ಜನತೆಗೆ ಭರ್ಜರಿ ಗಿಫ್ಟ್

ಇಂದಿನಿಂದಲೇ 34 ವಸ್ತು ಅಗ್ಗ | ಹೊಸ ವರ್ಷದ ಶುಭಾರಂಭ

ನವದೆಹಲಿ: ಹೊಸ ಕನಸುಗಳನ್ನು ಹೊತ್ತು ಹೊಸ ವರ್ಷಕ್ಕೆ ಅಡಿಯಿಟ್ಟಿರುವ ದೇಶದ ಜನತೆಗೆ ಕೇಂದ್ರ ಸರ್ಕಾರ ನೀಡಿದ್ದ ಜಿಎಸ್​ಟಿ ಗಿಫ್ಟ್​ಪ್ಯಾಕ್ ಮಂಗಳವಾರ ಕೈಸೇರಲಿದೆ. ಡಿ.22ರ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಶೇ.28ರ ಗರಿಷ್ಠ ಸ್ಲ್ಯಾಬ್​ನಲ್ಲಿದ್ದ ಒಟ್ಟು 34 ವಸ್ತುಗಳು ಜ.1ರಿಂದ ಅಗ್ಗವಾಗಿದೆ. ಇದರ ಜತೆಗೆ 10 ಗ್ರಾಂ. ಚಿನ್ನದ ಬೆಲೆ 370 ರೂ. ಇಳಿದರೆ, ಇಪಿಎಫ್, ಎಲ್​ಪಿಜಿ, ಗೃಹಸಾಲ ಬಡ್ಡಿ ರಿಯಾಯಿತಿ ಮುಂತಾದ ಬಾಬತ್ತುಗಳಲ್ಲಿಯೂ ಸ್ವಲ್ಪ ಸಿಹಿಸುದ್ದಿಯಿದೆ. ಮತ್ತೊಂದೆಡೆ, ತೈಲ ದರದ ಇಳಿಕೆಪರ್ವ ಮುಂದುವರಿದಿದೆ. ಶೇ.99 ಸರಕುಗಳನ್ನು ಶೇ.18 ಅಥವಾ ಅದಕ್ಕಿಂತ ಕಡಿಮೆ ಜಿಎಸ್​ಟಿ ಸ್ಲ್ಯಾಬ್​ಗೆ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಡಿ.18ರಂದು ಭರವಸೆ ನೀಡಿದ್ದರು. ಪ್ರಸ್ತುತ ಶೇ.28 ಜಿಎಸ್​ಟಿ ಸ್ಲ್ಯಾಬ್​ನಲ್ಲಿ 13 ಆಟೋಮೊಬೈಲ್ ಭಾಗಗಳು ಮತ್ತು ಸಿಮೆಂಟ್ ಉದ್ದಿಮೆಯ 8 ವಸ್ತುಗಳಷ್ಟೇ ಉಳಿದಿವೆ. ಜಿಎಸ್​ಟಿ ಇಳಿಕೆಯಿಂದಾಗಿ ಟಿವಿ, ಕಂಪ್ಯೂಟರ್ ಮಾನಿಟರ್​ಗಳು, ವಿಡಿಯೋ ಗೇಮ್್ಸ, ಲಿಥಿಯಮ್ -ಐಯಾನ್ ಪವರ್ ಬ್ಯಾಂಕ್, ರಿಟ್ರೆಡೆಡ್ ಟೈರ್​ಗಳು, ಸಿನಿಮಾ ಟಿಕೆಟ್, ವ್ಹೀಲ್​ಚೇರ್ ಸೇರಿ ಹತ್ತಾರು ವಸ್ತುಗಳ ಬೆಲೆ ಇಳಿಕೆ ಆಗಿದೆ.

ಬಡ್ಡಿ ಸಬ್ಸಿಡಿಗೆ ಅವಕಾಶ: 6 ಲಕ್ಷ ರೂ.ನಿಂದ 18 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವವರು ಮೊದಲ ಬಾರಿಗೆ ಮನೆ ಖರೀದಿಸುತ್ತಿದ್ದರೆ ಬಡ್ಡಿ ಸಬ್ಸಿಡಿಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸಿದೆ. 2020ರ ಮಾರ್ಚ್​ವರೆಗೆ ಅವಕಾಶ ನೀಡಲಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಸಾಲ ಆಧರಿತ ಸಬ್ಸಿಡಿ ಯೋಜನೆ ಅನ್ವಯ ಮಧ್ಯಮ ಪ್ರಮಾಣ ಆದಾಯ ಹೊಂದಿರುವವರ (ಎಂಐಜಿ) ಮರುಪಾವತಿ ದಾಖಲೆ ಉತ್ತಮವಾಗಿದೆ. ಈ ವಲಯದಲ್ಲಿ ಹೆಚ್ಚು ಬೆಳವಣಿಗೆ ಇರುವುದರಿಂದ ಪ್ರಧಾನಿ ಮೋದಿ ಅವರ ಆಶಯದಂತೆ ಈ ಅವಕಾಶ ಕಲ್ಪಿಸಲಾಗಿದೆ ಎಂದು ಪುರಿ ಹೇಳಿದ್ದಾರೆ.

ಹೊಸ ಐಟಿಆರ್ ವ್ಯವಸ್ಥೆ ಜಾರಿ

ಏ.1ರಿಂದ 2019-20 ಹಣಕಾಸು ವರ್ಷ ಆರಂಭವಾಗುವ ಹಿನ್ನೆಲೆಯಲ್ಲಿ ರಿಟರ್ನ್ಸ್ ಸಲ್ಲಿಕೆ ವ್ಯವಸ್ಥೆ ಕೂಡ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಜು.1ರಿಂದ ನೂತನ ವ್ಯವಸ್ಥೆ ಕಡ್ಡಾಯಗೊಳ್ಳಲಿದೆ. ಜಿಎಸ್​ಟಿ ವಾರ್ಷಿಕ ರಿಟರ್ನ್ಸ್ ಮತ್ತು ಆಡಿಟ್ ವರದಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಜೂ.30ರವರೆಗೆ ವಿಸ್ತರಿಸಲಾಗಿದೆ.

ತೆರಿಗೆ ಇಳಿಕೆ ಕಂಡ ವಸ್ತುಗಳು

  • ಶೇ. 28 ಜಿಎಸ್​ಟಿ ಇದ್ದ 32 ಅಂಗುಲವರೆಗಿನ ಟಿವಿ, ಮಾನಿಟರ್, ಗೇರ್ ಬಾಕ್ಸ್, ಕ್ರ್ಯಾಂಕ್ಸ್, ಡಿಜಿಟಲ್ ಕ್ಯಾಮರಾಗಳು ಮತ್ತು ವಿಡಿಯೋ ಕ್ಯಾಮರಾ ರೆಕಾರ್ಡರ್​ಗಳು, -ಠಿ;100 ಗೂ ಅಧಿಕ ಬೆಲೆಯ ಸಿನಿಮಾ ಟಿಕೆಟ್​ಗಳು ಶೇ. 18 ಜಿಎಸ್​ಟಿಯಲ್ಲಿ ದೊರೆಯಲಿವೆ.
  • ಶೇ. 28 ತೆರಿಗೆ ಇದ್ದ ಅಂಗವಿಕಲರ ಬಳಕೆ ಸಾಧನಗಳು ಹಾಗೂ ಶೇ.18 ಇದ್ದ ಮಾರ್ಬಲ್ ರಬ್ಬರ್ ಶೇ. 5ಕ್ಕೆ
  • ಶೇ.12 ಜಿಎಸ್​ಟಿ ಇದ್ದ ವಾಕಿಂಗ್ ಸ್ಟಿಕ್, ಫ್ಲೈ ಆಶ್ ಬ್ಲಾಕ್ಸ್ ಶೇ. 5
  • ಶೇ.12 ಜಿಎಸ್​ಟಿ ಇದ್ದ ಮ್ಯೂಸಿಕ್ ಬುಕ್ಸ್ ಹಾಗೂ ಶೇ. 5 ಇದ್ದ ಶೇಖರಿಸಲಾದ ತರಕಾರಿ ತೆರಿಗೆ ವಿನಾಯಿತಿ ಪಡೆದಿವೆ
  • ಶೇ.18 ಇದ್ದ -ಠಿ;100 ವರೆಗಿನ ಬೆಲೆಯ ಸಿನಿಮಾ ಟಿಕೆಟ್​ಗಳು ಮತ್ತು ಸರಕು ಸಾಗಣೆ ವಾಹನಗಳ ಮೇಲಿನ ವಿಮಾ ಪ್ರೀಮಿಯಂಗೆ ಶೇ. 12ಕ್ಕೆ ಇಳಿದಿವೆ
  • ಶೇ.18 ಜಿಎಸ್​ಟಿ ಇದ್ದ ಐಐಎಂ ಕೋರ್ಸ್​ಗಳು ಮತ್ತು ಬ್ಯಾಂಕ್ ಸೇವೆಗಳ ಶುಲ್ಕ (ಉಳಿತಾಯ ಖಾತೆ, ಜನಧನ ಯೋಜನೆ) ಇದೀಗ ತೆರಿಗೆ ರಿಯಾಯಿತಿ ಪಡೆದಿವೆ.
2018ರ ಕನಿಷ್ಠ ದರಕ್ಕೆ ಪೆಟ್ರೋಲ್

ಸೋಮವಾರವೂ ತೈಲ ಮಾರಾಟ ಕಂಪನಿ ಗಳು ಪೆಟ್ರೋಲ್, ಡೀಸೆಲ್ ದರ ಕಡಿತಗೊಳಿಸುವುದರೊಂದಿಗೆ ಪೆಟ್ರೋಲ್ ಬೆಲೆ 2018ರಲ್ಲೇ ಕನಿಷ್ಠ ದರಕ್ಕೆ ಕುಸಿಯಿತು. 20 ಪೈಸೆ ಇಳಿಕೆಯೊಂದಿಗೆ ಪೆಟ್ರೋಲ್ ದೆಹಲಿಯಲ್ಲಿ ಪ್ರತಿ ಲೀ.ಗೆ 68.84 ರೂ.ಗೆ ಮಾರಾಟವಾಯಿತು. 23 ಪೈಸೆ ಕಡಿಮೆಯಾದ ಡೀಸೆಲ್ ದರ 62.86 ರೂ. ತಲುಪಿದೆ. ಕಳೆದ 9 ತಿಂಗಳಲ್ಲೇ ಕನಿಷ್ಠ ಡೀಸೆಲ್ ದರ ದಾಖಲಾಗಿದೆ. ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಬ್ಯಾರೆಲ್ ಬೆಲೆ ಸತತ ಹೆಚ್ಚಳವಾದ ಹಿನ್ನೆಲೆ ಆ.16ರಿಂದ ಪೆಟ್ರೋಲ್, ಡೀಸೆಲ್ ದರ ಏರುಗತಿ ಸಾಧಿಸಿತ್ತು. ಅ.4ರವರೆಗೆ ಪೆಟ್ರೋಲ್ ಒಟ್ಟು 6.86 ರೂ. ಏರಿಕೆ ಕಂಡರೆ, ಡೀಸೆಲ್ ಲೀ.ಗೆ ಒಟ್ಟು 6.73 ರೂ. ಹೆಚ್ಚಳವಾಗಿತ್ತು.

ಅ.17ಕ್ಕೆ ದೆಹಲಿಯಲ್ಲಿ ಪ್ರತಿ ಲೀ. ಪೆಟ್ರೋಲ್ 82.83 ರೂ., ಡೀಸೆಲ್ 75.69 ರೂ. ಆಗಿತ್ತು. ಕಚ್ಚಾತೈಲ ಬೆಲೆ ಬ್ಯಾರೆಲ್​ಗೆ 86.74 ಡಾಲರ್ ಮುಟ್ಟಿತ್ತು. ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಕೇಂದ್ರ ಸರ್ಕಾರ ಪ್ರತಿ ಲೀ. ಇಂಧನ ಮೇಲೆ 1.50 ರೂ. ಸುಂಕ ಕಡಿತ ಘೋಷಿಸಿತ್ತು. ತೈಲ ಮಾರಾಟ ಕಂಪನಿಗಳು, ರಿಟೇಲರ್​ಗಳಿಗೂ 1 ರೂ. ಕಡಿತಕ್ಕೆ ಸೂಚಿಸಿತ್ತು. ಜತೆಗೆ ರಾಜ್ಯ ಸರ್ಕಾರಗಳು ಕೂಡ ತಮ್ಮ ಪಾಲಿನ ತೆರಿಗೆ ಕಡಿತಮಾಡುವ ಮೂಲಕ ದರ ಏರಿಕೆಗೆ ತಾತ್ಕಾಲಿಕ ಪರಿಹಾರ ಒದಗಿಸಿದ್ದವು. ಕಳೆದ ಎರಡು ವರ್ಷಗಳ ಹೋಲಿಕೆಯಲ್ಲಿ 2018ರಲ್ಲಿ ಕಚ್ಚಾತೈಲ ಬ್ಯಾರೆಲ್ ಬೆಲೆ ಶೇ. 19 ಇಳಿಕೆ ಕಂಡಿತು.

ಪಿಎಫ್ ಹೂಡಿಕೆ ಸದಸ್ಯರಿಗೆ ಅವಕಾಶ

ತನ್ನ ಹೂಡಿಕೆಯ ಶೇ.15 ಭಾಗವನ್ನು ವಿನಿಮಯ ವ್ಯಾಪಾರ ನಿಧಿ(ಇಟಿಎಫ್)ಯಲ್ಲಿ ಹೂಡಿಕೆ ಮಾಡುವ ಕಾರ್ವಿುಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ)ಯ ಒಟ್ಟಾರೆ ಹೂಡಿಕೆ ಮೊತ್ತ 55 ಸಾವಿರ ಕೋಟಿ ರೂ. ತಲುಪಿದೆ. ಆದರೆ ಭವಿಷ್ಯ ನಿಧಿ ಖಾತೆದಾರರಿಗೆ(ಸದಸ್ಯರಿಗೆ) ಈ ಹೂಡಿಕೆಯ ಮೊತ್ತ ಅವರ ಖಾತೆಯಲ್ಲಿ ಕಾಣಸಿಗುವುದಿಲ್ಲ. ಷೇರುಗಳಲ್ಲಿ ಹೂಡಿಕೆ ಮಾಡಲಾಗುವ ಇಂಥ ನಿವೃತ್ತಿ ಉಳಿತಾಯ ನಿಧಿಯ ಮೊತ್ತವನ್ನು ಹೆಚ್ಚಿಸುವ ಅವಕಾಶ ಖಾತೆದಾರರಿಗೆ ಇರುವುದಿಲ್ಲ. ಇದೀಗ ಹೊಸ ಸಾಫ್ಟ್​ವೇರ್ ಅಭಿವೃದ್ಧಿಯಲ್ಲಿ ಇಪಿಎಫ್​ಒ ನಿರತವಾಗಿದ್ದು, ಅದರಂತೆ ಪಿಎಫ್ ಸದಸ್ಯರು ಷೇರಿನ ಹೂಡಿಕೆ ಪ್ರಮಾಣ ನಿರ್ಧರಿಸಲು ಅವಕಾಶ ನೀಡಲಾಗುತ್ತದೆ.

ಎಲ್​ಪಿಜಿ 5.91 ರೂ. ಕಡಿತ

ಸಬ್ಸಿಡಿಸಹಿತ ಎಲ್​ಪಿಜಿ ದರ 5.91 ರೂ, ಸಬ್ಸಿಡಿರಹಿತ ಸಿಲಿಂಡರ್ ದರ 120.50 ರೂ. ಇಳಿಕೆ ಆಗಿದೆ. ದೆಹಲಿಯಲ್ಲಿ ಸಬ್ಸಿಡಿ ಸಹಿತ ಎಲ್​ಪಿಜಿ ಸಿಲಿಂಡರ್(14.2 ಕೆ.ಜಿ) ಬೆಲೆ 494.99 ರೂ. ತಲುಪಿದೆ. ಸಬ್ಸಿಡಿರಹಿತ ಸಿಲಿಂಡರ್ ಬೆಲೆ 689 ರೂ. ಆಗಲಿದೆ. ಡಿ.1ರಂದು ಸಬ್ಸಿಡಿಸಹಿತ ಎಲ್​ಪಿಜಿ ದರ ಪ್ರತಿ ಸಿಲಿಂಡರ್​ಗೆ 6.52 ರೂ. ಹಾಗೂ ಸಬ್ಸಿಡಿರಹಿತ ಸಿಲಿಂಡರ್ ದರ 133 ರೂ. ಕಡಿತಗೊಂಡಿತ್ತು.