ಟಿಕ್​ಟಾಕ್​ ಗೀಳಿಗೆ ಬಿದ್ದು ಕೊನೆಗೆ ವಿಷ ಸೇವಿಸಿ ಅದರಲ್ಲೇ ವಿಡಿಯೋ ಹರಿಬಿಟ್ಟು ಪ್ರಾಣಬಿಟ್ಟ ವಿವಾಹಿತೆ

ಚೆನ್ನೈ: ಟಿಕ್​ಟಾಕ್​ ವಿಡಿಯೋ ಆ್ಯಪ್​ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ಪತ್ನಿಯನ್ನು ಬೈದಿದ್ದಕ್ಕೆ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರ್​ನಲ್ಲಿ ನಡೆದಿರುವುದಾಗಿ ಗುರುವಾರ ವರದಿಯಾಗಿದೆ.

ಪೆರಂಬೂರ್​ ಮೂಲದ ಅನಿತಾ(24) ಎಂಬಾಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಟಿಕ್​ ಟಾಕ್​ನಲ್ಲೇ ಹರಿಬಿಟ್ಟಿದ್ದಾಳೆ ಎಂದು ಹೇಳಲಾಗಿದೆ.

ಮೃತೆ ಅನಿತಾ, ಪಳನಿವೇಲ್(24)​ ಎಂಬುವರೊಂದಿಗೆ ವಿವಾಹವಾಗಿದ್ದು, ನಾಲ್ಕು ವರ್ಷದ ಹೆಣ್ಣು ಮಗಳು ಹಾಗೂ ಎರಡು ವರ್ಷದ ಗಂಡು ಮಗುವಿನ ತಾಯಿಯಾಗಿದ್ದಳು. ಆತ್ಮಹತ್ಯೆಗೂ ಮುನ್ನ ತನ್ನ ಹೇಳಿಕೆಯನ್ನು ವಿಡಿಯೋದಲ್ಲಿ ದಾಖಲಿಸಿದ್ದು, ನನ್ನ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಹೇಳಿದ್ದಾಳೆ ಎನ್ನಲಾಗಿದೆ. ಕೃಷಿ ವ್ಯಾಪಾರಿಯಾಗಿರುವ ಪತಿ ಪಳನಿವೇಲ್​, ಕಳೆದ ಕೆಲ ವರ್ಷಗಳ ಹಿಂದೆ ಕೆಲಸಕ್ಕಾಗಿ ಸಿಂಗಾಪೂರ್​ಗೆ ತೆರಳಿದ್ದಾರೆ.

ತನ್ನ ಸ್ನೇಹಿತೆಯಿಂದ ಅನಿತಾಗೆ ಆ್ಯಪ್​ ಪರಿಚಯವಾಗಿತ್ತಂತೆ. ಆ್ಯಪ್​ ಗೀಳಿಗೆ ಒಳಗಾಗಿ ತನ್ನ ಕುಟುಂಬ ಮತ್ತು ಮಕ್ಕಳನ್ನು ಆಲಕ್ಷಿಸಿದ್ದಳು ಎಂದು ಅನಿತಾ ಪಾಲಕರು ಆರೋಪಿಸಿದ್ದಾರೆ. ಆ್ಯಪ್​ ಬಳಸುತ್ತಾ ಅತಿರೇಕಕ್ಕೆ ಹೋಗಿದ್ದ ಆಕೆಯ ಬಗ್ಗೆ ಪಾಲಕರು ಪತಿಗೆ ತಿಳಿಸಿದಾಗ, ಕರೆ ಮಾಡಿ ಅದರಿಂದ ದೂರವಿರುವಂತೆ ಆಕೆ ಹೇಳಿದ್ದನಂತೆ. ಆದರೆ, ಅದನ್ನು ನಿರ್ಲಕ್ಷಿಸಿ ಆಕೆ ಆ್ಯಪ್​ ಮುಂದುವರಿಸಿದ್ದಳು ಎನ್ನಲಾಗಿದೆ.

ಹೀಗೆ ಒಮ್ಮೆ ಅನಿತಾ, ಆ್ಯಪ್​ನಲ್ಲಿ ಬಿಜಿಯಾಗಿರುವಾಗ ಆಟವಾಡುತ್ತಿದ್ದ ತನ್ನ ಮಗಳಿಗೆ ಗಾಯವಾದರೂ ಕೂಡ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಅದರಲ್ಲೇ ಮುಳುಗಿದ್ದಳಂತೆ. ಈ ಬಗ್ಗೆ ಪಾಲಕರು ಮತ್ತೊಮ್ಮೆ ಆಕೆಯ ಪತಿಗೆ ಕರೆ ಮಾಡಿ ಬುದ್ಧಿ ಹೇಳಲು ತಿಳಿಸಿದಾಗ, ಅನಿತಾಗೆ ಕರೆ ಮಾಡಿದ ಆತ, ಆಕೆಯ ವಿರುದ್ಧ ರೇಗಿ ಮೊಬೈಲ್​ ಅನ್ನು ಹೊಡೆದು ಹಾಕುವುದಾಗಿ ಎಚ್ಚರಿಸಿದ್ದನಂತೆ. ಇದರಿಂದ ಮನನೊಂದು ಅನಿತಾ, ಕೀಟನಾಶಕ ಸೇವಿಸಿ ಆ ಕ್ಷಣವನ್ನು ವಿಡಿಯೋ ರೆಕಾರ್ಡ್​ ಮಾಡಿ, ಅದನ್ನು ಟಿಕ್​ ಟಾಕ್​ನಲ್ಲೇ ಹರಿಬಿಟ್ಟಿದ್ದಾಳೆ ಎನ್ನಲಾಗಿದೆ.

ವಿಷ ಸೇವಿಸಿ ಅಸ್ವಸ್ಥಳಾಗಿದ್ದ ಆಕೆಯನ್ನು ಮೊದಲಿಗೆ ಅರಿಯಲೂರ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸಗೆ ಸ್ಪಂದಿಸದೇ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *