ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 229 ನಾಮಪತ್ರ ಸಲ್ಲಿಕೆ

ಕಾರವಾರ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ. 18 ಕೊನೆಯ ದಿನವಾಗಿದೆ. ಒಟ್ಟು 8 ಸಂಸ್ಥೆಗಳ 200 ವಾರ್ಡ್​ಗಳಿಗೆ ಚುನಾವಣೆ ನಡೆದಿದ್ದು, ಗುರುವಾರದವರೆಗೆ 299 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದುವರೆಗೆ ಕಾರವಾರದಲ್ಲಿ 34, ಅಂಕೋಲಾದಲ್ಲಿ 34 ನಾಮಪತ್ರಗಳು ಸಲ್ಲಿಕೆಯಾಗಿವೆ.

ಕಾರವಾರ ನಗರಸಭೆ ಪಟ್ಟಿ: ಕಾರವಾರ ನಗರ ಸಭೆಗೆ ಸಂಬಂಧಿಸಿದಂತೆ ಬಿಜೆಪಿ ಎಲ್ಲ 31 ವಾರ್ಡ್​ಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಕೆಲವರು ನಾಮಪತ್ರ ಸಲ್ಲಿಸಿದ್ದು, ಇನ್ನು ಕೆಲವರು ಹಲವರು ಆ. 17 ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಕಾಂಗ್ರೆಸ್ 26 ವಾರ್ಡ್​ಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಬಿ.ಫಾಮ್ರ್ ದೊರೆತ ಹಲವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಇನ್ನೂ ಒಬ್ಬರ ಹೆಸರನ್ನೂ ಬಿಡುಗಡೆ ಮಾಡಿಲ್ಲ. ಬಿಜೆಪಿಯಲ್ಲಿ ಕೆಲವು ಹಿರಿಯ ಸದಸ್ಯರನ್ನು ಹೊರತುಪಡಿಸಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್​ನಲ್ಲಿ ಹಳಬರ ಜತೆಗೆ ಬಿಜೆಪಿಯಿಂದ ಬಂದ ಅನಿಲ ನಾಯ್ಕ ಹಾಗೂ ಜೆಡಿಎಸ್​ನಿಂದ ಬಂದ ಸಂತೋಷ ಮಾಳ್ಸೇಕರ್ ಅವರಿಗೂ ಟಿಕೆಟ್ ನೀಡಲಾಗಿದೆ. ಗುರುವಾರ ಮಾಜಿ ಶಾಸಕ ಸತೀಶ ಸೈಲ್ ಪಟ್ಟಿ ಬಿಡುಗಡೆ ಮಾಡಿದ್ದು, ಎಲ್ಲ ಸಮಾಜದವರಿಗೂ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ ಎಂದು ತಿಳಿಸಿದರು.

ಕೈ ಆಡಳಿತದಿಂದ ಬೇಸತ್ತಿರುವ ಜನ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿರುವ ಜನತೆ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.

ಈ ಕುರಿತು ಹೇಳಿಕೆ ನೀಡಿ ಪ.ಪಂ.ನಲ್ಲಿ 10 ವರ್ಷಗಳ ಕಾಂಗ್ರೆಸ್ ಆಡಳಿತದ ವೈಫಲ್ಯದಿಂದ ಜನ ರೊಚ್ಚಿಗೆದ್ದಿದ್ದಾರೆ. ಸರ್ಕಾರದ ಯೋಜನೆಗಳ ಹಣ ಅಪವ್ಯಯವಾಗಿದೆ. ಭ್ರಷ್ಟಾಚಾರ ವಿಪರೀತವಾಗಿದ್ದು, ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಸಂಚಾರ ಅಸ್ತವ್ಯಸ್ಥವಾಗಿದೆ. ಪಟ್ಟಣದ ಎಲ್ಲ ಕಡೆ ಕಸ, ಕೊಳಚೆಗಳು ತುಂಬಿ ಅಸಹ್ಯ ಹುಟ್ಟಿಸುತ್ತಿವೆ. ಬಿಡಾಡಿ ಹಂದಿಗಳು ಹಾಗೂ ಸೊಳ್ಳೆಗಳಿಂದ ಪಟ್ಟಣ ರೋಗಗ್ರಸ್ತವಾಗಿದೆ.

