23 ಸೂಕ್ಷ್ಮ ಮತಗಟ್ಟೆಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆ

ಸಾಗರ: ಕ್ಷೇತ್ರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಪಿ.ವಿ.ದರ್ಶನ್ ಅಂತಿಮ ಸುತ್ತಿನ ಪರಿಶೀಲನೆ ನಡೆಸಿ ಮಾಹಿತಿ ನೀಡಿದರು.

ಸಾಗರ ಕ್ಷೇತ್ರದಲ್ಲಿ ಒಟ್ಟು 1,99,502 ಮತದಾರರು ಇದ್ದು 98,927 ಪುರುಷರು ಮತ್ತು 1,00,574 ಮಹಿಳೆಯರು ಹಾಗೂ ಇತರೆ ಓರ್ವ ಮತದಾರರು ಇದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಗೆ 4300ಕ್ಕೂ ಅಧಿಕ ಯುವ ಮತದಾರರು ಸೇರ್ಪಡೆಯಾಗಿದ್ದು ಅವರು ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ತಾಲೂಕಿನಲ್ಲಿ 9 ಶತಾಯುಷಿಗಳು ಮತದಾನ ಮಾಡಲಿದ್ದು ಆ ಪೈಕಿ 8 ಮಹಿಳೆಯರು, ಒಬ್ಬ ಪುರುಷ.

ಕ್ಷೇತ್ರದಲ್ಲಿ 264 ಬೂತ್​ಗಳಿದ್ದು ಈ ಪೈಕಿ ಸಾಗರದ ಬೆಳಲಮಕ್ಕಿ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ರಾಮನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸಖಿ ಬೂತ್ ಆಗಿ ಮಾಡಲಾಗಿದೆ. ವಳೂರು ಮತಗಟ್ಟೆ 239ನ್ನು ಬುಡಕಟ್ಟು ಮತಗಟ್ಟೆಯಾಗಿ ರೂಪಿಸಲಾಗಿದೆ.

ಮತಗಟ್ಟೆ ಕಾರ್ಯಕ್ಕಾಗಿ ಒಟ್ಟು 1152 ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ 20 ಅತಿಸೂಕ್ಷ್ಮ ಮತಗಟ್ಟೆಯಲ್ಲಿ ಮೈಕ್ರೋ ಅಬ್ಸರ್ವರ್ ನೇಮಕ ಮಾಡಲಾಗಿದ್ದು 23 ಸೂಕ್ಷ್ಮ ಮತಗಟ್ಟೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸೋಮವಾರ ಮತಗಟ್ಟೆಗಳಿಗೆ ಇವಿಎಂ ಹೊತ್ತು ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ತೆರಳಿದರು. ಇವರಿಗೆ 35 ಬಸ್ ಹಾಗೂ 36 ಸಣ್ಣ ವಾಹನಗಳನ್ನು ನಿಯೋಜಿಸಲಾಗಿದೆ.

ಎಎಸ್​ಪಿ ಯತೀಶ್ ನೇತೃತ್ವದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದ್ದು 4 ಸರ್ಕಲ್ ಇನ್ಸ್​ಪೆಕ್ಟರ್, ಸಬ್​ಇನ್ಸ್​ಪೆಕ್ಟರ್ 11, ಎಎಸ್​ಐ 17, ದಫೇದಾರ್ 54 ಮತ್ತು 118 ಪೊಲೀಸ್ ಪೇದೆಗಳ ಜತೆಗೆ 187 ಹೋಮ್ಾರ್ಡ್ ನೇಮಕ ಮಾಡಲಾಗಿದೆ. ಅಲ್ಲದೆ 2 ಕೆಎಸ್​ಆರ್​ಪಿ ತುಕಡಿ, 1 ಕೆಎಸ್​ಆರ್​ಪಿ ವಿಶೇಷ ತುಕಡಿ, 4 ಡಿಎಆರ್ ಜತೆಗೆ 23 ಮೊಬೈಲ್ ಸೆಕ್ಟರ್​ಗಳನ್ನು ನಿಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಮಾರ್ಗದರ್ಶನದಲ್ಲಿ ತಾಲೂಕಿನಾದ್ಯಂತ ಮತದಾರರ ಜಾಗೃತಿ ಕಾರ್ಯಕ್ರಮ ನಡೆದಿದ್ದು ಹೆಚ್ಚಿನ ಮತದಾನ ಆಗುವ ನಿರೀಕ್ಷೆ ಇದೆ.

ಮಕ್ಕಳ ಜತೆ ಕರ್ತವ್ಯಕ್ಕೆ ಹಾಜರು:ಚುನಾವಣಾ ಕರ್ತವ್ಯಕ್ಕಾಗಿ ತಾಯಂದಿರು ಮಗುವನ್ನು ಕಂಕುಳಲ್ಲಿಟ್ಟುಕೊಂಡು ಕರ್ತವ್ಯಕ್ಕೆ ಹಾಜರಾಗುತ್ತಿದ್ದುದು ಕಂಡುಬಂತು. ಸಾಗರದ ಆಶಾ ಮತ್ತು ಆಯನೂರಿನ ನಾಜಿಯಾ ಚುನಾವಣಾ ಕರ್ತವ್ಯ ಅತ್ಯಂತ ಪವಿತ್ರವಾದುದು. ಮತಕೇಂದ್ರದಲ್ಲಿ ನಮಗೆ ಎಲ್ಲ ಮೂಲ ಸೌಕರ್ಯಗಳನ್ನೂ ನೀಡಿದ್ದಾರೆ. ಅತ್ಯಂತ ಸಂತೋಷದಿಂದ ಈ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇವೆ ಎಂದರು. 3 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿಗೆ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಹ ಮಾಡಲಾಗಿದ್ದು ಎಲ್ಲ ಮತಗಟ್ಟೆಗಳಲ್ಲಿ ಅಂಗವಿಕಲರು ಮತ್ತು ವೃದ್ಧರನ್ನು ವ್ಹೀಲ್​ಚೇರ್ ಮೂಲಕ ಮತದಾನ ಕೇಂದ್ರದ ಒಳಗೆ ಕರೆದುಕೊಂಡು ಮತದಾನ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಅಲ್ಲದೆ ಅಂಗವಿಕಲರನ್ನೂ ಮತಗಟ್ಟೆಗೆ ವಾಹನಗಳ ಮೂಲಕ ಕರೆತರುವ ವ್ಯವಸ್ಥೆ ಕೂಡ ಮಾಡಲಾಗಿದ್ದು ಅವರನ್ನು ಈಗಾಗಲೆ ಗುರುತಿಸಲಾಗಿದ್ದು ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನೂ ಮಾಡಲಾಗಿದೆ.