಆಪಸ್ ಕೃಷ್ಣ ಲೀಲಾರ್ಣವ’ ವಿಶೇಷ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ಆ.26ರಂದು ಖ್ಯಾತ ಬಾಲಿವುಡ್ ಗಾಯಕ ಕುಮಾರ್ ಸಾನು ಕನ್ನಡ ಹಾಡುಗಳನ್ನು ಹಾಡಲಿದ್ದಾರೆ. ಕರ್ನಾಟಕದ 50ಕ್ಕೂ ಹೆಚ್ಚು ಸಂಗೀತಗಾರರು ಪಾಲ್ಗೊಳ್ಳಲಿದ್ದಾರೆ. ಆ.27ರಂದು ‘ಯಶ್ ಲೈವ್ ಇನ್ ಕನ್ಸರ್ಟ್ ಬಿಜಿಯು -2017’ ನಡೆಯಲಿದ್ದು, ಪ್ರಖ್ಯಾತ ನಟರು ತಮ್ಮ ಸಿನಿಪಯಣ ನಿರೂಪಿಸಲಿದ್ದಾರೆ. ಆ.30ರಂದು ಕೆ.ಎಸ್. ಚಿತ್ರಾ- ರಾಜೇಶ್ ಕೃಷ್ಣನ್, 31ರಂದು ಶಂಕರಮಹದೇವನ್ ಚಿತ್ರಗೀತೆಗಳ ಹಾಡುಗಾರಿಕೆ ಇರಲಿದೆ.

ಗಣಪತಿ ಹಬ್ಬಕ್ಕೆ ಮುನ್ನವೇ ವಿಭಾಗವಾರು ವರ್ಗಾವಣೆ

 

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಗಣೇಶ ಹಬ್ಬಕ್ಕೆ ಮೊದಲು ವಿಭಾಗವಾರು ಸಿಬ್ಬಂದಿ ನೌಕರರ ವರ್ಗಾವಣೆ ಮುಗಿಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸಾರಿಗೆ ಇಲಾಖೆಯ ವಿಭಾಗವಾರು ವರ್ಗಾವಣೆ ಸಂಬಂದಿಸಿದಂತೆ ಈಗಾಗಲೇ ಬಹುತೇಕ ಪ್ರಕ್ರಿಯೆಗಳು ಅಂತಿಮಗೊಂಡಿವೆ. ಹಿರಿತನದ ಮೇಲೆ ವರ್ಗಾವಣೆ ಮಾಡಲು ನಿರ್ಧರಿಸಿದ್ದು, ತಂತ್ರಾಂಶದ ಮೂಲಕ ಪ್ರಕ್ರಿಯೆ ನಡೆಯಲಿದೆ. ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಗಣೇಶ ಹಬ್ಬದೊಳಗೆ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಎಸ್​ಆರ್​ಟಿಸಿಗೆ ಎಲೆಕ್ಟ್ರಿಕ್ ಬಸ್​ಗಳ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಬಜೆಟ್​ನಲ್ಲಿ ಬಸ್ ಖರೀದಿಗೆ ಅನುದಾನ ನೀಡಿದ್ದರೂ, ಕೇಂದ್ರ ಸರ್ಕಾರದ ನಿಯಮ ತಿದ್ದುಪಡಿ ಮಾಡದೆ ಇರುವುದರಿಂದ ಸಾಧ್ಯವಾಗುತ್ತಿಲ್ಲ. ಬೆಂಗಳೂರು ಸೇರಿ ರಾಜ್ಯಾದ್ಯಂತ ಸಿಎನ್​ಜಿ ಹಾಗೂ ಎಲೆಕ್ಟ್ರಿಕ್ ಬಸ್​ಗಳನ್ನು ತಂದರೆ ಮಾತ್ರ ಮಾಲಿನ್ಯ ನಿಯಂತ್ರಣ ಸಾಧ್ಯ. ಆದ್ದರಿಂದ ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ಬಸ್ ಖರೀದಿಗೆ ಕೇಂದ್ರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಳಿತದಿಂದ ನಷ್ಟ: ಡಿಸೇಲ್ ದರದ ಪ್ರತಿ ನಿತ್ಯ ಏರಿಕೆಯಾಗುತ್ತಿರುವುದರಿಂದ ಸಾರಿಗೆ ಇಲಾಖೆಗೆ ನಷ್ಟವಾಗುತ್ತಿದೆ. ಆದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾಲ್ಕು ವರ್ಷದಿಂದ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಪೀಣ್ಯದಲ್ಲಿರುವ ಸೆಟಲೈಟ್ ಬಸ್ ನಿಲ್ದಾಣವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದರು.

ಇಂದಿರಾ ಕ್ಯಾಂಟೀನ್​ಗೆ ಸ್ಥಳ: ಬೆಂಗಳೂರಿನ ಜಯನಗರ, ಹೆಬ್ಬಾಳ ಸೇರಿ ಆರು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಬಿಎಂಟಿಸಿ ಸ್ಥಳ ಒದಗಿಸಿದೆ. ಇನ್ನು ಹೆಚ್ಚಿನ ಭಾಗದಲ್ಲಿ ಅವಶ್ಯಕತೆಯಿದ್ದರೆ ಸ್ಥಳಾವಕಾಶ ನೀಡಲಾಗುವುದು ಎಂದು ಹೇಳಿದರು.

ಬಿಜೆಪಿಯವರು 10 ಪೈಸೆ ಸಾಧನೆ ಮಾಡಿ ಒಂದು ರೂ. ಪ್ರಚಾರ ಪಡೆಯುತ್ತಾರೆ. ಆದರೆ, ನಾವು ರೂಪಾಯಿ ಸಾಧನೆ ಮಾಡಿ ಹತ್ತು ಪೈಸೆ ಪ್ರಚಾರ ಪಡೆಯುತ್ತಿದ್ದೇವೆ. ಮುಂದಿನ ದಿನದಲ್ಲಿ ಎಲ್ಲ ಸಚಿವರು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಹಾಗೂ ಕಾರ್ಯಕರ್ತರಿಗೆ ತಿಳಿಸಲಾಗುವುದು.

| ರಾಮಲಿಂಗಾರೆಡ್ಡಿ ಸಾರಿಗೆ ಸಚಿವ

 

Leave a Reply

Your email address will not be published. Required fields are marked *