ತಟ್ಟಿಹಳ್ಳದಿಂದ ಕುಡಿಯಲು ನೀರು ತರುವುದಾಗಿ ನಂಬಿಸಿ ಜನಕ್ಕೆ ದ್ರೋಹ ಮಾಡಿದ್ದಾರೆ. ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವಿಫಲವಾಗಿದೆ. ಆಸ್ಪತ್ರೆಯಲ್ಲಿ ಡಯಾಲಿಸೀಸ್ ಯಂತ್ರ ಬಂದರೂ ಘಟಕ ಪ್ರಾರಂಭವಾಗಿಲ್ಲ. ಗೂಡಂಗಡಿಗಳನ್ನು ಎಬ್ಬಿಸಿದ ಆಡಳಿತ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಅತಿಕ್ರಮಣ ಮನೆಗಳನ್ನು ಮಂಜೂರು ಮಾಡುವುದಾಗಿ ಸುಳ್ಳು ಹೇಳಿದ್ದಾರೆ. ಮಂಜೂರಾದ ಮನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಶೌಚಗೃಹಕ್ಕೆ ಮಂಜೂರಾದ 15000 ರೂ. ಹಣ ಮೊಟಕು ಮಾಡಿದ್ದಾರೆ. 1000 ಮನೆಗಳನ್ನು ನಿರ್ವಿುಸಿ ನಗರ ಮಾಡುವುದಾಗಿ ಸುಳ್ಳು ಹೇಳಿ ಚುನಾವಣೆ ಸಂದರ್ಭದಲ್ಲಿ ಬಡವರಿಂದ ಅರ್ಜಿ ಪಡೆದು ವಂಚಿಸಿದ್ದಾರೆ. ಅನಿಲಭಾಗ್ಯ ಯೋಜನೆಯಡಿ ಉಚಿತ ಗ್ಯಾಸ್ ನೀಡುವುದಾಗಿ ಸುಳ್ಳು ಹೇಳಿ ಅರ್ಜಿ ಪಡೆದು ಮೋಸ ಮಾಡಿದ್ದಾರೆ. ಬಡವರ ವೃದ್ಧಾಪ್ಯ, ವಿಧವಾ, ಅಂಗವಿಕಲ ಮಾಸಾಶನ 6 ತಿಂಗಳಿಂದ ನೀಡಿಲ್ಲ. ಹೊಸ ರಸ್ತೆಗಳನ್ನು ಅಗೆದು ಅದನ್ನು ಪೂರ್ಣಗೊಳಿಸದೇ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಗ್ರಾಮೀಣ ಉದ್ದೇಶಕ್ಕೆ ಅಂಟಿಕೊಂಡ ಪಟ್ಟಣ ಪ್ರದೇಶಗಳಿಗೆ ಅನುದಾನ ನೀಡದೇ ಅಲ್ಲಿಯ ಸ್ಥಿತಿ ಚಿಂತಾಜನಕ ಮಾಡಿದ್ದಾರೆಂದು ಆರೋಪಿಸಿದರು.

ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ: ಶಿರಸಿ ನಗರಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ನಗರ ಘಟಕ ಅಧ್ಯಕ್ಷ ಗಣಪತಿ ನಾಯ್ಕ ಗುರುವಾರ ಬಿಡುಗಡೆಗೊಳಿಸಿದ್ದಾರೆ. 6 ನೇ ವಾರ್ಡ್ ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮುಕ್ತಾ ವಸಂತ ಶೆಟ್ಟಿ, 11ನೇ ವಾರ್ಡ್​ಗೆ (ಸಾಮಾನ್ಯ) ಅರುಣ ಕೋಡ್ಕಣಿ, 13ನೇ ವಾರ್ಡ್​ಗೆ (ಪ.ಜಾ. ಮಹಿಳಾ) ನಾಗರತ್ನ ಜೋಗಳೇಕರ್, 14ನೇ ವಾರ್ಡ್(ಸಾ.ಮ.)ಗೆ ಪ್ರಿಯದರ್ಶಿನಿ ಹರೀಶ ಮುರ್ಡೆಶ್ವರ, 15ನೇ ವಾರ್ಡ್​ಗೆ (ಸಾ.ಮ.) ಹಾಲಿ ಸದಸ್ಯೆ ವೀಣಾ ಶೆಟ್ಟಿ, 23ನೇ ವಾರ್ಡ್​ಗೆ (ಸಾ.ಮ.) ಸಂಧ್ಯಾ ಗಣಪತಿ ನಾಯ್ಕ, 24ನೇ ವಾರ್ಡ್​ಗೆ (ಸಾ.) ಹಾಲಿ ಸದಸ್ಯ ರಮೇಶ ಆಚಾರಿ, 25ನೇ ವಾರ್ಡ್​ಗೆ (ಹಿಂ.ವ) ನಾಗರಾಜ ಶಂಕರ ನಾಯ್ಕ, 26ನೇ ವಾರ್ಡ್​ಗೆ (ಪ.ಜಾ) ಪರಶುರಾಮ ಲಂಬಾಣಿ, 27ನೇ ವಾರ್ಡ್​ಗೆ (ಸಾ.ಮ) ಲತಾ ರಾಮದಾಸ ಭಂಡಾರಕರ, 28ನೇ ವಾರ್ಡ್​ಗೆ (ಸಾ.) ರಮಾಕಾಂತ ಭಟ್ಟ, 29 ವಾರ್ಡ್​ಗೆ (ಸಾ.) ವಿನೋದ ಬನವಾಸಿ, 30ನೇ ವಾರ್ಡ್ (ಸಾ. ಮ.) ಶಾರದಾ ಸುರೇಶ ಶೇಟ್ ಮತ್ತು 31ನೇ ವಾರ್ಡ್​ಗೆ (ಸಾ.) ಗಣಪತಿ ಲಕ್ಷ್ಮಣ ನಾಯ್ಕ ಅವರಿಗೆ ಟಿಕೆಟ್ ಪ್ರಕಟಿಸಲಾಗಿದೆ.
14 ವಾರ್ಡ್​ಗಳಲ್ಲಿ ಸೆಣೆಸಲು ಹುರಿಯಾಳುಗಳು ಸಿದ್ಧ: ಕುಮಟಾ ಪುರಸಭೆಯ 23 ವಾರ್ಡ್​ಗಳ ಪೈಕಿ 14 ವಾರ್ಡ್​ಗಳ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶಾಸಕ ದಿನಕರ ಶೆಟ್ಟಿ ಬಿಡುಗಡೆಗೊಳಿಸಿದರು. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಶಾಸಕರು, ಪುರಸಭೆಯ 23 ವಾರ್ಡ್​ಗಳಿಂದ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಮೊದಲ ಪಟ್ಟಿಯಲ್ಲಿ 14 ಅಭ್ಯರ್ಥಿಗಳ ಹೆಸರನ್ನು ಘೊಷಣೆ ಮಾಡಿದ್ದು, ಉಳಿದ 9 ವಾರ್ಡ್​ಗಳಲ್ಲಿ ಟಿಕೆಟ್​ಗಾಗಿ ಪೂಪೋಟಿ ಜಾಸ್ತಿಯಾಗಿರುವುದರಿಂದ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು. ಅಲ್ಲದೆ ಪುರಸಭೆಯಲ್ಲಿ ಬಿಜೆಪಿ ಗೆಲುವು ಸತಸಿದ್ಧ ಎಂದರು. ಬಿಜೆಪಿ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ ಮಾತನಾಡಿ, ವಾರ್ಡ್ 1ಕ್ಕೆ ಗೀತಾ ಮಾರು ಮುಕ್ರಿ, ವಾ.ನಂ.4ಕ್ಕೆ ತುಳಸು ಬೀರಾ ಗೌಡ, ವಾ.ನಂ.5ಕ್ಕೆ ಲೀಲಾವತಿ ನಾಗೇಶ ಭಂಡಾರಿ, ವಾ.ನಂ.7ಕ್ಕೆ ಮೋಹಿನಿ ಜಿ. ಗೌಡ, ವಾ.ನಂ.8ಕ್ಕೆ ಅನುರಾಧ ಅಶೋಕ ಬಾಳೆರಿ, ವಾ.ನಂ.10ಕ್ಕೆ ಸುಶೀಲಾ ಗೋವಿಂದ ನಾಯ್ಕ, ವಾ.ನಂ.11ಕ್ಕೆ ಸೂರ್ಯಕಾಂತ ಗಣಪತಿ ಗೌಡ, ವಾ.ನಂ.12ಕ್ಕೆ ಸುಮತಿ ನಾರಾಯಣಮೂರ್ತಿ ಭಟ್ಟ, ವಾ.ನಂ.13ಕ್ಕೆ ಅಭಿ ಚಂದ್ರಹಾಸ ನಾಯ್ಕ, ವಾ.ನಂ.15ಕ್ಕೆ ಪ್ರಶಾಂತ ವೆಂಕಟೇಶ ನಾಯ್ಕ, ವಾ.ನಂ.16ಕ್ಕೆ ಪಲ್ಲವಿ ಮಡಿವಾಳ, ವಾ.ನಂ.19ಕ್ಕೆ ಮೀನಾಕ್ಷಿ ರಾಮ ಹರಿಕಂತ್ರ, ವಾ.ನಂ.22ಕ್ಕೆ ಶೈಲಾ ಮಂಜುನಾಥ ಗೌಡ, ವಾ.ನಂ.23ರಿಂದ ಮಂಜುನಾಥ ತಿಮಪ್ಪ ಮುಕ್ರಿ ಸ್ಪರ್ಧಿಸಲಿದ್ದಾರೆ ಎಂದರು. ಬಿಜೆಪಿ ಪ್ರಮುಖರಾದ ಡಾ. ಜಿ.ಜಿ. ಹೆಗಡೆ, ಮದನ್ ನಾಯಕ, ಎಂ.ಕೆ. ಭಟ್, ವಿನೋದ ಪ್ರಭು, ಪ್ರಶಾಂತ ನಾಯ್ಕ ಇತರರಿದ್ದರು.

ಹಳಿಯಾಳದಲ್ಲಿ 11 ನಾಮಪತ್ರ ಸಲ್ಲಿಕೆ: ಪುರಸಭೆಯ ವಿವಿಧ ವಾರ್ಡ್​ಗಳಿಗೆ ಗುರುವಾರ ಹನ್ನೊಂದು ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿಯಿಂದ ಎಂಟು ಹಾಗೂ ಮೂವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ: ವಾರ್ಡ್ ನಂ. 3 ನಾಗರಾಜ ಯಲ್ಲಪ್ಪ ಸಾಣಿಕೊಪ್ಪ, ವಾರ್ಡ್ ನಂ. 13 ರಾಜೇಶ್ವರಿ ಲಿಂಗರಾಜ ಹಿರೇಮಠ, ವಾರ್ಡ್ ನಂ. 14 ಉದಯ ಶ್ರೀಕಾಂತ ಹೂಲಿ, ವಾರ್ಡ್ ನಂ. 15 ಶಾಂತಾ ಎಚ್ ಹಿರೇಕರ, ವಾರ್ಡ್ ನಂ. 16 ನೀತಾ ಗೋವಿಂದ ಬಂಡಗಿ, ವಾರ್ಡ್ ನಂ. 17 ಯಲ್ಲಪ್ಪ ಮಲ್ಲಪ್ಪ ಹೊನ್ನೊಜಿ, ವಾರ್ಡ್ ನಂ. 22 ಸಂಗೀತಾ ಬಾಳು ಜಾಧವ, ವಾರ್ಡ್ ನಂ. 18 ರೂಪಾ ಅನಿಲ ಗಿರಿ ಬಿಜೆಪಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಕಣಕ್ಕೆ: ವಾರ್ಡ್ ನಂ. 7 ಪ್ರಸಾದ ಹುಣ್ಸವಾಡಕರ, ವಾರ್ಡ್ ನಂ. 12 ಶಬಾನಾ ಸೈಯ್ಯದಲಿ ಅಂಕೋಲೆಕರ, ವಾರ್ಡ್ ನಂ. 21 ಅಕ್ಬರಸಾಬ್ ಮಹಬೂಬಸಾಬ್ ಡಂಕನವಾಲೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಗುರುವಾರ 19 ನಾಮಪತ್ರ ಸಲ್ಲಿಕೆ: ಯಲ್ಲಾಪುರ ಪಟ್ಟಣ ಪಂಚಾಯಿತಿ ಚುನಾವಣೆಗೆ ಗುರುವಾರ ಒಟ್ಟು 19 ನಾಮಪತ್ರಗಳು ಸಲ್ಲಿಕೆಯಾಗಿವೆ. ಜೆಡಿಎಸ್​ನ 8 ಹಾಗೂ ಪಕ್ಷೇತರರು ಸೇರಿ ಒಟ್ಟು 19 ನಾಮಪತ್ರಗಳು ಗುರುವಾರ ಸಲ್ಲಿಕೆಯಾಗಿವೆ. ಈವರೆಗೆ ಒಟ್ಟು 20 ನಾಮಪತ್ರಗಳು ಸಲ್ಲಿಕೆಯಾಗಿವೆ. ಶುಕ್ರವಾರ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದ್ದು, ಈವರೆಗೂ ನಾಮಪತ್ರ ಸಲ್ಲಿಸದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.