ದ.ಕ. ಜಿಲ್ಲೆಗೆ 221 ಕಾಲುಸಂಕ ನಿರ್ಮಾಣ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುರ್ತು ಸಂದರ್ಭದ ಅಪಾಯ ಎದುರಿಸುವ ನಿಟ್ಟಿನಲ್ಲಿ ವಿಶ್ವ ಬ್ಯಾಂಕ್ ಆರ್ಥಿಕ ನೆರವಿನಡಿ 8 ಪ್ಯಾಕೇಜ್ ಕಾಮಗಾರಿಗಳಿಗೆ 23.30 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ನೆಹರು ಮೈದಾನದಲ್ಲಿ ದ.ಕ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ನದಿ, ತೋಡುಗಳನ್ನು ದಾಟಲು ಉಪಯುಕ್ತವಾಗುವಂತೆ 2018-19ನೆ ಸಾಲಿನಲ್ಲಿ 221 ಕಾಲುಸಂಕಗಳನ್ನು 30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಪ್ರಥಮ ಆದ್ಯತೆಯಡಿ 80 ಕಾಲುಸಂಕ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಬಹು ನಿರೀಕ್ಷಿತ ಪಶ್ಚಿಮ ವಾಹಿನಿ ಯೋಜನೆಗೆ 265 ಕೋಟಿ ರೂ. ಬಿಡುಗಡೆಯಾಗಿದ್ದು ಟೆಂಡರ್ ಕೊನೇ ಹಂತದಲ್ಲಿದೆ ಎಂದರು.
ಟ್ರಾಲ್ ಬೋಟ್ ಮಾಲೀಕರಿಗೆ 10000 ರೂ. ಮೌಲ್ಯದ 35 ಎಂಎಂ ಕಾಡ್‌ಎಂಡ್ ಬಲೆಗಳನ್ನು ಉಚಿತವಾಗಿ ವಿತರಿಸುವ ಯೋಜನೆ ಇದ್ದು, 400 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸಚಿವ ರಮೇಶ್ ಜಿಣಜಿಣಗಿ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಭಾಸ್ಕರ್ ಕೆ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯರಾದ ಮಮತಾ ಗಟ್ಟಿ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಜಿಪಂ ಸಿಇಒ ಸೆಲ್ವಮಣಿ, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಉಪಸ್ಥಿತರಿದ್ದರು.

ಆಕರ್ಷಕ ಮಲ್ಲಕಂಬ: ಇದೇ ಮೊದಲ ಬಾರಿಗೆ ಮೈದಾನದಲ್ಲಿ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳ ಮಲ್ಲಕಂಬ ಪ್ರದರ್ಶನ ಪ್ರೇಕ್ಷಕರನ್ನು ಆಕರ್ಷಿಸಿತು. ಗಾಜಿನ ಬಾಟಲ್‌ಗಳ ಮೇಲಿನ ಹಲಗೆಯ ಮೇಲೆ ಮಲ್ಲಕಂಭಗಳ ಮೂಲಕ ಸಾಹಸ ಪ್ರದರ್ಶನ ಮಾಡಿದರು. ನಾಲ್ಕು ಇಂಚಿನ ಕಂಬಗಳ ಮೇಲೆ ರಾಜಾಸನ, ತಾಡಾಸನ, ಮಯೂರಾಸನ ಸೇರಿದಂತೆ ವಿವಿಧ ರೀತಿಯ ಯೋಗಾಸನಗಳು ನೋಡುಗರನ್ನು ಮನರಂಜಿಸಿತು.