ರಾಜ್ಯದಲ್ಲಿ 22 ಸೀಟು ಗೆಲ್ಲಿಸಿಕೊಡಿ, 24 ಗಂಟೆಯಲ್ಲಿ ರಾಜ್ಯದಲ್ಲಿ ಅಧಿಕಾರ: ಬಿಎಸ್‌ವೈ

ಬೆಳಗಾವಿ: ರಾಜ್ಯದಲ್ಲಿ 22 ಸೀಟು ಗೆಲ್ಲಿಸಿ ಕೊಡಿ. ಆದಾದ 24 ಗಂಟೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರ ತರುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಕುಮಾರಸ್ವಾಮಿ ಅವರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಮೋದಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಏ. 18 ಮತ್ತು 23ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ. 22 ಜನ ಸಂಸದರನ್ನು ಗೆಲ್ಲಿಸಿ ಕೊಡಿ. 24 ಗಂಟೆಯಲ್ಲಿ ಈ ದರಿದ್ರ ಸರ್ಕಾರ ತೆಗೆದು ಬಿಜೆಪಿ ಸರ್ಕಾರ ತರುವ ಜವಾಬ್ದಾರಿ ನನ್ನದು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರು ಏರ್ ಸರ್ಜಿಕಲ್ ಸ್ಟ್ರೈಕ್‌ ಬಗ್ಗೆ ಲೆಕ್ಕ ಕೇಳುತ್ತಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳುತ್ತೇನೆ. ಮುಂದಿನ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರನ್ನು ಕರೆದುಕೊಂಡು ಹೋಗೋಣ. ದಾಳಿ ನಡೆಸಿದ ಬಳಿಕ ಅವರನ್ನು ವಿಮಾನದಿಂದ ಪ್ಯಾರಾಚ್ಯೂಟ್ ಮೂಲಕ ಕೆಳಗೆ ಇಳಿಸಿದರೆ ಅವರಿಗೆ ಲೆಕ್ಕಾ ಸಿಗುತ್ತದೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆ ಎಂದು ತಿರುಕನ ಕನಸ್ಸು ಕಾಣುತ್ತಿದ್ದಾರೆ. ಮೋದಿಯವರು ಭ್ರಷ್ಟಾಚಾರ ನಿಗ್ರಹ, ಅಭಿವೃದ್ಧಿ, ದೇಶದ ಗಡಿ ರಕ್ಷಣೆ, ವಿದೇಶದಲ್ಲಿ ದೇಶಕ್ಕೆ ಒಳ್ಳೆಯ ಹೆಸರು ತಂದಿದ್ದಾರೆ. ಫುಲ್ವಾಮಾ ಘಟನೆ ನಂತರ ಭಾರತವನ್ನು ಎಲ್ಲ ದೇಶಗಳು ಬೆಂಬಲಿಸಿವೆ. ಈಗಿನ ಭಾರತ ಬೆನ್ನು ಬಾಗಿಸುವ ಭಾರತವಲ್ಲ. ಸೆಟೆದು ನಿಲ್ಲುವ ಭಾರತ. ಇದು ಮೋದಿಯವರಿಂದ ಸಾಧ್ಯವಾಗಿದೆ ಎಂದರು.

ಕಾಂಗ್ರೆಸ್‌ಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಯೋಗ್ಯತೆ ಇಲ್ಲ. ಕುಮಾರಸ್ವಾಮಿ ಅವರೇ 9 ತಿಂಗಳು ಕಳೆಯಿತು. ಎಷ್ಟು ಜನರ ರೈತರ ಸಾಲಮನ್ನಾ ಮಾಡಿದ್ರಿ. ಅಪ್ಪಾ ಮಕ್ಕಳು ಕೂಡಿ ಅಧಿಕಾರಕ್ಕೆ ಯತ್ನಿಸುತ್ತಿದ್ದಾರೆ. ಕುಮಾರ ಸ್ವಾಮಿಯವರೇ ನೀವು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದೀರಿ. ನಿಮಗೆ ನಾಚಿಕೆ ಆಗಬೇಕು. ನನ್ನ ಜನಪ್ರಿಯ ಯೋಜನೆಗಳನ್ನು ರದ್ದು ಮಾಡಿದ್ದಾರೆ. ವಿಧಾನಸೌಧಲ್ಲಿ ವರ್ಗಾವಣೆ ದಂಧೆ ಮಾಡುತ್ತಿದ್ದೀರಿ ಎಂದು ಗಂಭೀರ ಆರೋಪ ಮಾಡಿದರು. (ದಿಗ್ವಿಜಯ ನ್ಯೂಸ್‌)