ಬೆಂಗಳೂರು: ರಾಜಧಾನಿಯಲ್ಲಿ ವ್ಹೀಲಿಂಗ್ ಮಾಡುವವರಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದು, ಡಿಎಲ್, ಬೈಕ್‌ಗಳ ಆರ್‌ಸಿ ಬುಕ್ ಅಮಾನತಿಗೆ ಆರ್‌ಟಿಒಗೆ ಶಿಾರಸ್ಸು ಮಾಡಿದ್ದಾರೆ.
ನಗರದಲ್ಲಿ ಸುಗಮ ಸಂಚಾರ ಮತ್ತು ನಿರ್ವಹಣೆಗಾಗಿ ಟ್ರಾಫಿಕ್ ಪೊಲೀಸರು ಅವಿರತ ಶ್ರಮ ಪಡುತ್ತಿದ್ದಾರೆ. ಇದರ ನಡುವೆ ಕೆಲ ಪುಂಡರು ದ್ವಿಚಕ್ರ ವಾಹನ ವ್ಹೀಲಿಂಗ್ ಮಾಡುತ್ತ ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿದ್ದಾರೆ. ಅಪಾಯಕಾರಿ ಎಂದು ತಿಳಿದಿದ್ದರೂ ರೋಚಕ ಅನುಭವಕ್ಕಾಗಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
2023ರಲ್ಲಿ 216 ವ್ಹೀಲಿಂಗ್ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪ್ರಸಕ್ತ ವರ್ಷ ಜೂನ್ ಅಂತ್ಯಕ್ಕೆ 225 ಕೇಸ್ ದಾಖಲಿಸಲಾಗಿದೆ. ಅಂದರೆ ಕಳೆದ ವರ್ಷವಿಡೀ ದಾಖಲಾಗಿದ್ದ ಕೇಸ್‌ಗಳನ್ನು ಈ ವರ್ಷ ಕೇವಲ 6 ತಿಂಗಳಲ್ಲಿ ಕೇಸ್‌ಗಳು ಮೀರಿಸಿವೆ. ಹೊರವರ್ತುಲ ರಸ್ತೆಗಳು, ಏರ್‌ಪೋರ್ಟ್ ರಸ್ತೆ, ನೈಸ್ ರಸ್ತೆ, ಸುಮನಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ನೆಲಮಂಗಲ ರಸ್ತೆ ಮತ್ತು ಮೇಲುಸೇತುವೆಗಳಲ್ಲಿ ವ್ಹೀಲಿಂಗ್ ಮಾಡುವುದರ ಜೊತೆಗೆ ರೋಡ್ ರೇಜ್ ಕೃತ್ಯಗಳಲ್ಲಿ ಭಾಗಿಯಾಗಿರುವವರ ಸಾಕಷ್ಟು ಉದಾಹರಣೆಗಳಿವೆ. ಅಪ್ರಾಪ್ತರ ಕೈಗೆ ದ್ವಿಚಕ್ರ ವಾಹನ ಕೊಡುವ ಪಾಲಕರು ಮತ್ತು ವಾಹನ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ.
ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದರೆ ದ್ವಿಚಕ್ರ ಮಾಲೀಕರ ಡಿಎಲ್, ಆರ್‌ಸಿ ಬುಕ್ ರದ್ದುಪಡಿಸಲಾಗುತ್ತದೆ. ಜೂನ್ ಅಂತ್ಯಕ್ಕೆ 93 ಪ್ರಕರಣಗಳಲ್ಲಿ 26 ಮಂದಿ ಆರ್‌ಸಿ ಬುಕ್ ಅಮಾನತಿನಲ್ಲಿ ಇಡಲಾಗಿದೆ. ಇನ್ನೂ 67 ಪ್ರಕರಣಗಳಲ್ಲಿ ಆರ್‌ಸಿ ಅಮಾನತು ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ. 32 ಸವಾರರ ಡಿಎಲ್ ರದ್ದತಿ ಕೋರಿ ಆರ್‌ಟಿಒಗೆ ಶಿಾರಸ್ಸು ಮಾಡಲಾಗಿದೆ. ಈ ಪೈಕಿ 9 ಸವಾರರ ಡಿಎಲ್ ರದ್ದುಗೊಳಿಸಿದರೆ 23 ಸವಾರರ ಡಿಎಲ್ ಪರಿಶೀಲನೆ ಹಂತದಲ್ಲಿದೆ ಎಂದು ಪೂರ್ವ ವಿಭಾಗ (ಸಂಚಾರ) ಡಿಸಿಪಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.