24×7 ನೀರಿಗೆ ಎಳ್ಳು ನೀರು

ಹುಬ್ಬಳ್ಳಿ: ಹು-ಧಾ ಅವಳಿ ನಗರಕ್ಕೆ 24×7 ಕುಡಿಯುವ ನೀರು ಪೂರೈಕೆ ಯೋಜನೆಗೆ ರಾಜ್ಯ ಸರ್ಕಾರ ಎಳ್ಳು ನೀರು ಬಿಟ್ಟಿದ್ದು, ಕನಸು ಕಟ್ಟಿಕೊಂಡ ಜನತೆಗೆ ತಣ್ಣೀರು ಎರಚಿದೆ…!

ಕರ್ನಾಟಕ ನಗರ ನೀರು ಸರಬರಾಜು ವ್ಯವಸ್ಥೆ ಆಧುನೀಕರಣ ಯೋಜನೆ (ಕೆಯುಡ್ಲ್ಯೂಎಸ್​ಎಂಪಿ) ಅಡಿ ವಿಶ್ವ ಬ್ಯಾಂಕ್ ಹು-ಧಾ ಮಹಾನಗರಕ್ಕೆ ಬಿಡುಗಡೆ ಮಾಡಿದ್ದ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ಬೆಳಗಾವಿ ಮತ್ತು ಕಲಬುರಗಿ ಮಹಾನಗರಕ್ಕೆ ವರ್ಗಾಯಿಸಿರುವುದು ಬಹಿರಂಗವಾಗಿದೆ.

ಇಲ್ಲಿಯ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ, ಮಾಜಿ ಮೇಯರ್ ವೀರಣ್ಣ ಸವಡಿ ಈ ಕುರಿತು ಅಧಿಕೃತ ದಾಖಲಾತಿ ಬಿಡುಗಡೆಗೊಳಿಸಿ, ಮಾಹಿತಿ ನೀಡಿದರು.
ಅವಳಿ ನಗರದಲ್ಲಿ 24×7 ನೀರು ಯೋಜನೆ ಅನುಷ್ಠಾನಕ್ಕೆ ವಿಶ್ವ ಬ್ಯಾಂಕ್ 700 ಕೋಟಿ ರೂ. ಮಂಜೂರಾತಿಗೆ ಒಪ್ಪಿಗೆ ಸೂಚಿಸಿತ್ತು. 2014-15ನೇ ಸಾಲಿನಲ್ಲಿ ಯೋಜನೆ ಅನುಷ್ಠಾನಗೊಳಿಸಲು ಐಎಲ್ ಆಂಡ್ ಎಫ್​ಎಸ್ ಕಂಪನಿ ಗುತ್ತಿಗೆ ಪಡೆದಿತ್ತು. ಆದರೆ, ಕಾಮಗಾರಿ ಆರಂಭಿಸಿರಲಿಲ್ಲ. ಆದ್ದರಿಂದ ಬೆಳಗಾವಿ ಮತ್ತು ಕಲಬುರಗಿ ಪಾಲಿಕೆಯ 24×7 ನೀರು ಯೋಜನೆ ಆರಂಭಕ್ಕೆ ಈ ಹಣ ಉಪಯೋಗಿಸಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಶಿಫಾರಸು ಮಾಡಿತ್ತು. ಅದರಂತೆ ಕೇಂದ್ರದ ಹಣಕಾಸು ಇಲಾಖೆಯ ಆರ್ಥಿಕ ವ್ಯವಹಾರದ ಎಫ್​ಬಿ-ಎಡಿಬಿ ವಿಭಾಗವು 3 ತಿಂಗಳ ಹಿಂದೆಯೇ ವಿಶ್ವ ಬ್ಯಾಂಕ್​ಗೆ ಪತ್ರ ಬರೆದಿದೆ.

ಬಡ್ಡಿ ಪಾವತಿಸುವ ಬದಲು ಎತ್ತಂಗಡಿ

ಹು-ಧಾ 24×7 ನೀರು ಯೋಜನೆ ಜಾರಿಯಲ್ಲಿ ಟೆಂಡರ್​ದಾರರ ಸಮಸ್ಯೆಯಿಂದಾಗಿ ಯೋಜನೆ ಅನುಷ್ಠಾನ ಆರಂಭಕ್ಕೆ ತಡವಾಗಿದೆ. ಮತ್ತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಹೊಸ ಏಜೆನ್ಸಿಯು ಕಾಮಗಾರಿ ಆರಂಭಿಸಲು ಕನಿಷ್ಠ 9-18 ತಿಂಗಳು ಬೇಕಾಗಬಹುದು. ಅಲ್ಲಿಯವರೆಗೆ ವಿಶ್ವ ಬ್ಯಾಂಕ್ ನೀಡಿದ ಹಣಕ್ಕೆ ಏಕೆ ಬಡ್ಡಿ ಪಾವತಿಸಬೇಕು ಎಂಬ ಲೆಕ್ಕಾಚಾರ ಕರ್ನಾಟಕ ನಗರ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯದು. ಆದ್ದರಿಂದ ಬೆಳಗಾವಿ, ಕಲಬುರಗಿಗೆ ವರ್ಗಾಯಿಸಿದ್ದಾರೆ ಎಂಬ ಆರೋಪವಿದೆ. ಹಾಗಾದರೆ ಹಣ ಅಲ್ಲಿ ಇದ್ದರೆ ಬಡ್ಡಿ ತುಂಬುವುದಿಲ್ಲವೆ ಎಂದು ವೀರಣ್ಣ ಸವಡಿ ಖಾರವಾಗಿ ಪ್ರಶ್ನಿಸಿದರು.

ರಾಜ್ಯ ಸರ್ಕಾರ ಮನಸ್ಸು ಮಾಡಿದ್ದರೆ ಯೋಜನೆಯನ್ನು ಇಲ್ಲಿಯೇ ಜಾರಿ ಮಾಡಲು ಅವಕಾಶವಿತ್ತು. ಆದರೆ, ಸರ್ಕಾರ ಸೂಕ್ತ ಸಮಾಲೋಚನೆ, ಪ್ರಯತ್ನ ಮಾಡದೇ ಹು-ಧಾ ಅವಳಿ ನಗರಕ್ಕೆ 700 ಕೋಟಿ ರೂ. ಸಿಗದಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಅನ್ಯಾಯದ ಪರವಾಮಾವಧಿ…

ಅಧಿಕಾರಿಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯಂದ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇದೀಗ ಯೋಜನೆ ತಪ್ಪಿಸಿರುವುದು ಅನ್ಯಾಯದ ಪರಮಾವಧಿಯಾಗಿದ್ದು, ಪ್ರತಿಬಾರಿಯೂ ಅವಳಿ ನಗರಕ್ಕೆ ಹೀಗೆಯೇ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪಕ್ಷದ ಹಿರಿಯರೊಂದಿಗೆ ರ್ಚಚಿಸಿ, ಸಾರ್ವಜನಿಕರನ್ನು ಜಾಗೃತಗೊಳಿಸಿ ಪಕ್ಷದ ವತಿಯಿಂದ ಸರ್ಕಾರದ ಮೇಲೆ ಒತ್ತಡ ತರಲು ನಿರ್ಧರಿಸಲಾಗುವುದು ಎಂದು ಸವಡಿ ತಿಳಿಸಿದರು.

ತಾತ್ಕಾಲಿಕ ಪರಿಹಾರವಾದರೂ ಬೇಗ ಆಗಲಿ…

24×7 ನೀರು ಯೋಜನೆಯಂತೂ ಕೈ ತಪ್ಪಿತು. ಅದಕ್ಕೆ ತಾತ್ಕಾಲಿಕ ಪರಿಹಾರವೆಂದರೆ ಈಗಾಗಲೇ ಸಿದ್ಧಪಡಿಸಿದ ಮಲಪ್ರಭೆಯಿಂದ ಹೆಚ್ಚುವರಿ 40 ಎಂಎಲ್​ಡಿ ನೀರೆತ್ತುವ ಪ್ರಸ್ತಾವನೆ. ಸರ್ಕಾರಕ್ಕೆ ಈ ಪ್ರಸ್ತಾವನೆ ಸಲ್ಲಿಸಿ ಒಂದು ವರ್ಷ ಕಳೆದಿದ್ದು, ಇದೀಗ ಒಪ್ಪಿಗೆ ನೀಡಿದೆ. 24 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, ಜಲಮಂಡಳಿಯಲ್ಲಿ ಮಹಾನಗರ ಪಾಲಿಕೆಯ 18 ಕೋಟಿ ರೂ. ಈಗಾಗಲೇ ಇದೆ. ಉಳಿದ ಹಣವನ್ನು ಬೇರೆ ಮೂಲಗಳಿಂದ ಸಂಗ್ರಹಿಸಿ ಕೊಡಲಾಗುವುದು. ಯೋಜನೆಗೆ ಒಪ್ಪಿಗೆ ದೊರೆತ ತಕ್ಷಣದಿಂದ ವರ್ಷದ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ವೀರಣ್ಣ ಸವಡಿ ಆಗ್ರಹಿಸಿದರು.

ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮತ್ತು ಅಧಿಕಾರಿಗಳ ನಿರ್ಲಕ್ಷ್ಯನದಿಂದ ಹು-ಧಾ ನಗರಕ್ಕೆ ಬಂದಿದ್ದ 24×7 ಕುಡಿಯುವ ನೀರು ಯೋಜನೆ ಹಣ ಬೆಳಗಾವಿ, ಕಲಬುರಗಿಗೆ ಹೋಗಿದೆ. ಹು-ಧಾಕ್ಕೆ ಅನ್ಯಾಯ ಮಾಡುವ ಉದ್ದೇಶದಿಂದಲೇ ಹಣ ವರ್ಗಾವಣೆ ಮಾಡಿದ್ದಾರೆ. ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಹೋರಾಟ ಆರಂಭಿಸಲಿದೆ. ಆ. 31ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಚಾರ ತೆಗೆದಾಗ, ‘ಕಾಂಗ್ರೆಸ್-ಜೆಡಿಎಸ್​ನವರು ಸುಳ್ಳು ಆರೋಪ ಮಾಡಬೇಡಿ. ದಾಖಲಾತಿ ತೋರಿಸಿ ಎಂದಿದ್ದರು’. ಆದ್ದರಿಂದ ದಾಖಲಾತಿ ತೋರಿಸಿದ್ದೇನೆ.

| ವೀರಣ್ಣ ಸವಡಿ, ಪಾಲಿಕೆ ಸದಸ್ಯ