ದ್ವೀಪವಾಯ್ತು ಕಳಸ

ಕಳಸ: ವರುಣನ ರುದ್ರನರ್ತನಕ್ಕೆ ಮೂಡಿಗೆರೆ ತಾಲೂಕಿನ ಕಳಸದ ಬಹುತೇಕ ಸೇತುವೆಗಳು ಮುಳುಗಡೆಯಾಗಿದ್ದು, ಕಳಸ ಪಟ್ಟಣದ ಸಂಪರ್ಕ ಕಡಿತಗೊಂಡು ದ್ವೀಪದಂತಾಗಿದೆ.

ಬುಧವಾರ ಸ್ವಲ್ಪ ಬಿಡುವು ನೀಡಿದ ಮಳೆ ತಡರಾತ್ರಿ ಜೋರಾಗಿ ಸುರಿಯಲಾರಂಭಿಸಿತು. ಗುರುವಾರದ ಬೆಳಕು ಹರಿಯುವ ಮೊದಲು ಹೋಬಳಿಯ ಬಹುತೇಕ ರಸ್ತೆ ಸಂಪರ್ಕಗಳು ಕಡಿತಗೊಂಡು ಜನಜೀವನವ ಸಂಪೂರ್ಣ ಅಸ್ತವ್ಯಸ್ತ ಗೊಂಡಿತು.

ಹೋಬಳಿಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಭದ್ರಾ ನದಿಯ ಆಸುಪಾಸು ಸಂಪೂರ್ಣ ಜಲಾವೃತಗೊಂಡ ಕಾರಣ ಕುಟುಂಬಗಳು ಸ್ಥಳಾಂತರಗೊಂಡಿವೆ. ದೂರದೂರಿಂದ ಬಂದ ಪ್ರವಾಸಿಗರು ಯಾವ ಕಡೆಯೂ ಪ್ರಯಾಣ ಮಾಡಲಾಗದೆ ತೊಂದರೆ ಅನುಭವಿಸಿದರು. ರಸ್ತೆ ಕಡಿತಗೊಂಡ ಸ್ಥಳಗಳಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು.

ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಗರಿಷ್ಠ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಮೂರು ಅಂಗಡಿಗಳು, ಹೋಟೆಲ್, ಹೋಂ ಸ್ಟೇ ಸಂಪೂರ್ಣ ಜಲಾವೃತಗೊಂಡಿವೆ.

ಹಳುವಳ್ಳಿ, ಕಗ್ಗನಳ್ಳ, ಪಡೀಲ್ ಎಂಬಳ್ಳಿ ಭದ್ರಾ ನದಿಯ ನೀರು ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಕಳಸ-ಶೃಂಗೇರಿ-ಬಾಳೆಹೊನ್ನೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಪಡೀಲ್​ನಲ್ಲಿದ್ದ ಅಂಗನವಾಡಿಗೆ ನೀರು ನುಗ್ಗಿದೆ. ನೆಲ್ಲಿಬೀಡು, ಹೊಸಮಕ್ಕಿಯಲ್ಲಿ ಭದ್ರಾನದಿ ನೀರು ಮುಖ್ಯ ರಸ್ತೆ ಮೇಲೆ ಹರಿದು ಕಳಸ-ಕುದುರೆಮುಖ-ಮಂಗಳೂರು ರಸ್ತೆ ಸಂಪರ್ಕ ಕಡಿತಗೊಂಡಿತು.

ಕುದುರೆಮುಖದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಕಳಸ ಸಮೀಪದ ಭದ್ರಾ ನದಿಗೆ ನಿರ್ವಿುಸಿರುವ ಕೋಟೆಹೊಳೆ ಸೇತುವೆ ಮುಳುಗಡೆಗೊಂಡಿದ್ದು, ಕಳಸ-ಕಳಕೋಡು, ಕಾರ್ಲೆ, ಹೊಸೂರು ಮುಂತಾದ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಸಂಸೆಯಲ್ಲಿ ಸೋಮಾವತಿ ನದಿ ತುಂಬಿ ಹರಿದು ನದಿಯ ಆಸುಪಾಸು ಜಲಾವೃತಗೊಂಡಿತು.

 

ನದಿಗೆ ಬಿದ್ದ ನಾಯಿ ರಕ್ಷಣೆ

ಭದ್ರಾ ನದಿ ತುಂಬಿ ಹರಿಯುವಾಗ ಹೆಬ್ಬಾಳೆ ಸಮೀಪ ನಾಯಿಯೊಂದು ನೀರಿನಲ್ಲಿ ತೇಲಿಕೊಂಡು ಬಂದು ಪೊದೆಯ ಆಸರೆ ಪಡೆದು ಜೀವನ್ಮರಣದ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸ್ಥಳೀಯರು ತೆಪ್ಪವೊಂದರಲ್ಲಿ ತೆರಳಿ ನಾಯಿಯನ್ನು ರಕ್ಷಿಸಿದರು.

Leave a Reply

Your email address will not be published. Required fields are marked *