23ರಂದು ಮತ ಎಣಿಕೆ, ಸಂಜೆ 4ಕ್ಕೆ ಲೋಕಸಭಾ ಚುನಾವಣೆ ಫಲಿತಾಂಶ

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆ ಫಲಿತಾಂಶ ಮೇ 23ರಂದು ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಪ್ರಕಟಗೊಳ್ಳಲಿದೆ ಇದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು.

ಮತ ಎಣಿಕೆ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸರ್ಕಾರಿ ವಿಜ್ಞಾನ ಕಾಲೇಜು ಹೊಸ ಕಟ್ಟಡದ 8 ಕೊಠಡಿಗಳ 112 ಟೇಬಲ್‌ಗಳಲ್ಲಿ ಚಿತ್ರದುರ್ಗ ಜಿಲ್ಲೆ 6 ಹಾಗೂ ತುಮಕೂರು ಜಿಲ್ಲೆ 2 ವಿಧಾನಸಭಾ ಕ್ಷೇತ್ರಗಳ ಸಹಿತ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

ನೆಲಮಹಡಿಯಲ್ಲಿ ಮೊಳಕಾಲ್ಮೂರು, ಹೊಸದುರ್ಗ, ಶಿರಾ, ಪಾವಗಡ, ಒಂದನೇ ಮಹಡಿಯಲ್ಲಿ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಬೆಳಗ್ಗೆ 8ರಿಂದ ಆರಂಭವಾಗಲಿದೆ. ಆರಂಭದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು 5 ಬೂತ್‌ಗಳಲ್ಲಿಯ ವಿವಿ ಪ್ಯಾಟ್‌ಗಳನ್ನು ರ‌್ಯಾಂಡಮ್ ಆಗಿ ಮಾಡಿ ಮತ ಎಣಿಸಲಾಗುತ್ತದೆ.

8 ಕ್ಷೇತ್ರಗಳಲ್ಲಿ ಕನಿಷ್ಠ 18,ಗರಿಷ್ಠ 21ರವರೆಗೆ ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. 384 ಅಧಿಕಾರಿಗಳನ್ನು 128 ಎಣಿಕೆ ಮೈಕ್ರೋ ಅಬಸ್ಸರ್ವರ್ಸ್‌ ಹಾಗೂ 128 ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ. ಎಣಿಕೆ ಕೇಂದ್ರಕ್ಕೆ ಆಗಮಿಸುವಂಥ ಏಜೆಂಟರು ಯಾವುದೇ ಕಾರಣಕ್ಕೂ ಮೊಬೈಲ್ ಮೊದಲಾದ ಎಲೆಕ್ಟ್ರಾನಿಕ್ ಇತ್ಯಾದಿ ವಸ್ತುಗಳನ್ನು ತರುವಂತಿಲ್ಲ. ಏಜೆಂಟರು ಬೆಳಗ್ಗೆ 7.30ಕ್ಕೆ ಹಾಜರಿರಬೇಕೆಂದರು.

ಸಾವಿರ ಪೊಲಿಸರು

ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗುತ್ತಿದೆ ಎಂದು ಎಸ್ಪಿ ಡಾ.ಕೆ.ಅರುಣ್ ಹೇಳಿದರು. ಎಣಿಕೆ ದಿನದಂದು ಜಿಲ್ಲಾದ್ಯಂತ 144 ಕಲಂ ಜಾರಿಯ ಲ್ಲಿರುತ್ತದೆ. ಅಂದು 24 ತಾಸುಗಳ ಕಾಲ ಮದ್ಯ ಮಾರಾಟ ನಿಷೇಧವಿರುತ್ತದೆ. ಸಂಭ್ರ ಮಾಚರಣೆಗೆ ಅವಕಾಶವಿರದೆಂದು ಸ್ಪಷ್ಟಪಡಿಸಿದರು. ಎಡಿಸಿ ಸಂಗಪ್ಪ ಇದ್ದರು.

ಸಂಪ್ರದಾಯ ಮುರಿದ ಜಿಲ್ಲಾಧಿಕಾರಿ

ಚುನಾವಣೆಗಳ ವೇಳೆಯ ಮತ ಎಣಿಕೆ ಕುರಿತಂತೆ ಎಣಿಕೆ ಕೇಂದ್ರದ ಸಿದ್ಧತೆಗಳನ್ನು ಮಾಧ್ಯಮದವರಿಗೆ ಪರಿಚಯಿಸುವುದು ಈವರೆಗಿನ ರೂಢಿ. ಆದರೆ ಜಿಲ್ಲಾಧಿಕಾರಿ ಈ ಬಾರಿ ಲೋಕಸಭೆ ಚುನಾವಣೆ ಕುರಿತಂತೆ ಎಣಿಕೆ ಕೇಂದ್ರದ ಪಕ್ಕದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಲ್ಲಿ ಪತ್ರಿಕಾಗೋಷ್ಠಿ ಮಾಡಿದರು. ಬಳಿಕ ಮತ ಎಣಿಕೆ ಕೇಂದ್ರಕ್ಕೆ ಮಾಧ್ಯಮದವರನ್ನು ಕರೆದೊಯ್ಯದೆ ಸಂಪ್ರದಾಯ ಮುರಿದರು. ತಾವೇ ವಾರ್ತಾ ಇಲಾಖೆ ಮೂಲಕ ಮಾಧ್ಯಮಗಳಿಗೆ ಪೋಟೊ ಬಿಡುಗಡೆ ಮಾಡುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *