ಕೇವಲ 10 ಸೆಂಟ್ಸ್ ಜಾಗದಲ್ಲಿ 24 ಬಗೆಯ ತರಕಾರಿ!

  • ಗಂಗಾಧರ ಕಲ್ಲಪಳ್ಳಿ ಸುಳ್ಯ

ಕೇವಲ ಹತ್ತು ಸೆಂಟ್ಸ್ ಸ್ಥಳದಲ್ಲಿ 24 ಬಗೆಯ ತರಕಾರಿ.. ಘಮ ಘಮ ಸುಗಂಧ ಪಸರಿಸುವ ಮಲ್ಲಿಗೆ ಕೃಷಿ. ಸುಳ್ಯ ನಗರ ಸಮೀಪವೇ ಹಸಿರು ಸೂಸಿ ನಳನಳಿಸುವ ತರಕಾರಿ ಕೈತೋಟ ಮನ ಸೆಳೆಯುತ್ತಿದೆ. ಸುಳ್ಯದ ದಿನಕರ ಕಾನತ್ತಿಲ ತಮ್ಮ ಮನೆಯ ಸಮಿಪದಲ್ಲಿಯೇ ಆಕರ್ಷಕ ಕೈತೋಟ ರೂಪಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಕಡಿಮೆ ಸ್ಥಳದಲ್ಲಿ ವೈವಿಧ್ಯಮಯ ತರಕಾರಿ ತೋಟ ಮಾಡಿ ಸೈ ಎನಿಸಿಕೊಂಡಿರುವ ಇವರು, ವರ್ಷದ 10 ತಿಂಗಳೂ ತರಕಾರಿ ಕೃಷಿ ಮಾಡಿ ಫಸಲು ಪಡೆಯುತ್ತಾರೆ. ಸ್ಥಳೀಯವಾಗಿ ಬೆಳೆಯುವ ತರಕಾರಿಗಳ ಜತೆಗೆ ರಾಜ್ಯದ ವಿವಿಧ ಭಾಗಗಳಿಂದ ತರಕಾರಿ ಬೀಜಗಳನ್ನು ತಂದು ಹಲವಾರು ಪ್ರಯೋಗಗಳನ್ನು ಮಾಡುತ್ತಾರೆ. ಕಳೆದ ವರ್ಷ 32 ಬಗೆಯ ತರಕಾರಿ ಕೃಷಿ ಮಾಡಿದ್ದಾರೆ. ಈ ವರ್ಷ ಈಗಾಗಲೇ 24 ಬಗೆಯ ತರಕಾರಿ ಬೆಳೆದಿದ್ದಾರೆ.

ವೈವಿಧ್ಯಮಯ ತರಕಾರಿ

ಸೊಪ್ಪು, ಗೆಡ್ಡೆ ಗೆಣಸು ಸೇರಿ 24 ಬಗೆಯ ತರಕಾರಿ ಇವರ ಕೈ ತೋಟದ ಹೈಲೈಟ್ಸ್. ಲಭ್ಯ ಅಲ್ಪ ಭೂಮಿ ಸಮತಟ್ಟು ಮಾಡಿ ಬೇಲಿ ಅಳವಡಿಸಿ ಒಂದಿಂಚು ಸ್ಥಳವನ್ನೂ ಬಿಡದೆ ಕೃಷಿ ಮಾಡಿದ್ದಾರೆ. ಹರಿವೆ, ಸುವರ್ಣ ಗೆಡ್ಡೆ, ಮೂಲಂಗಿ, ಬೆಂಡೆ ಕಾಯಿ, ಪಚ್ಚೆ ಹಸಿರು, ಅಲಸಂಡೆ, ಮೆಣಸು, ಗಾಂಧಾರಿ, ತೊಂಡೆ ಕಾಯಿ, ಬೀನ್ಸ್, ಕ್ಯಾರೆಟ್, ಬಸಲೆ, ಮಾವಿನ ಶುಂಠಿ, ಮೂಲಂಗಿ, ಮೆಂತೆ, ಪಾಲಕ್, ಮರ ಗೆಣಸು, ಸಿಹಿ ಗೆಣಸು, ಉಪ್ಪೆ ಗೆಣಸು, ಸೌತೆ, ಟೊಮೆಟೋ ಹೀಗೆ ಇವರ ಕೈ ತೋಟದಲ್ಲಿ ಏನಿದೆ, ಏನಿಲ್ಲ ಎಂದು ಕೇಳುವಂತಿಲ್ಲ, ಎಲ್ಲವೂ ಇದೆ. ಕಳೆದ ಬಾರಿಗಿಂತ ಈ ಬಾರಿ ಭಿನ್ನವಾಗಿ ಕೆಲವೊಂದು ತರಕಾರಿ ಹೆಚ್ಚುವರಿ ಮಾಡಿದ್ದಾರೆ. ಇವರ ತರಕಾರಿ ಕೃಷಿ ನಿರಂತರ ಪ್ರಕ್ರಿಯೆ, ಒಮ್ಮೆ ಕೃಷಿಯ ಅವಧಿ ಮುಗಿದಂತೆ ಮತ್ತೆ ಮತ್ತೆ ಹೊಸ ಹೊಸ ತರಕಾರಿ ಮಾಡುತ್ತಾ ಇರುತ್ತಾರೆ. ಜುಲೈನಲ್ಲಿ ಭೂಮಿ ಹದ ಮಾಡಿ ಬಿತ್ತು ಹಾಕಿ ತರಕಾರಿ ಕೃಷಿ ಆರಂಭ ಮಾಡುವ ಇವರು ಫೆಬ್ರವರಿವರೆಗೂ ಕೃಷಿ ಮಾಡುತ್ತಾರೆ. ಮೇ ತಿಂಗಳವರೆಗೂ ಸರಾಗವಾಗಿ ಫಸಲು ಕೊಯ್ಯುತ್ತಾರೆ.

ಸಾವಯವ ರುಚಿ 

ದಿನಕರ್, ತರಕಾರಿ ಕೃಷಿಗೆ ಯಾವುದೇ ರಾಸಾಯನಿಕ ಗೊಬ್ಬರ, ರಾಸಾಯನಿಕ ಔಷಧ ಸಿಂಪಡಣೆ ಮಾಡುವುದಿಲ್ಲ. ಹಟ್ಟಿ ಗೊಬ್ಬರ, ಗೋಮೂತ್ರ, ಗಂಜಳ, ನೆಲ ಕಡಲೆ ಹಿಂಡಿಯನ್ನು ಗೊಬ್ಬರವಾಗಿ ಬಳಸಿಕೊಳ್ಳಲಾಗುತ್ತಿದೆ. ರಾಸಾಯನಿಕ ಔಷಧ ಸಿಂಪಡಿಸುವ ಬದಲು ಬೂದಿ, ಗೋಮೂತ್ರ ಬಳಸುತ್ತಾರೆ. ಇವರ ಕೈ ತೋಟದಲ್ಲಿ ರೋಗಗಳು ಕಡಿಮೆ, ಬೆಳೆಯುವ ತರಕಾರಿಗೆ ರುಚಿಯೂ ಅಧಿಕ ಮತ್ತು ವಿಷ ಮುಕ್ತ. ತೋಟಗಾರಿಕಾ ಇಲಾಖೆಯವರು ತರಕಾರಿ ಬೀಜ ಮತ್ತು ನೆಡಲು ಕುಂಡಗಳನ್ನು ನೀಡುತ್ತಾರೆ.

ಘಮ ಘಮಿಸ್ತಾವ ಮಲ್ಲಿಗೆ 

ದಿನಕರ ಕಾನತ್ತಿಲ ಮನೆಯ ಸಮೀಪಕ್ಕೆ ಬಂದ ಕೂಡಲೇ ಮಲ್ಲಿಗೆಯ ಸುವಾಸನೆ ಮೂಗಿಗೆ ಬಡಿಯುತ್ತದೆ. ಕಳೆದ 13 ವರ್ಷಗಳಿಂದ ಮಲ್ಲಿಗೆ ಕೃಷಿ ಮಾಡುತ್ತಿರುವ ಇವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳು ನೀಡಿದ ಮಾಹಿತಿ ಮತ್ತು ನಿರ್ದೇಶನ ಮೇರೆಗೆ ಕೃಷಿ ಆರಂಭಿಸಿದರು. ಐದು ವರ್ಷಗಳ ಹಿಂದೆ ಅದೇ ಸ್ಥಳದಲ್ಲಿ ಮಲ್ಲಿಗೆಯ ಜತೆಗೆ ತರಕಾರಿ ಕೃಷಿಯನ್ನೂ ಆರಂಭಿಸಿದ್ದಾರೆ. ಮಿಶ್ರ ಕೃಷಿ ಇವರ ಕೈ ತೋಟದ ವಿಶೇಷತೆ. ಒಂದು ಮೀಟರ್ ಅಗಲದ ಸ್ಥಳದಲ್ಲಿ ಮೂರು ಕೃಷಿ ಮಾಡಲಾಗುತ್ತದೆ. ಸುವರ್ಣ ಗೆಡ್ಡೆಯ ಜತೆಗೆ ಮೂಲಂಗಿ, ತೊಂಡೆಕಾಯಿ, ಪಚ್ಚೆ ಹಸಿರು ಬೆಳೆಸುತ್ತಾರೆ. ಮಲ್ಲಿಗೆ ಬುಡದಲ್ಲಿ ಹರಿವೆ, ಟೊಮೆಟೋ ಗಿಡ ಬೆಳೆಸುತ್ತಾರೆ. ಕಡಿಮೆ ಸ್ಥಳದಲ್ಲಿ ಹೆಚ್ಚು ಕೃಷಿ ಮತ್ತು ಉತ್ತಮ ಆದಾಯ ಇವರ ಕೃಷಿಯ ಹೆಗ್ಗಳಿಕೆ.

ಸುತ್ತೂರು ಕ್ಷೇತ್ರದ ಕೃಷಿ ಮೇಳ ಪ್ರೇರಣೆ 

ಐದು ವರ್ಷಗಳ ಹಿಂದೆ ಮೈಸೂರಿನ ಸುತ್ತೂರು ಕ್ಷೇತ್ರದ ಜಾತ್ರೆ ಅಂಗವಾಗಿ ನಡೆದ ಕೃಷಿ ಮೇಳ ದಿನಕರ ಕಾನತ್ತಿಲರಿಗೆ ಈ ರೀತಿಯ ಆಕರ್ಷಕ ಮತ್ತು ಲಾಭದಾಯಕ ಕೃಷಿ ಮಾಡಲು ಪ್ರೇರಣೆ ಮತ್ತು ಉತ್ಸಾಹ ನೀಡಿತು. ಕಡಿಮೆ ಸ್ಥಳದಲ್ಲಿ ಹೆಚ್ಚು ಕೃಷಿ ಮಾಡುವ ಬ್ರಹ್ಮಾಂಡ ಕೃಷಿ ರೀತಿಯನ್ನು ಕೃಷಿ ಮೇಳದಲ್ಲಿ ತಿಳಿದುಕೊಂಡರು. ತನ್ನ ಮಲ್ಲಿಗೆ ತೋಟದಲ್ಲಿ ತರಕಾರಿ ಕೈತೋಟ ಪ್ರಯೋಗ ಮಾಡಿ ಯಶ ಕಂಡರು.

ಸ್ವಾವಲಂಬಿ ಕೃಷಿಕ 

ಕೇವಲ ಹತ್ತು ಸೆಂಟ್ಸ್ ಜಾಗದಲ್ಲಿ ಕಡಿಮೆ ಎಂದರೂ ಮಲ್ಲಿಗೆ ಕೃಷಿಯಿಂದ 30 ಸಾವಿರ ರೂ. ವಾರ್ಷಿಕ ಆದಾಯ ಪಡೆಯುವ ದಿನಕರ ಕಾನತ್ತಿಲರು ತರಕಾರಿ ಕೃಷಿ ಅದಾಯದ ಲೆಕ್ಕವನ್ನು ಪಕ್ಕಾ ಇರಿಸುವುದಿಲ್ಲ. ತಮ್ಮ ಮನೆಗೆ ಬೇಕಾಗುವುಷ್ಟು ಉಪಯೋಗಿಸುವುದರ ಜತೆಗೆ ಬಂಧುಗಳಿಗೆ, ಹಿತೈಷಿಗಳಿಗೆ ತರಕಾರಿ ಉಚಿತವಾಗಿ ಹಂಚುತ್ತಾರೆ. ಉಳಿದದನ್ನು ಮಾರಾಟ ಮಾಡುತ್ತಾರೆ. ಬೆಳಗ್ಗೆ ಸಾಯಂಕಾಲ ನೀರು ಹಾಕುವುದು, ಗೊಬ್ಬರ, ಔಷಧ ಹಾಕಿ ಪಾಲನೆ ಮಾಡುವುದು ದಿನಕರರ ದಿನಚರಿ. ಪತ್ನಿ ಜಯಂತಿ ಮಕ್ಕಳಾದ ತುಷಾರ್, ಯಜ್ಞೇಶ್ ಇವರಿಗೆ ಕೈ ತೋಟದ ರಚನೆ, ಪಾಲನೆಯಲ್ಲಿ ಸಹಕರಿಸುತ್ತಾರೆ.

ಅತೀ ಕಡಿಮೆ ಸ್ಥಳಾವಕಾಶ ಇದ್ದರೂ ತಮ್ಮ ಕುಟುಂಬಕ್ಕೆ ಬೇಕಾಗುವಷ್ಟು ತರಕಾರಿಯನ್ನು ಎಲ್ಲರೂ ಬೆಳೆಸಬಹುದು. ತರಕಾರಿ ಕೃಷಿ ಮಾಡುವುದು ಒಂದು ನಿರಂತರ ಪ್ರಕ್ರಿಯೆ ಮತ್ತು ಖುಷಿ ಕೊಡುವ ವಿಚಾರ. ಕಳೆದ 13 ವರ್ಷಗಳಿಂದ ನಡೆಸುವ ಮಲ್ಲಿಗೆ ಕೃಷಿ ಮತ್ತು ಐದು ವರ್ಷಗಳಿಂದ ತರಕಾರಿ ಕೃಷಿ ಜೀವನದ ಭಾಗವಾಗಿದೆ.
|ದಿನಕರ ಕಾನತ್ತಿಲ, ಕೃಷಿಕ