23ರಂದು ಮೈತ್ರಿಕೂಟದ ಅಭ್ಯರ್ಥಿ ಘೋಷಣೆ

ಮಡಿಕೇರಿ: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಗೆಲುವು ಸಾಧಿಸುವುದು ಖಚಿತ ಎಂದು ಮೈತ್ರಿಕೂಟದಿಂದ ಸ್ಪರ್ಧೆ ಬಯಸಿರುವ ಮಾಜಿ ಸಂಸದ ಸಿ.ಎಚ್. ವಿಜಯಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ಮಡಿಕೇರಿ ಕೊಡವ ಸಮಾಜದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಿದ್ಧತಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈತ್ರಿಕೂಟದ ಅಭ್ಯರ್ಥಿ ಹೆಸರು ಮಾ.23 ರಂದು ಅಧಿಕೃತವಾಗಿ ಘೋಷಣೆಯಾಗಲಿದ್ದು, 25 ರಂದು ನಾಮಪತ್ರ ಸಲ್ಲಿಸಲಾಗುವುದು ಎಂದರು.
ಚುನಾವಣೆ ಗೆಲ್ಲಲು ಅಗತ್ಯ ರಣತಂತ್ರ ರೂಪಿಸಲಾಗುತ್ತಿದೆ. ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಿದ್ದೇವೆ. ಮಿತ್ರಪಕ್ಷ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಟ್ಟಾಗಿ ಚುನಾವಣೆ ಎದುರಿಸಲು ಮಾನಸಿಕವಾಗಿ ಸಿದ್ಧವಾಗಿದ್ದೇವೆ. ವಿರಾಜಪೇಟೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಚುನಾವಣಾ ಕಚೇರಿ ತೆರೆದಿದ್ದೇವೆ. ಆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುತ್ತಿರುವುದಾಗಿ ಹೇಳಿದರು.
ಮೈತ್ರಿಕೂಟದ ಅಭ್ಯರ್ಥಿಗೆ ಏಕೆ ಮತ ಚಲಾಯಿಸಬೇಕು, ಬಿಜೆಪಿಗೆ ಪರ್ಯಾಯವಾಗಿ ಮೈತ್ರಿಕೂಟದ ಅಗತ್ಯವೇನು ಎಂಬ ಬಗ್ಗೆ ನಾಮಪತ್ರ ಸಲ್ಲಿಸಿದ ಬಳಿಕ ತಿಳಿಸಲಾಗುವುದು. ಮೈತ್ರಿಕೂಟ ಎಲ್ಲಿಯೂ ಎಡವದಂತೆ ನೋಡಿಕೊಳ್ಳಲಾಗುವುದೆಂದರು.
3 ದಿನಗಳಿಂದ ಕೊಡಗು ಪ್ರವಾಸ ಮಾಡುತ್ತಿದ್ದು, ಉತ್ತಮ ಸ್ಪಂದನೆ ದೊರೆಯುತ್ತಿದೆ. ಕೊಡಗಿನ ಅಳಿಯ (ಪತ್ನಿ ಮನೆ ದೇವರಪುರ) ಆಗಿರುವ ನನಗೆ ಕೊಡಗಿನ ಸಂಸ್ಕೃತಿ ಮತ್ತು ಸಮಸ್ಯೆ ಬಗ್ಗೆ ಸ್ಪಷ್ಟ ಅರಿವಿದೆ. ನಾನು ಹೊರಗಿನ ಅಭ್ಯರ್ಥಿ ಅಲ್ಲ ಎಂದು ಸ್ಪಷ್ಟ ಪಡಿಸಿದರು.
ಕೊಡಗಿಗೆ ಸಂಸದರ ಕೊಡುಗೆ ಶೂನ್ಯ:
5 ವರ್ಷಗಳ ಅವಧಿಯಲ್ಲಿ ಕೊಡಗಿಗೆ ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಸಂಸದರ ಕೊಡುಗೆ ಶೂನ್ಯ. ಎಚ್.ವಿಶ್ವನಾಥ್ ಅವರು ಈ ಹಿಂದೆ ಸಂಸದರಾಗಿ ಮಾಡಿದ್ದ ಕೆಲಸಗಳನ್ನು ಈಗಿನ ಸಂಸದರು ಮುಂದುವರಿಸಲಿಲ್ಲ. ಪ್ರಕೃತಿ ವಿಕೋಪ ಪರಿಹಾರ ಸಂಬಂಧ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಕಾಟಾಚಾರಕ್ಕೆ ಎಂಬಂತೆ ಕೊಡಗಿಗೆ ಭೇಟಿ ನೀಡಿದ್ದು ಹೊರತುಪಡಿಸಿ ಇನ್ಯಾವ ಕೇಂದ್ರ ಸಚಿವರು- ಅಧಿಕಾರಿಗಳು ಕೊಡಗಿಗೆ ಬರಲಿಲ್ಲ ಎಂದು ಟೀಕಿಸಿದರು.
ಕಸ್ತೂರಿ ರಂಗನ್ ವರದಿ ನಿಲುವು ಸ್ಪಷ್ಟಪಡಿಸಿ:
ನಾನು ಅರಣ್ಯ ಸಚಿವನಾಗಿದ್ದಾಗ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಬೆಂಬಲ ನೀಡಿದ್ದೇನೆಂದು ಹೇಳಿರುವ ಮಡಿಕೇರಿ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಗ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿ ರಾಜ್ಯದ ನಿಲುವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಲಾಗಿತ್ತು ಎಂದು ತಿಳಿಸಿದರು.
ಇದೀಗ ಕೇಂದ್ರ ಸರ್ಕಾರ ವರದಿಯನ್ನು ಅನುಷ್ಠಾನಕ್ಕೆ ತಂದಿದ್ದು, ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಸಂಸದರು ಈ ಬಗ್ಗೆ ಧ್ವನಿ ಎತ್ತಲಿಲ್ಲ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.