More

  233 ಗ್ರಾಮಗಳಲ್ಲಿಲ್ಲ ಸ್ಮಶಾನ ಭೂಮಿ!

  ಬೆಳಗಾವಿ: ಹಳ್ಳಿಗಳ ಜನವಸತಿ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರಗಳು ಹಲವಾರು ಯೋಜನೆಗಳ ಮೂಲಕ ಕೋಟ್ಯಂತರ ರೂ.ವೆಚ್ಚ ಮಾಡುತ್ತಿದೆ. ಆದರೆ, ಅದೇ ಜನರು ಸತ್ತಾಗ ಅವರ ಶವಗಳನ್ನು ಹೂಳಲು ಸ್ಮಶಾನ (ರುದ್ರಭೂಮಿ) ನಿರ್ಮಿಸಲು ಸಾಧ್ಯವಾಗಿಲ್ಲ. ಸ್ವಾತಂತ್ರ ಬಂದಾಗಿನಿಂದ ಇಂದಿನವರೆಗೂ ಜಿಲ್ಲೆಯ 233ಕ್ಕೂ ಅಧಿಕ ಗ್ರಾಮಗಳಲ್ಲಿ ಸ್ಮಶಾನ ಭೂಮಿಯೇ ಇಲ್ಲ.

  ಈಗಲೂ ರಸ್ತೆ ಪಕ್ಕ, ನದಿ, ಹಳ್ಳದ ದಡ ಹಾಗೂ ಕೃಷಿ ಜಮೀನುಗಳಲ್ಲಿಯೇ ಶವ ಹೂಳುತ್ತಿದ್ದಾರೆ. ಇನ್ನೂ ಕೆಲವು ಕಡೆ ಸ್ಮಶಾನ ವಿಸ್ತಾರ ಮಾಡಲು ಜಾಗವೇ ಇಲ್ಲ. ಶವ ಹೂಳಿರುವ ಜಾಗದಲ್ಲೇ ಮತ್ತೆ ಮತ್ತೆ ಹೂಳುವ ಪರಿಸ್ಥಿತಿ ಉಂಟಾಗಿದೆ.

  ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯು 1,233 ಕಂದಾಯ ಗ್ರಾಮಗಳನ್ನು ಹೊಂದಿದೆ. ಅದರಲ್ಲಿ 233 ಗ್ರಾಮಗಳಲ್ಲಿ ಇಂದಿಗೂ ಸ್ಮಶಾನ ನಿರ್ಮಿಸಲು ಸಾಧ್ಯವಾಗಿಲ್ಲ. ಬಹುತೇಕ ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳು ಲಭ್ಯವಿದ್ದರೂ ಖಾಸಗಿ ವ್ಯಕ್ತಿಗಳ ಸ್ವಾಧಿನದಲ್ಲಿವೆ. ಕೆಲ ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳೇ ಇಲ್ಲ. ಕೆಲವು ಲಭ್ಯವಿರುವ ಅರಣ್ಯ, ಕೃಷಿ ಸೇರಿ ವಿವಿಧ ಇಲಾಖೆಯ ಒಡೆತನದಲ್ಲಿ ಜಮೀನುಗಳಿವೆ. ಆದರೆ, ಕಂದಾಯ ಇಲಾಖೆಗೆ ಹಸ್ತಾಂತರಿಸುತ್ತಿಲ್ಲ.

  ಸರ್ಕಾರಿ ಜಮೀನು ಲಭ್ಯ ಇಲ್ಲದಿರುವ ಗ್ರಾಮಗಳಲ್ಲಿ ಸ್ಮಶಾನ ನಿರ್ಮಾಣಕ್ಕೆ ಭೂಮಿ ಸಿಗುತ್ತಿಲ್ಲ. ಸ್ಮಶಾನಕ್ಕಾಗಿ ಖಾಸಗಿ ವ್ಯಕ್ತಿಗಳಿಂದ ಖರೀದಿಸಲು ಜಿಲ್ಲಾ, ತಾಲೂಕು ಆಡಳಿತ ಪ್ರಯತ್ನಿಸುತ್ತಿದೆ. ಆದರೆ, ರೈತರು, ಜಮೀನು ಮಾಲೀಕರು ಸರ್ಕಾರಕ್ಕೆ ಮಾರಾಟ ಮಾಡಬೇಕಾದರೆ ಮಾರುಕಟ್ಟೆಯ ದರಕ್ಕಿಂತ ಎರಡು ಪಟ್ಟು ಹೆಚ್ಚು ದರ ಕೇಳುತ್ತಿದ್ದಾರೆ. ಅಲ್ಲದೆ, ಗ್ರಾಮಗಳಿಗೆ ಹೊಂದಿಕೊಂಡಿರುವ ನೀರಾವರಿ ಜಮೀನು ಹೊಂದಿರುವ ರೈತರು ಪರಿಹಾರ ಹಣದ ಬದಲಾಗಿ ಪರ್ಯಾಯ ಭೂಮಿ ಕೇಳುತ್ತಿದ್ದಾರೆ. ಹೀಗಾಗಿ ಗ್ರಾಮಗಳಲ್ಲಿ ಸ್ಮಶಾನ ನಿರ್ಮಾಣ ಬಹಳ ಕಷ್ಟವಾಗುತ್ತಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

  1991 ರಿಂದ 2021ರ ವರೆಗೆ ಜಿಲ್ಲೆಯಲ್ಲಿ 250ಕ್ಕೂ ಅಧಿಕ ಗ್ರಾಮಗಳಲ್ಲಿ ಹೊಸದಾಗಿ ಸಾಮೂಹಿಕ ಸ್ಮಶಾನ ನಿರ್ಮಿಸಿಕೊಡಲಾಗಿದೆ. ಆದರೆ, ಕಳೆದ ಕೆಲ ವರ್ಷಗಳಿಂದ ಗ್ರಾಮಗಳಲ್ಲಿ ಜನರು ವಿವಿಧ ಸಮಾಜದವರು ಪ್ರತ್ಯೇಕ ಸ್ಮಶಾನ ಭೂಮಿ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಒಂದು ಸ್ಮಶಾನಕ್ಕೆ ಕನಿಷ್ಠ 1 ರಿಂದ 2 ಎಕರೆಗೆ ಭೂಮಿ ಬೇಕು. ಸಾಮೂಹಿಕ ಸ್ಮಶಾನ ನಿರ್ಮಿಸಲು ಸಮಸ್ಯೆ ಇಲ್ಲ. ಆದರೆ, ಎಲ್ಲ ಸಮುದಾಯದವರಿಗೂ ಪ್ರತ್ಯೇಕ ಸ್ಮಶಾನ ನೀಡಲು ಒಂದು ಊರಲ್ಲಿ ಕನಿಷ್ಠ 10 ಎಕರೆಗೆ ಜಮೀನು ಅವಶ್ಯಕತೆ ಇದೆ. ಇಷ್ಟು ಪ್ರಮಾಣದಲ್ಲಿ ಭೂಮಿ ಸಿಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ರುದ್ರಭೂಮಿಗಳ ನಿರ್ವಹಣೆ ಸರಿ ಇಲ್ಲ: ಜಿಲ್ಲೆಯ 1 ಸಾವಿರ ಗ್ರಾಮಗಳು ರುದ್ರಭೂಮಿ ಸೌಲಭ್ಯ ಹೊಂದಿವೆ. ಆದರೆ, ಸಮರ್ಪಕ ನಿರ್ವಹಣೆ, ಸ್ಥಳಿಯ ಆಡಳಿತ ರ್ನಿಲಕ್ಷದಿಂದಾಗಿ ರುದ್ರಭೂಮಿಗಳನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಕೆಲ ಸ್ಮಶಾನಗಳಲ್ಲಿ ಗಿಡಗಂಟಿ ಬೆಳೆದು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ರುದ್ರಭೂಮಿಗಳ ನಿರ್ವಹಣೆ ಹೆಸರಿನಲ್ಲಿ ವಾರ್ಷಿಕ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಅಭಿವೃದ್ಧಿಯಾಗಿಲ್ಲ. ವಿದ್ಯುತ್​ ಸೌಲಭ್ಯ ಇಲ್ಲದಿರುವ ಕಾರಣ ರಾತ್ರಿ ವೇಳೆ ಶವ ಸಂಸ್ಕಾರ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ವಿವಿಧ ಗ್ರಾಮಸ್ಥರು ದೂರಿದ್ದಾರೆ.

  ಸ್ಮಶಾನಕ್ಕೆ ಸರ್ಕಾರಿ ಭೂಮಿ ಲಭ್ಯವಿಲ್ಲದಿರುವ ಗ್ರಾಮಗಳಲ್ಲಿ ಖಾಸಗಿ ಭೂಮಿ ಖರೀದಿಸಲು ಕ್ರಮ ವಹಿಸಲಾಗಿದೆ. ಭೂಮಿ ಗುರುತಿಸುವ ಕೆಲಸ ಪ್ರಗತಿ ಹಂತದಲ್ಲಿದೆ. ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಸ್ಮಶಾನ ಭೂಮಿ ಸೌಲಭ್ಯ ಕಲ್ಪಿಸಿಕೊಡಲು ಜಿಲ್ಲಾಡಳಿತ ಸಿದ್ಧವಿದೆ.
  | ನಿತೇಶ ಪಾಟೀಲ, ಜಿಲ್ಲಾಧಿಕಾರಿ

  | ಮಂಜುನಾಥ ಕೋಳಿಗುಡ್ಡ

  Array

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts