24 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ

ಹಾವೇರಿ: ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ನೀಡಬೇಕೆಂಬ ಸರ್ಕಾರದ ನಿರ್ಧಾರದಂತೆ ಪ್ರಸಕ್ತ ವರ್ಷದಿಂದ ರಾಜ್ಯದಲ್ಲಿ ಒಂದು ಸಾವಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಕಲಿಕೆ ಶುರುವಾಗಲಿದೆ. ಅಂತೆಯೇ ಜಿಲ್ಲೆಯ 24 ಸರ್ಕಾರಿ ಶಾಲೆಗಳಲ್ಲಿ ಜೂನ್​ನಿಂದ ಇಂಗ್ಲಿಷ್ ಮಾಧ್ಯಮ ಆರಂಭವಾಗಲಿದೆ.

ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರಕ್ಕೆ ತಲಾ 4 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆ ಆರಂಭಕ್ಕೆ 24 ಶಾಲೆಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ. ಖಾಸಗಿ ಶಾಲೆಗಳಲ್ಲಿ ಮಾತ್ರ ಆಂಗ್ಲ ಮಾಧ್ಯಮ ಕಲಿಕೆ ಸಿಗುತ್ತದೆ. ಬಡವರ ಮಕ್ಕಳಿಗೆ ಆ ಭಾಗ್ಯವಿಲ್ಲ ಎನ್ನುತ್ತಿದ್ದವರಿಗಾಗಿಯೇ ಪ್ರಸಕ್ತ ವರ್ಷದಿಂದ ಸರ್ಕಾರ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣದ ಜತೆಗೆ ಆಂಗ್ಲ ಮಾಧ್ಯಮ ಕಲಿಕೆ ಸಿಗಲಿದೆ ಎಂಬ ಭರವಸೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಪ್ರಸಕ್ತ ವರ್ಷದಿಂದಲೇ ಜಿಲ್ಲೆಯ 24 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಲಿದ್ದು, ಈ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಜೊತೆಗೆ ಕನ್ನಡ ಮಾಧ್ಯಮ ಕಲಿಕೆಯೂ ಎಂದಿನಂತೆ ಮುಂದುವರಿಯಲಿದೆ. ಆಂಗ್ಲ ಮಾಧ್ಯಮಕ್ಕೆ ಶಾಲೆಯಲ್ಲಿ ಪ್ರತ್ಯೇಕ ತರಗತಿಯನ್ನು ಆರಂಭಿಸಲಾಗುತ್ತಿದ್ದು, ಕಲಿಯಲು ಇಚ್ಛಿಸುವ ಮಕ್ಕಳ ಪ್ರವೇಶ ಪ್ರಕ್ರಿಯೆ ಎಲ್ಲ ಮಕ್ಕಳಂತೆ ಮೇ 29ರಿಂದ ಆರಂಭಗೊಳ್ಳಲಿದೆ. ಒಂದನೇ ತರಗತಿಯ ಎಲ್ಲ ವಿಷಯಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಕಲಿಸಲು ಶಿಕ್ಷಕರನ್ನು ನೇಮಿಸಲಾಗಿದೆ. ಇಂಗ್ಲಿಷ್ ಮಾಧ್ಯಮದಲ್ಲಿಯೇ ಪದವಿ, ವೃತ್ತಿಪರ ಕೋರ್ಸ್ ಪೂರೈಸಿದ ಶಿಕ್ಷಕರಿದ್ದಾರೆ. ಆಂಗ್ಲ ಮಾಧ್ಯಮ ಬೋಧನೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಆಂಗ್ಲ ಬೋಧನೆ ಮಾಡಲು ನಿಯುಕ್ತಿಗೊಳಿಸಿರುವ ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ಈಗಾಗಲೇ ಇಲಾಖೆ ನೀಡಿದೆ ಎಂದು ಡಿಡಿಪಿಐ ಅಂದಾನೆಪ್ಪ ವಡಗೇರಿ ತಿಳಿಸಿದ್ದಾರೆ.

ಆಂಗ್ಲ ಮಾಧ್ಯಮ ಒಂದನೇ ತರಗತಿಗೆ ಪ್ರವೇಶ ಉಚಿತವಾಗಿದೆ. ಈ ಮಕ್ಕಳಿಗೆ ಸರ್ಕಾರದ ಎಲ್ಲ ಪ್ರೋತ್ಸಾಹದಾಯಕ ಯೋಜನೆಗಳು ಲಭ್ಯವಿವೆ. ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ಶಿಕ್ಷಣ ಇಲಾಖೆಯ ಒತ್ತಾಸೆಯಾಗಿದೆ.

ಆಂಗ್ಲ ಮಾಧ್ಯಮ ಆರಂಭಗೊಳ್ಳಲಿರುವ ಶಾಲೆಗಳಿವು: ಜಿಲ್ಲೆಯ ಬ್ಯಾಡಗಿ ತಾಲೂಕಿನ ಜಿಎಚ್​ಪಿಎಸ್ ಬುಡಪನಹಳ್ಳಿ, ಕೆಪಿಎಸ್ ಬ್ಯಾಡಗಿ, ಜೆಎಚ್​ಪಿಎಸ್ ಬಿಸಲಹಳ್ಳಿ, ಹಾನಗಲ್ಲ ತಾಲೂಕಿನ ಜಿಎಂಪಿಎಸ್ ಆಡೂರ, ಎಂಪಿಎಸ್ ಹಾನಗಲ್ಲ, ಉನ್ನತೀಕರಿಸಿದ ಆರ್​ಎಂಎಸ್​ಎ ಶಾಲೆ ಬೆಳಗಾಲಪೇಟ, ಜಿಎಚ್​ಪಿಎಸ್ ವರ್ದಿ, ಹಾವೇರಿ ತಾಲೂಕಿನ ಜಿಎಂಪಿಎಸ್ ಕಬ್ಬೂರ, ಎಚ್​ಪಿಯುಎಸ್ ನಂ.4 ನಾಗೇಂದ್ರನಮಟ್ಟಿ, ಜಿಎಂಪಿಎಸ್ ನಂ.2 ಹಾವೇರಿ, ಎಚ್​ಪಿಜಿಎಸ್ ಕರ್ಜಗಿ, ಜಿಎಚ್​ಪಿಎಸ್ ಕೂರಗುಂದ, ಹಿರೇಕೆರೂರ ತಾಲೂಕಿನ ಎಂಕೆಬಿಎಸ್ ಹಿರೇಕೆರೂರ, ಎಚ್​ಪಿಎಸ್ ಕಡೂರ, ಎಚ್​ಪಿಎಸ್ ದೂದೀಹಳ್ಳಿ, ಕೆಪಿಎಸ್ ನೂಲಗೇರಿ, ರಾಣೆಬೆನ್ನೂರ ತಾಲೂಕಿನ ಜಿಎಚ್​ಪಿಎಸ್ ಇಟಗಿ, ಎಚ್​ಪಿಎಸ್ ನಂ.17 ಮಾರುತಿನಗರ ರಾಣೆಬೆನ್ನೂರ, ಜಿಎಚ್​ಪಿಎಸ್ ಹರನಗಿರಿ, ಜಿಎಂಪಿಎಸ್ ಅರೇಮಲ್ಲಾಪುರ, ಸವಣೂರ ತಾಲೂಕಿನ ಮಜೀದ ಕರ್ನಾಟಕ ಪಬ್ಲಿಕ್ ಶಾಲೆ ಸವಣೂರ, ಎಚ್​ಪಿಎಸ್ ತೆಗ್ಗಿಹಳ್ಳಿ, ಶಿಗ್ಗಾಂವಿ ತಾಲೂಕಿನ ಕೆಪಿಎಸ್ ಶಾಲೆ ನಾರಾಯಣಪುರ, ಎಂಕೆಬಿಎಸ್ ಶಿಗ್ಗಾಂವಿ ಶಾಲೆಗಳಲ್ಲಿ 2019-20ನೇ ಸಾಲಿನಿಂದ 1ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಕಲಿಕೆ ಪ್ರಾರಂಭವಾಗಲಿದೆ.

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಅನೇಕರು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಶಿಕ್ಷಕರು ಮತ್ತು ಸಕಲ ಮೂಲಸೌಲಭ್ಯವುಳ್ಳ ಶಾಲೆಗಳನ್ನು ಗುರುತಿಸಿ ಆಂಗ್ಲ ಮಾಧ್ಯಮ ಕಲಿಕೆ ಆರಂಭಿಸಲಾಗುತ್ತಿದೆ. ಮೇ 29ರಿಂದ ಪ್ರವೇಶ ಪ್ರಕ್ರಿಯೆಯೂ ಆರಂಭಗೊಳ್ಳಲಿದೆ. ಆಂಗ್ಲ ಮಾಧ್ಯಮ ಶಾಲೆಗಳನ್ನು ಗುರುತಿಸಿರುವ ಶಾಲೆಗಳಲ್ಲಿ ಕಟ್ಟಡ, ನುರಿತ ಶಿಕ್ಷಕರನ್ನು ಈಗಾಗಲೇ ಗುರುತಿಸಲಾಗಿದೆ. ಮೇ 10ರಿಂದ ಡಯಟ್​ನಲ್ಲಿ ಮತ್ತೊಂದು ಸುತ್ತಿನಲ್ಲಿ 15 ದಿನಗಳ ತರಬೇತಿಯನ್ನು ಶಿಕ್ಷಕರಿಗೆ ನೀಡುತ್ತಿದ್ದೇವೆ. ಆಯ್ಕೆಯಾಗಿರುವ ಶಾಲೆಗಳ ಎಸ್​ಡಿಎಂಸಿಯವರ ಅನುಮತಿ ಪಡೆದಿದ್ದೇವೆ.
| ಅಂದಾನೆಪ್ಪ ವಡಿಗೇರಿ, ಡಿಡಿಪಿಐ ಹಾವೇರಿ

Leave a Reply

Your email address will not be published. Required fields are marked *